ಸೊರಬದಲ್ಲಿ ರೈತ ಸಂಘ ಸತ್ಯಾಗ್ರಹದಲ್ಲಿ ಕುಸಿದುಬಿದ್ದ ರೈತ ಮುಖಂಡ

| Published : Feb 28 2024, 02:40 AM IST / Updated: Feb 28 2024, 01:18 PM IST

ಸೊರಬದಲ್ಲಿ ರೈತ ಸಂಘ ಸತ್ಯಾಗ್ರಹದಲ್ಲಿ ಕುಸಿದುಬಿದ್ದ ರೈತ ಮುಖಂಡ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಮತ್ತು ಬಗರ್‌ಹುಕುಂ ರೈತರಿಗೆ ನೋಟಿಸ್‌ ನೀಡಿ, ಒಕ್ಕಲೆಬ್ಬಿಸುವ ಕ್ರಮ ಖಂಡಿಸಿ  ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ರೈತ ಮುಖಂಡನೊಬ್ಬ ನಿತ್ರಾಣದಿಂದ ಕುಸಿದುಬಿದ್ದ ಘಟನೆ ಮಂಗಳವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಸೊರಬ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಮತ್ತು ಬಗರ್‌ಹುಕುಂ ರೈತರಿಗೆ ನೋಟಿಸ್‌ ನೀಡಿ, ಒಕ್ಕಲೆಬ್ಬಿಸುವ ಕ್ರಮ ಖಂಡಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ 2 ದಿನಗಳಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ರೈತ ಮುಖಂಡನೊಬ್ಬ ನಿತ್ರಾಣದಿಂದ ಕುಸಿದುಬಿದ್ದ ಘಟನೆ ಮಂಗಳವಾರ ನಡೆಯಿತು. 

ಅಲ್ಲದೇ, ಸಂಜೆ ಜಿಲ್ಲಾಧಿಕಾರಿ ಭರವಸೆ ಮೇರೆಗೆ ರೈತರ ಸತ್ಯಾಗ್ರಹ ಅಂತ್ಯಗೊಳಿಸಲಾಯಿತು. ಸಂಘದ ರಾಜ್ಯ ಸಂಚಾಲಕ ಉಮೇಶ್ ಪಾಟೀಲ್ ಪ್ರತಿಭಟನೆ, ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. 

ಸಂಜೆ ೫ ಗಂಟೆ ಸುಮಾರಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾಗರ ಉಪವಿಭಾಗಾಧಿಕಾರಿ ಆರ್. ಯತೀಶ್ ಅವರಿಗೆ ರೈತ ಸಂಘದ ಪದಾಧಿಕಾರಿಗಳು ಬೇಡಿಕೆಗಳ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಎಸಿ ಯತೀಶ್‌ ಮಾತನಾಡಿ, ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ರೈತರ ಸಮಸ್ಯೆಗಳ ಕೂಲಂಕೂಷ ವರದಿ ತಯಾರಿಸುವಂತೆ ತಹಸೀಲ್ದಾರ್ ಹುಸೇನ್ ಸರಕಾವಸ್ ಅವರಿಗೆ ಸೂಚಿಸಿದರು. 

ಆದರೆ ಇದನ್ನು ಒಪ್ಪದ ರೈತರ ಮುಖಂಡರು, ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಖುದ್ದು ಆಗಮಿಸಬೇಕು ಎಂದು ಪಟ್ಟುಹಿಡಿದರು. ಅನಂತರ ದೂರವಾಣಿ ಮೂಲಕ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರನ್ನು ಸಂಪರ್ಕಿಸಲಾಯಿತು. 

ಆಗ ಮಾರ್ಚ್ ೫ರಂದು ಪಟ್ಟಣದಲ್ಲಿ ರೈತರ ಸಭೆ ಕರೆಯುವುದಾಗಿ ಡಿಸಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ, ಸತ್ಯಾಗ್ರಹ ಹಿಂಪಡೆಯಲಾಯಿತು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ. ಮಂಜುನಾಥಗೌಡ ನಿಸರಾಣಿ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಮುಖಂಡರಾದ ಮಂಜುನಾಥ ಆರೇಕೊಪ್ಪ, ಮೇಘರಾಜ್, ಶಿವಪ್ಪ ಹುಣಸವಳ್ಳಿ, ಹುಚ್ಚಪ್ಪ ತಳೇಬೈಲು, ಪರಮೇಶ ಉಳವಿ, ಬಾಷಾ ಸಾಬ್, ಹನುಮಂತಪ್ಪ ಬಾವಿಕಟ್ಟೆ, ಯೋಗೇಶ್ ಕುಂದಗಸವಿ, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

ಸತ್ಯಾಗ್ರಹದಲ್ಲಿ ಕುಸಿದುಬಿದ್ದ ರೈತ ಮುಖಂಡ: ಕಳೆದ ಎರಡು ದಿನಗಳಿಂದ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ಉಳವಿ ಹೋಬಳಿ ಘಟಕದ ಅಧ್ಯಕ್ಷ ಹುಚ್ಚಪ್ಪ ತಳೇಬೈಲು ಮಂಗಳವಾರ ಮಧ್ಯಾಹ್ನ ೩ ಗಂಟೆ ಸುಮಾರಿಗೆ ನಡೆದ ಪ್ರತಿಭಟನೆ ಸ್ಥಳದಲ್ಲಿ ಅಸ್ವಸ್ಥರಾಗಿ ಕುಸಿದರು. 

ಆಹಾರ, ನೀರು ಸೇವಿಸದ ಕಾರಣ ನಿತ್ರಾಣರಾಗಿ ಕುಸಿದುಬಿದ್ದು ಪ್ರಜ್ಞಾಹೀನರಾಗಿದ್ದ ಹುಚ್ಚಪ್ಪ ಅವರನ್ನು ತಕ್ಷಣ ಸೊರಬ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಸೊರಬ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ಸು ಪಡೆಯುಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಾಗರ ಎಸಿ ಆರ್. ಯತೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸೊರಬ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ಸು ಪಡೆಯುಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದ ವೇಳೆ ಉಳವಿ ಹೋಬಳಿ ಘಟಕದ ಅಧ್ಯಕ್ಷ ಹುಚ್ಚಪ್ಪ ನಿತ್ರಾಣರಾಗಿ ಕುಸಿದರು.