ಸುವರ್ಣ ಅವಕಾಶ ಹೊತ್ತು ತಂದ ಶಿಕ್ಷಣ ಮೇಳ

| Published : Jan 26 2025, 01:30 AM IST

ಸಾರಾಂಶ

ಧಾರವಾಡ ಮುಗದುಮ್ಮ ಕಲ್ಯಾಣ ಮಂಟಪದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಎರಡು ದಿನಗಳ ಸುವರ್ಣ ಶಿಕ್ಷಣ ಹೆಸರಿನ ಮೆಗಾ ಎಜುಕೇಶನ್‌ ಎಕ್ಸಪೋ ಆಯೋಜಿಸಿದೆ.

ಧಾರವಾಡ: ಯುವ ಜನತೆಯ ಉತ್ತಮ ಭವಿಷ್ಯಕ್ಕಾಗಿ ಸುವರ್ಣ ಶಿಕ್ಷಣ ಮೇಳ ಒಂದೇ ಸೂರಿನಡಿ ಅವಕಾಶಗಳನ್ನು ಹೊತ್ತು ತಂದಿದ್ದು, ವಿದ್ಯಾರ್ಥಿಗಳು ಮಾತ್ರವಲ್ಲದೇ, ಪಾಲಕರು ಹಾಗೂ ಶಿಕ್ಷಕರು ಈ ಮೇಳದ ಸಂಪೂರ್ಣ ಲಾಭ ಪಡೆಯಲು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಇಲ್ಲಿಯ ಮುಗದುಮ್ಮ ಕಲ್ಯಾಣ ಮಂಟಪದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಏರ್ಪಡಿಸಿರುವ ಎರಡು ದಿನಗಳ ಸುವರ್ಣ ಶಿಕ್ಷಣ ಹೆಸರಿನ ಮೆಗಾ ಎಜುಕೇಶನ್‌ ಎಕ್ಸಪೋವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನುಕೂಲದ ದೃಷ್ಟಿಯಿಂದ ಧಾರವಾಡದಲ್ಲಿ ಈ ಮೇಳ ಆಯೋಜಿಸಿದ್ದು ಪ್ರಸ್ತುತ. ಸಂಡೂರಿನಿಂದ 40 ಕಿಮೀ ದೂರದ ಗಣಿ ಪ್ರದೇಶದಲ್ಲಿ ಬೆಳೆದ ನಮಗೆ ಅವಕಾಶಗಳ ಕೊರತೆ ಇತ್ತು. ಆದರೆ, ತಮಗೆ ಅವಕಾಶಗಳಿದ್ದು, ಯಾವ ಶಿಕ್ಷಣ ಆಯ್ಕೆ ಮಾಡಿಕೊಳ್ಳುವ ಗೊಂದಲಗಳಿವೆ. ಸುವರ್ಣ ಮೇಳದ ಮೂಲಕ ತಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕೌಶಲ್ಯ ಅಗತ್ಯ

ಪ್ರತಿಯೊಬ್ಬರಿಗೂ ದೊಡ್ಡ ಯಶಸ್ಸು ಬೇಕಾದಲ್ಲಿ ಶಿಕ್ಷಣದ ಜೊತೆಗೆ ಆತನ ವರ್ತನೆಯೂ ಭವಿಷ್ಯ ನಿರ್ಧರಿಸುತ್ತದೆ ಎಂದ ಅವರು, ಅಂತಾರಾಷ್ಟ್ರೀಯ ಮಟ್ಟದ ಕೌಶಲ್ಯ ಮಾಪನದಲ್ಲಿ ಭಾರತೀಯರ ಕೌಶಲ್ಯ ತುಂಬ ಕಡಿಮೆ ಇದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಪಡೆದರೆ ಮಾತ್ರ ಯಶಸ್ವಿ ಜೀವನ ಸಾಗಿಸಲು ಸಾಧ್ಯ ಎಂದರು.

ಮನೆ ಬಾಗಿಲಿಗೆ ಅವಕಾಶ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಪಾದಕ ಅಜಿತ ಹನಮಕ್ಕನವರ ಮಾತನಾಡಿ, ನಾವು ಕಲಿಯುವಾಗ ಶಿಕ್ಷಣದ ಅವಕಾಶಗಳ ಬಗ್ಗೆ ಮಾಹಿತಿಯೇ ಇರುತ್ತಿರಲಿಲ್ಲ. ಉತ್ತಮ ಕಾಲೇಜುಗಳ ಪ್ರಾಸ್ಪೆಕ್ಟಸ್ ಹುಡುಕಾಡುವ ಕಾಲವಿತ್ತು. ನಿಮ್ಮ ಹಣೆ ಬರಹ ಚೆನ್ನಾಗಿದ್ದು ನೀವಿದ್ದಲ್ಲಿಯೇ ಶಿಕ್ಷಣ ಸಂಸ್ಥೆಗಳು ಪಾಳಿ ಹಚ್ಚಿ ಬಂದಿವೆ. ಬದಲಾದ ಕಾಲಘಟ್ಟದಲ್ಲಿ ಶಿಕ್ಷಣದ ಅರ್ಥ ಬದಲಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳು ಮನೆ ಬಾಗಿಲಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಮೊದಲ ಬಾರಿಗೆ ಬೆಂಗಳೂರು ಬಿಟ್ಟು ವಿದ್ಯಾಕಾಶಿ ಧಾರವಾಡದಲ್ಲಿ ಶಿಕ್ಷಣದ ಈ ವಾತಾವರಣ ಸೃಷ್ಟಿಸಿದ್ದು ಹೆಮ್ಮೆ ಎನಿಸುತ್ತಿದೆ. ನಮ್ಮ ಕರೆಗೆ ಓಗೊಟ್ಟು ಸಾಕಷ್ಟು ವಿಶ್ವವಿದ್ಯಾಲಯ, ಕಾಲೇಜುಗಳು ಬಂದು ಶಿಕ್ಷಣದ ಮಾಹಿತಿ ನೀಡುತ್ತಿವೆ ಎಂದರು.

ಶಿಕ್ಷಣದಿಂದ ಬದಲಾವಣೆ

ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಮಾತನಾಡಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದ್ದು, ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಸಹ ಇಂತಹ ಮೇಳಗಳ ಮೂಲಕ ಕೈ ಜೋಡಿಸಿದ್ದು ಶ್ಲಾಘನೀಯ. ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಂಬಿದ್ದೇನೆ. ಸಮಾಜಕ್ಕೆ ಸರಿಯಾಗಿ ಅವಕಾಶಗಳ ಆಯ್ಕೆ ಮಾಡಿಕೊಂಡರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪಾಲಕರು ಸುವರ್ಣ ಮೇಳದ ಲಾಭ ಪಡೆಯರಿ ಎಂದು ಹಾರೈಸಿದರು.

ಚಿತ್ರನಟಿ ಶರಣ್ಯಾ ಶೆಟ್ಟಿ, ಸ್ವರ್ಣಾ ಸಮೂಹ ಸಂಸ್ಥೆಯ ಡಾ.ವಿಎಸ್‌ವಿ ಪ್ರಸಾದ, ರಂಗಕರ್ಮಿ ಯಶವಂತ ಸರದೇಶಪಾಂಡೆ, ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ, ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ ವೇದಿಕೆಯಲ್ಲಿದ್ದರು. ಇದ್ದರು. ಸುವರ್ಣ ನ್ಯೂಸ್‌ ರಾಜಕೀಯ ವಿಶ್ಲೇಷಕ ಪ್ರಶಾಂತ್‌ ನಾತು ವಂದಿಸಿದರು.ಶಿಕ್ಷಕರು, ಪಾಲಕರು ಬರಲಿ..

ಸುವರ್ಣ ಮೇಳದಿಂದ ವಿದ್ಯಾರ್ಥಿಗಳ ಜೊತೆಗೆ ಪಾಲಕರು ಹಾಗೂ ಶಿಕ್ಷಕರಿಗೂ ತುಂಬಾ ಅನುಕೂಲವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಳಕ್ಕೆ ಆಗಮಿಸಿ ತಮ್ಮ ಮಕ್ಕಳು ಭವಿಷ್ಯದಲ್ಲಿ ಏನಾಗಬೇಕು ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು. ಸುವರ್ಣ ಮೇಳ ಯಶಸ್ವಿಯಾಗಲಿ.

- ಸಂತೋಷ ಲಾಡ್‌, ಕಾರ್ಮಿಕ ಇಲಾಖೆ ಸಚಿವರು

ಆತ್ಮವಿಶ್ವಾಸವಿರಲಿ..

ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಪ್ರತಿಭೆಯ ಕೊರತೆ ಇಲ್ಲ. ಆದರೆ, ಆತ್ಮವಿಶ್ವಾಸವಿಲ್ಲ. ಬದಲಾದ ಕಾಲದಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯ ಹಾಗೂ ಆತ್ಮವಿಶ್ವಾಸದ ನಡೆ ಬೇಕು. ಉತ್ತಮ ವರ್ತನೆ, ಸಾಮಾನ್ಯ ಜ್ಞಾನ, ಕೌಶಲ್ಯಗಳಿದ್ದರೆ ಅಂಕಗಳು, ಜಾತಿ ಲೆಕ್ಕಕ್ಕೆ ಬರುವುದಿಲ್ಲ.

-ಅಜಿತ ಹನಮಕ್ಕನವರ, ಸುವರ್ಣ ನ್ಯೂಸ್‌ ಸಂಪಾದಕ.ಅವಕಾಶ ತಂದ ಸುವರ್ಣ ಮೇಳ

ಬರೀ ಉದ್ಯೋಗದ ಉದ್ದೇಶದಿಂದ ಮಾತ್ರ ಶಿಕ್ಷಣ ಅಲ್ಲದೇ ಆತ್ಮವಿಶ್ವಾಸ, ಶಿಸ್ತು, ಜೀವನ ಕಲೆ ಕಲಿಸುವ ಕಲೆಯೂ ಹೌದು. ಈ ನಿಟ್ಟಿನಲ್ಲಿ ಸುವರ್ಣ ಮೇಳ ಹಲವಾರು ಶಿಕ್ಷಣದ ಅವಕಾಶಗಳನ್ನು ಹೊತ್ತು ತಂದಿದೆ.

-ಶರಣ್ಯಾ ಶೆಟ್ಟಿ, ಚಿತ್ರನಟಿ

ಕಿಚ್ಚಿನಿಂದ ಸಾಧಿಸಿ..

ಪುಸ್ತಕ, ಪಠ್ಯ, ಪರೀಕ್ಷೆ, ಫಲಿತಾಂಶ ಹಾಗೂ ಪ್ರಮಾಣಪತ್ರವೇ ಶಿಕ್ಷಣವಾಗಿದೆ. ವಿದ್ಯಾರ್ಥಿಯ ಸಾಮರ್ಥ್ಯ ಪರೀಕ್ಷಿಸಿ ತಕ್ಕಂತೆ ಶಿಕ್ಷಣ ನೀಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜೊತೆಗೆ ಪ್ರತಿಯೊಬ್ಬರಿಗೂ ಕಣ್ಣೀರು, ಬಡತನ, ಅವಮಾನ ಹಾಗೂ ಸೋಲು ವರವಾಗಿರುತ್ತವೆ. ಅವು ನಿಮ್ಮನ್ನು ಬೆಂಕಿಯಾಗಿ ಸುಡುತ್ತಿದ್ದರೆ ಅದೇ ಕಿಚ್ಚಿನಿಂದ ಸಾಧನೆ, ಯಶಸ್ಸು ಪಡೆಯಬೇಕು. ಪರಿಸ್ಥಿತಿಯ ಬದಲಾವಣೆಗಿಂತ ನಿಮ್ಮ ಮನಸ್ಥಿತಿ ಬದಲಾಯಿಸಿ ಜೀವನ ಸುಧಾರಿಸಿಕೊಳ್ಳಬೇಕು.

-ಮಹೇಶ ಮಾಶಾಳ, ವಾಗ್ಮಿ