ರೈತ ದಂಪತಿ ಕೈ ಹಿಡಿದ ಪೇರಲ!

| Published : Dec 19 2024, 12:32 AM IST

ಸಾರಾಂಶ

ಮನಸ್ಸು ಮಾಡಿದರೆ ಬರಡು ಭೂಮಿಯಲ್ಲೂ ಬಂಗಾರದ ಬೆಳೆ ತೆಗೆದು ಕೈತುಂಬಾ ಆದಾಯ ಗಳಿಸಿ ನೆಮ್ಮದಿಯ ಜೀವನ ನಡೆಸಬಹುದು ಎಂಬುದಕ್ಕೆ ಕೊಪ್ಪಳ ಜಿಲ್ಲೆಯ ರೈತ ದಂಪತಿಯೊಬ್ಬರು ಸಾಕ್ಷಿಯಾಗಿದ್ದಾರೆ.

ಈ ಸಾಧನೆ ಮಾಡಿ ಮಾದರಿಯಾದ ರೈತ ದಂಪತಿ । ಉತ್ತಮ ಆದಾಯಎಂ.ಪ್ರಹ್ಲಾದ್

ಕನ್ನಡಪ್ರಭ ವಾರ್ತೆ ಕನಕಗಿರಿ

ಮನಸ್ಸು ಮಾಡಿದರೆ ಬರಡು ಭೂಮಿಯಲ್ಲೂ ಬಂಗಾರದ ಬೆಳೆ ತೆಗೆದು ಕೈತುಂಬಾ ಆದಾಯ ಗಳಿಸಿ ನೆಮ್ಮದಿಯ ಜೀವನ ನಡೆಸಬಹುದು ಎಂಬುದಕ್ಕೆ ಕೊಪ್ಪಳ ಜಿಲ್ಲೆಯ ರೈತ ದಂಪತಿಯೊಬ್ಬರು ಸಾಕ್ಷಿಯಾಗಿದ್ದಾರೆ.!

ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಪಂ ವ್ಯಾಪ್ತಿಯ ಕನಕಾಪುರ ಗ್ರಾಮದ ರೈತರಾದ ಮರಿಯಪ್ಪ ಹುಗ್ಗಿ ಹಾಗೂ ಪತ್ನಿ ಶರಣಮ್ಮ ಈ ಸಾಧನೆ ಮಾಡಿ ಮಾದರಿ ರೈತ ದಂಪತಿ ಎನಿಸಿಕೊಂಡಿದ್ದಾರೆ. ಸುಮಾರು ವರ್ಷಗಳಿಂದ ತಮ್ಮ ಬರಡು ಭೂಮಿಯಲ್ಲಿ ಮಳೆಯಾಶ್ರಿತ ಬೆಳೆಗಳಾದ ಸಜ್ಜೆ, ತೊಗರಿ, ನವಣೆ, ಮೆಕ್ಕೆಜೋಳ ಬೆಳೆಯುತ್ತಿದ್ದರು.

ಆದರೆ, ಅದರಿಂದ ಅವರಿಗೆ ನಿರೀಕ್ಷಿತ ಆದಾಯ ಸಿಗುತ್ತಿರಲಿಲ್ಲ. ಏನಾದರೂ ಮಾಡಬೇಕೆನ್ನುವ ಛಲ ಹುಟ್ಟಿಕೊಂಡಿದ್ದರಿಂದ ರೈತ ದಂಪತಿಗಳು ಯೋಚಿಸಿ ಖಾತ್ರಿಯಡಿ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ.

ಕಳೆದ ವರ್ಷ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದ ರೈತ ಮರಿಯಪ್ಪ ಹುಗ್ಗಿ ನರೇಗಾ ಯೋಜನೆಯಡಿ ತಮಗೆ ಪೇರಲ ಬೆಳೆಯಲು ಉತ್ಸುಕನಾಗಿರುವ ಬಗ್ಗೆ ತಿಳಿಸಿದಾಗ ತೋಟಗಾರಿಕೆ ಇಲಾಖೆಯವರು ಮರಿಯಪ್ಪ ಅವರ ತೋಟಗಾರಿಕಾ ಕೃಷಿಗೆ ಬೆನ್ನೆಲುಬಾಗಿ ನಿಂತರು. ತಮ್ಮ ಎರಡು ಎಕರೆ ಜಮೀನಿನಲ್ಲಿ ತೈವಾನ್ ತಳಿಯ 500ಕ್ಕೂ ಹೆಚ್ಚು ಪೇರಲ ಸಸಿಗಳನ್ನು ನಾಟಿ ಮಾಡಿದ್ದರು. ಸದ್ಯ ಎಲ್ಲಾ ಸಸಿಗಳು ದೊಡ್ಡದಾಗಿ ಬೆಳೆದಿದ್ದು, ಪ್ರತಿ ಗಿಡದಲ್ಲಿ 10ರಿಂದ 15 ಕೆಜಿಯಷ್ಟು ಫಲ ದೊರೆಯುತ್ತಿದೆ.

ಕಳೆದ ಎಂಟು ತಿಂಗಳಿಂದ ಈಗಾಗಲೇ ಐದು ಬಾರಿ ಹಣ್ಣನ್ನು ಕಟಾವು ಮಾಡಲಾಗಿದ್ದು, ಇಲ್ಲಿಯವರೆಗೂ ಎರಡು ಸಾವಿರ ಕ್ವಿಂಟಲ್‌ ಹಣ್ಣನ್ನು ಮಾರಾಟ ಮಾಡಿದ್ದಾರೆ.

ಎಂಟು ತಿಂಗಳಿಗೆ ₹6 ಲಕ್ಷ ಆದಾಯ ಗಳಿಸಿದ್ದು, ಸದ್ಯ 15 ದಿನಗಳಿಗೊಮ್ಮೆ ಹಣ್ಣನ್ನು ಕಟಾವು ಮಾಡುತ್ತಿದ್ದಾರೆ. ಒಂದು ಬಾಕ್ಸ್‌ನಲ್ಲಿ 20 ಕೆಜಿ ಹಣ್ಣಿನಂತೆ 100 ಬಾಕ್ಸ್‌ನಷ್ಟು ಫಲ ಸಿಗುತ್ತಿದ್ದು, ಕೆಜಿಗೆ ₹30ನಂತೆ ಸಮೀಪದ ಗಂಗಾವತಿ ಮಾರುಕಟ್ಟೆಗೆ ಹಣ್ಣನ್ನು ಕಳುಹಿಸಿ ಕೊಡಲಾಗುತ್ತಿದೆ.

ಒಟ್ಟಾರೆ ಮಳೆಯಾಶ್ರಿತ ಬೆಳೆಗಳಿಂದ ನಿರೀಕ್ಷಿತ ಲಾಭ ಗಳಿಸದೆ ಪರದಾಡುತ್ತಿದ್ದ ರೈತ ಮರಿಯಪ್ಪ ನರೇಗಾದಡಿ ತೋಟಗಾರಿಕಾ ಬೆಳೆಯನ್ನು ಬೆಳೆದು ಉತ್ತಮ ಆದಾಯ ಗಳಿಸಿದ್ದಾರೆ. ಜೊತೆಗೆ ಇತರೆ ರೈತರಿಗೂ ತೋಟಗಾರಿಕಾ ಬೆಳೆ ಬೆಳೆಯಲು ಮಾರ್ಗದರ್ಶನ ಮಾಡುತ್ತಿದ್ದಾರೆ.

ರೈತರು ಸಾಂಪ್ರದಾಯಿಕ ಕೃಷಿಯಲ್ಲಿ ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಅಧಿಕ ಇಳುವರಿ ದೊರೆಯದೆ ಅನೇಕ ಸಂದರ್ಭಗಳಲ್ಲಿ ನಷ್ಟಕ್ಕೆ ಒಳಗಾಗುತ್ತಾರೆ. ಹಾಗಾಗಿ ತೋಟಗಾರಿಕೆ, ಕೃಷಿ, ಅರಣ್ಯ ಹಾಗೂ ರೇಷ್ಮೆ ಕೃಷಿಯನ್ನು ಮಾಡುವ ಮೂಲಕವೂ ಅಧಿಕ ಆದಾಯ ಗಳಿಸಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರು ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸಬಲರಾಗಬೇಕು ಎಂದು ಕನಕಗಿರಿ ತಾಪಂ ಇಒ ರಾಜಶೇಖರ ತಿಳಿಸಿದ್ದಾರೆ.