ಜನಪದ ಸಾಹಿತ್ಯದಲ್ಲಿ ರೈತನ ಬದುಕು: ಮೈಸೂರು ಕೃಷ್ಣಮೂರ್ತಿ

| Published : Mar 25 2024, 12:48 AM IST

ಸಾರಾಂಶ

ಸಕಲೇಶಪುರದಲ್ಲಿ ನಡೆಯುತ್ತಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು ಎಂಬ ವಿಚಾರವಾಗಿ ಸಾಹಿತಿ ಮೈಸೂರು ಕೃಷ್ಣಮೂರ್ತಿ ಮಾತನಾಡಿದರು.

ಜನಪದ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು ಕುರಿತು ಹೇಳಿಕೆ ಕನ್ನಡಪ್ರಭ ವಾರ್ತೆ ಸಕಲೇಶಪುರ

ಕಥೆ, ಗಾದೆ, ಗಾಯನದಂತಹ ಎಲ್ಲ ಪ್ರಕಾರಗಳಲ್ಲೂ ರೈತಪರ ಚಿಂತನೆಗಳು ಮೂಡಿಬಂದಿರುವುದು ಸ್ಪಷ್ಟವಾಗುತ್ತದೆ. ರೈತನ ಸವಾಲು, ಸಂಕಟಗಳನ್ನು ಜನಪದ ಸಾಹಿತ್ಯ ರಾಶಿಯಲ್ಲಿ ಕಾಣಬಹುದಾಗಿದೆ ಎಂದು ಸಾಹಿತಿ ಮೈಸೂರು ಕೃಷ್ಣಮೂರ್ತಿ ಹೇಳಿದರು.

ಇಲ್ಲಿ ನಡೆಯುತ್ತಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು ಎಂಬ ವಿಚಾರವಾಗಿ ಮಾತನಾಡಿ, ಬೇರೆ ಬೇರೆ ಪ್ರಕಾರಗಳಲ್ಲಿ ಜನಪದ ಸಾಹಿತ್ಯ ವಿಭಜನೆಗೊಂಡಿದೆ. ಕಥೆ, ಗಾದೆ, ಗಾಯನದಂತಹ ಎಲ್ಲ ಪ್ರಕಾರಗಳಲ್ಲೂ ರೈತಪರ ಚಿಂತನೆಗಳು ಮೂಡಿಬಂದಿರುವುದು ಸ್ಪಷ್ಟವಾಗುತ್ತದೆ. ರೈತನ ಸವಾಲು, ಸಂಕಟಗಳನ್ನು ಜನಪದ ಸಾಹಿತ್ಯ ರಾಶಿಯಲ್ಲಿ ಕಾಣಬಹುದಾಗಿದೆ. ರೈತರ ಮೇಲೆ ಅನಾದಿಕಾಲದಿಂದ ನಡೆದಿರುವ ಶೋಷಣೆಗಳನ್ನು ಜನಪದ ಸಾಹಿತ್ಯ ಪ್ರಕಾರಗಳಾದ ಲಾವಣಿಯಲ್ಲಿ ಕಾಣಬಹುದಾಗಿದೆ. ಕೃಷಿಕನಾಗದ ಯಾವುದೇ ವ್ಯಕ್ತಿ ಏನೂ ಆಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಬಂಗಾರದ ಮನುಷ್ಯ ಎಂಬ ಕಲ್ಪನೆ ಬಂದಿದ್ದೆ ಹೊನ್ನ ಬೆಳೆಯುವ ರೈತನಿಂದ ಎಂಬ ಅರಿವು ಇರಬೇಕು. ಕನ್ನಡದಲ್ಲಿ ರಚನೆಯಾದ ಸಾಹಿತ್ಯವನ್ನು ಕೃಷಿಗೆ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಭಾಷಾ ಸಂಪತ್ತಿಗೆ ಕೃಷಿಕರ ಕೊಡುಗೆ ವಿಚಾರವಾಗಿ ಡಾ.ಅ.ಪ.ರಕ್ಷಿತ್ ಮಾತನಾಡಿ, ಕೃಷಿ ಇಲ್ಲದೆ ಆಹಾರ ಕ್ರಮ ಇಲ್ಲ ಎಂಬುದು ಸತ್ಯ. ಒಂದೂವರೆ ಲಕ್ಷ ಪದಗಳನ್ನು ಒಳಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿಗೆ ಕೃಷಿ ಸಾಹಿತ್ಯ ನೆರವಾಗಿದೆ. ಮನುಷ್ಯ ಯಾವಾಗ ಆಹಾರಕ್ಕಾಗಿ ಬೇಟೆ ಪ್ರಾರಂಭಿಸುತ್ತಾನೋ ಆಗ ಆಹಾರ ಸಿಕ್ಕ ಜಾಗದಲ್ಲೇ ನೆಲೆ ನಿಲ್ಲಲು ಯೋಚಿಸುತ್ತಾನೆ. ಈ ವೇಳೆ ಸಂವಹನ ಮಾಡಲು ಭಾಷೆ ಬಳಸಿಕೊಳ್ಳುತ್ತಾನೆ. ಮನುಷ್ಯ ನಾಗರಿಕತೆ ಬೆಳೆಯಲು ಕೃಷಿ ಕಾರಣ. ಭೂಮಿಯನ್ನು ಸಮತಟ್ಟು ಮಾಡುವ ಹಂತದಿಂದ ಬೆಳೆ ಬೆಳೆದು ತಟ್ಟೆಗೆ ಅನ್ನವಾಗಿ ಬರುವವರೆಗೆ ಅನೇಕ ಪದಗಳಾಗಿ ಆ ಪ್ರಕ್ರಿಯೆ ನಡೆಯುತ್ತದೆ. ಗೆಡ್ಡೆ, ಗೆಣಸು ಹುಡುಕಿ ಪುರುಷ ಮನೆಯಿಂದ ಹೊರಗೆ ಹೋದಾಗ ಮಹಿಳೆ ಸಸಿ ನೆಡಲು ಮುಂದಾಗುತ್ತಾಳೆ. ಗುದ್ದಲಿ, ಪಿಕಾಸಿ ಮತ್ತಿತರ ಸಲಕರಣೆಗಳ ಹುಟ್ಟುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿದೆ. ಆಗ ಕೆಲವೊಂದು ಪದಗಳು ಹುಟ್ಟಿಕೊಂಡವು. ಆ ಬಳಿಕ ಅವು ಕ್ರಿಯಾಪದಗಳಾಗಿ ಹುಟ್ಟಿದವು. ಇಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಹೇಳಿದರು.

ಬಿತ್ತನೆ, ಹವಾಮಾನ, ದಿಕ್ಕು, ನೀರಾವರಿ, ವ್ಯವಸಾಯ ಲಾಭ-ನಷ್ಟ, ಮಾರಾಟ, ಗ್ರಾಹಕ, ದಲ್ಲಾಳಿಗಳು ಸೇರಿದಂತೆ ಅನೇಕ ಕೃಷಿ ಚಟುವಟಿಕೆಗಳಲ್ಲಿ ಬಳಸುವ ಪದಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿವೆ ಎಂದರು.

‘ಇತ್ತೀಚಿನ ದಿನಗಳಲ್ಲಿ ಪದಗಳ ಬಳಕೆ ಕಡಿಮೆಯಾಗುತ್ತಿದೆ. ಜಾಗತೀಕರಣ, ಖಾಸಗೀಕರಣದಿಂದ ಕನ್ನಡದ ಮೂಲ ಪದಗಳು ಕಣ್ಮರೆಯಾಗುತ್ತಿವೆ. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಎಷ್ಟೋ ಸಲಕರಣೆಗಳನ್ನು ನಾವು ಮರೆತು ಹೊಸತನಕ್ಕೆ ಜೋತು ಬಿದ್ದಿದ್ದೇವೆ. ಹೀಗಾಗಿ ಕನ್ನಡ ಭಾಷೆ ಆಧುನಿಕರಣದಿಂದ ನಾಶದತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಯುವ ಅವಶ್ಯಕತೆಯಿದೆ. ಕನ್ನಡ ಭಾಷೆ ಉಳಿಯಬೇಕು, ಹೋರಾಟ ಆಗಬೇಕು ಅಂತಾರೆ. ಆದರೆ ಇಷ್ಟರಮಟ್ಟಿಗೆ ಕನ್ನಡ ಭಾಷೆ ಉಳಿದಿದೆ ಎಂದರೆ ಅದಕ್ಕೆ ಕೃಷಿಕರ ಕೊಡುಗೆ ಕಾರಣ’ ಎಂದು ಅಭಿಪ್ರಾಯಪಟ್ಟರು.

ರೈತ ಸಂಕಷ್ಟಕ್ಕೆ ಸಿಲುಕಿದಾಗ ಭಾಷೆ ಮತ್ತು ಸಾಹಿತ್ಯ ಹೇಗೆ ಬೆನ್ನೆಲುಬಾಗಿ ನಿಂತಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಆಧುನಿಕತೆಯನ್ನು ನೆಚ್ಚಿಕೊಳ್ಳುವ ಭರದಲ್ಲಿ ಹಿಂದಿನದನ್ನು ಮರೆತು ಬಿಟ್ಟಿದ್ದೇವೆ. ಪರಂಪರೆ ಇಲ್ಲದಿದ್ದರೆ ಆಧುನಿಕ ಸಲಕರಣೆಗಳು ಇರುತ್ತಿರಲಿಲ್ಲ ಎಂದರು.

ಡಾ. ಮ.ರಾಮಕೃಷ್ಣ, ಸಾಹಿತ್ಯ ಪರಿಷತ್ತಿನ ಇತರ ಸದಸ್ಯರು ಹಾಜರಿದ್ದರು.

ರೈತಪರ ಚಿಂತನೆಗಳು ಎಂಬ ವಿಚಾರವಾಗಿ ಮೈಸೂರು ಕೃಷ್ಣಮೂರ್ತಿ ಮಾತನಾಡಿದರು.