ಸಾರಾಂಶ
ತಾಲೂಕಿನ ತೆಕ್ಕಟ್ಟೆಯ ರಮೇಶ್ ನಾಯಕ್, ಕೇಂದ್ರ ಸರ್ಕಾರದ ಬಿಲಿಯೇನರ್ ರೈತ ಪ್ರಶಸ್ತಿಗೆ ಆಯ್ಕೆಯಾದ ಕೃಷಿಕ. ತೆಕ್ಕಟ್ಟೆಯಲ್ಲಿ ರೈಸ್ ಮಿಲ್ ನಡೆಸುವ ಜೊತೆಗೆ ಪ್ರಗತಿಪರ ಕೃಷಿಯಲ್ಲಿ ತೊಡಗಿಕೊಂಡು ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ ಬೆನ್ನೆಲುಬಾಗಿ ನಿಂತು ವಾರ್ಷಿಕ ಸುಮಾರು ಕೋಟಿ ರು.ಗೂ ಅಧಿಕ ವಹಿವಾಟು ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಂದಾಪುರ
ವೈವಿಧ್ಯಮಯ ಕೃಷಿಯಲ್ಲಿ ತೊಡಗಿಕೊಂಡ ಪ್ರಗತಿಪರ ಕೃಷಿಕನೋರ್ವ ವಾರ್ಷಿಕ ಸುಮಾರು ಕೋಟಿ ರು. ಅಧಿಕ ವಹಿವಾಟು ನಡೆಸುವ ಮೂಲಕ ಕೇಂದ್ರ ಸರ್ಕಾರದ ಬಿಲಿಯೇನರ್ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾಲೂಕಿನ ತೆಕ್ಕಟ್ಟೆಯ ರಮೇಶ್ ನಾಯಕ್, ಕೇಂದ್ರ ಸರ್ಕಾರದ ಬಿಲಿಯೇನರ್ ರೈತ ಪ್ರಶಸ್ತಿಗೆ ಆಯ್ಕೆಯಾದ ಕೃಷಿಕ. ತೆಕ್ಕಟ್ಟೆಯಲ್ಲಿ ರೈಸ್ ಮಿಲ್ ನಡೆಸುವ ಜೊತೆಗೆ ಪ್ರಗತಿಪರ ಕೃಷಿಯಲ್ಲಿ ತೊಡಗಿಕೊಂಡು ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ ಬೆನ್ನೆಲುಬಾಗಿ ನಿಂತು ವಾರ್ಷಿಕ ಸುಮಾರು ಕೋಟಿ ರು.ಗೂ ಅಧಿಕ ವಹಿವಾಟು ನಡೆಸಿದ್ದಾರೆ. ಇದೇ ಡಿ.7ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಮೇಶ್ ನಾಯಕ್ ಅವರು ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ 13 ಎಕರೆ ಜಾಗದಲ್ಲಿ 11 ಜಾತಿಯ, ಸುಮಾರು 1,634 ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಸಲು ಕಂಡುಕೊಳ್ಳುವ ಮೂಲಕ ನಿಸರ್ಗ ಕೃಷಿಪ್ರೇಮ ಮೆರೆದು ಜಿಲ್ಲೆಯ ಕೃಷಿಕರಿಗೆ ಮಾದರಿಯಾಗಿದ್ದಾರೆ. ಇಂಗು ಗುಂಡಿಯಿಂದ ತೆಗೆಯಲಾದ ಮಣ್ಣನ್ನು ಉಪಯೋಗಿಸಿ 30 ಸಾವಿರ ಅನಾನಸ್ ಗಿಡಗಳನ್ನು ನಾಟಿ ಮಾಡಲಾಗಿದ್ದು, 2 ಗಿಡಗಳ ಮಧ್ಯದಲ್ಲಿ ಪಪ್ಪಾಯಿ ಗಿಡಗಳನ್ನು ಅಂತರದ ಬೆಳೆಯಾಗಿ ಬೆಳೆಸಿದ್ದಾರೆ. ಈ ನಡುವೆ ಡೆಂಗ್ ಸೂರ್ಯ, ಪ್ರಕಾಶ್ಚಂದ್ರ, ವಿಯೆಟ್ನಾಂ ಸೂಪರ್ ಅರ್ಲಿ, ಸಿಂಗಾಪುರ, ಅತ್ತಾವರ ಜಾತಿಯ ಸುಮಾರು 285 ಹಲಸು ಹಾಗೂ 500 ಡ್ರ್ಯಾಗನ್ ಫ್ರುಟ್ ಸೇರಿದಂತೆ ಒಟ್ಟು 1,634 ವಿವಿಧ ಜಾತಿಯ ಹಣ್ಣಿನ ಗಿಡಗಳು ಇವರ ತೋಟದಲ್ಲಿ ಮೈದಳೆದು ನಿಂತಿವೆ.