ಸಾರಾಂಶ
ಶಿವರಾತ್ರೀಶ್ವರ ರಥಯಾತ್ರೆಗೆ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಮುರುಘರಾಜೇಂದ್ರಸ್ವಾಮಿ ಚಾಲನೆ
ಕನ್ನಡಪ್ರಭ ವಾರ್ತೆ, ಚಾಮರಾಜನಗರಸುತ್ತೂರು ಶ್ರೀ ಕ್ಷೇತ್ರದಲ್ಲಿ ಫೆ.೬ ರಿಂದ ಫೆ.೧೧ ರವರೆಗೆ ನಡೆಯಲಿರುವ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಜಾತ್ರೆಯಾಗಿದೆ ಎಂದು ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಹೇಳಿದರು.ಜಿಲ್ಲಾ ಕೇಂದ್ರ ಚಾಮರಾಜನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಗಳ ಆವರಣಕ್ಕೆ ಆಗಮಿಸಿದ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಪ್ರಚುರಪಡಿಸುವ ಶಿವರಾತ್ರೀಶ್ವರ ರಥಯಾತ್ರೆಯನ್ನು ಸ್ವಾಗತಿಸಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ನಂಜನಗೂಡು ತಾಲೂಕಿನ ಸುತ್ತೂರು ಕ್ಷೇತ್ರದಲ್ಲಿ ಜನವರಿ ತಿಂಗಳಲ್ಲಿ ೬ ದಿನಗಳ ಕಾಲ ನಡೆಯಲಿರುವ ವೈಭವದ ಜಾತ್ರೆಗೆ ಪ್ರತಿಯೊಬ್ಬರು ತಪ್ಪದೇ ಭಾಗವಹಿಸಿ, ಜಾತ್ರೆಯಲ್ಲಿ ನಡೆಯುವ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತ ಹಾಗೂ ಯುವ ಸಮುದಾಯಕ್ಕೆ ಬೇಕಾದ ಅಗತ್ಯ ಮಾಹಿತಿ ಪಡೆಯಿರಿ ಎಂದರು.ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳಿಗೆ ಹೆಚ್ಚು ಒತ್ತು ನೀಡಿ, ಸಮಾಜದ ಎಲ್ಲ ವರ್ಗದ ಜನರನ್ನು ಆಕರ್ಷಿಸಲು ಜನಪದ ಸಂಸ್ಕೃತಿ ಹಾಗೂ ಆಧುನಿಕ ಬದುಕಿನ ಅಗತ್ಯತೆಯನ್ನು ಈ ಜಾತ್ರೆಯಲ್ಲಿ ಸಮನ್ವಯಗೊಳಿಸಲಾಗುತ್ತದೆ ಎಂದರು. ಹರವೆ ವಿರಕ್ತ ಮಠದ ಸರ್ಪಭೂಷಣಸ್ವಾಮೀಜಿ ಮಾತನಾಡಿ ಜಾತ್ರೆಯಲ್ಲಿ ಭಜನಾಮೇಳ, ಕುಸ್ತಿ ಪಂದ್ಯಾವಳಿ, ದನಗಳ ಜಾತ್ರೆ, ಸಾಮೂಹಿಕ ವಿವಾಹ, ವಸ್ತು ಪ್ರದರ್ಶನ, ದೇಸಿ ಆಟಗಳು, ಗ್ರಾಮೀಣ ಕಲೆಗಳಾದ ಸೋಬಾನೆ ಪದ, ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗೆ ಗಾಳಿಪಟವನ್ನು ಆಯೋಜಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.ಶಾಸಕ ಸಿ.ಪುಟ್ಟರಂಗಶೆಟ್ಟಿ, ಮುಖಂಡ ಎಂ.ರಾಮಚಂದ್ರ ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ, ಆರ್.ಎಂ. ಸ್ವಾಮಿ, ಪ್ರಾಂಶುಪಾಲ ಸಿದ್ದರಾಜು, ಮುಖಂಡರಾದ ಬಿ.ಕೆ. ರವಿಕುಮಾರ್, ಮೂಡ್ಲುಪುರ ನಂದೀಶ್, ಎ.ಎಸ್. ಗುರುಸ್ವಾಮಿ, ಮಹಮ್ಮದ್ ಅಸ್ಗರ್ ಮುನ್ನಾ, ನಾಗೇಂದ್ರ (ಪುಟ್ಟು) ಪುಟ್ಟ,ಮಲ್ಲಪ್ಪ, ಮಹದೇವಸ್ವಾಮಿ, ವಸಂತಮ್ಮ, ಚಿನ್ನಮ್ಮ, ರತ್ಮಮ್ಮ, ಸಿದ್ದಮಲ್ಲಪ್ಪ, ಗುರುಸ್ವಾಮಿ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಮೈಸೂರಿನಿಂದ ಹೊರಟಿರುವ ರಥವು ೮ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಮೈಸೂರು, ಚಾಮರಾಜನಗರ, ತಮಿಳುನಾಡಿನ ಸತ್ತಿ, ಬೆಂಗಳೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಇತರೆ ಜಿಲ್ಲೆಗಳ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಸಂಚರಿಸಿ ಭಕ್ತರನ್ನು ಜಾತ್ರೆಗೆ ಆಹ್ವಾನಿಸಲಿದೆ.