ಸಾರಾಂಶ
ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜಿಸುವ ಉದ್ದೇಶದಿಂದ 1996ರಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ಆರಂಭವಾಯಿತು
ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜಿಸುವ ಉದ್ದೇಶದಿಂದ 1996ರಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ಆರಂಭವಾಯಿತು. ಇದು ರೈತರಿಗೆ ಉತ್ತಮ ಮಾರುಕಟ್ಟೆ ಅವಕಾಶಗಳನ್ನು ಒದಗಿಸುವುದಲ್ಲದೆ, ಆಧುನಿಕ ತಂತ್ರಜ್ಞಾನ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವ ಮೂಲಕ ಕೃಷಿ ಕ್ಷೇತ್ರ ಬಲಪಡಿಸುತ್ತದೆ.
ಕೆಪೆಕ್ ಅಡಿಯಲ್ಲಿ ಕಾರ್ಯಗತಗೊಳ್ಳುತ್ತಿರುವ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆ ಅತ್ಯಂತ ಮಹತ್ವದ್ದು. ಇದು ಕೇಂದ್ರ ಸರ್ಕಾರದ ಯೋಜನೆಯಾದರೂ ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಇರಿಸಿ ಕಾರ್ಯಗತಗೊಳಿಸುತ್ತಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ 6 ಲಕ್ಷ ರೂಪಾಯಿ ಗರಿಷ್ಠ ಸಹಾಯ ಧನ ನೀಡುತ್ತದೆ.
ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 9 ಲಕ್ಷ ರೂ. ಸಬ್ಸಿಡಿ ನೀಡುತ್ತಿದೆ. ಇದರಿಂದಾಗಿ ಈ ಯೋಜನೆ ಅಡಿ ಆಹಾರ ಉದ್ಯಮಿಗಳಾಗುವವರು 15 ಲಕ್ಷ ರೂ. ಗರಿಷ್ಠ ಸಬ್ಸಿಡಿ ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ನಮ್ಮ ಮುಖ್ಯಮಂತ್ರಿಗಳು 206 ಕೋಟಿ ರೂಪಾಯಿ ಇದಕ್ಕಾಗಿ ಮೀಸಲಿಟ್ಟು, ಈ ವರ್ಷ 5 ಸಾವಿರ ಆಹಾರೋದ್ಯಮಿಗಳ ಸೃಷ್ಟಿಸುವುದಾಗಿ ಭರವಸೆ ನೀಡಿದ್ದಾರೆ.
ಕೊಟ್ಟ ಮಾತಿನಂತೆ ನಡೆಯುವ ನಮ್ಮ ಸರ್ಕಾರ ಸಿಎಂ ನೀಡಿದ ಮಾತನ್ನು ನಿಜರೂಪಕ್ಕಿಳಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಕೆಪೆಕ್ ಚಟುವಟಿಕೆ ತೀವ್ರ ವೇಗ ಪಡೆದುಕೊಂಡಿದೆ. ಅಗತ್ಯ ಬಿದ್ದರೆ ಅನುದಾನ ಹೆಚ್ಚಿಸಲು ಪ್ರಯತ್ನಿಸುವೆ. ಈ ಯೋಜನೆಯು ಗ್ರಾಮೀಣ ಮಹಿಳೆಯರು ಮತ್ತು ಯುವಕರಿಗೆ ಸಬಲೀಕರಣದ ಸಾಧನವಾಗಿದೆ. ಈ ಯೋಜನೆಯನ್ನು ಅನೇಕರು ಬಳಸಿಕೊಂಡು ಯಶಸ್ವಿಯಾಗಿದ್ದಾರೆ. ಉಳುವವರೆಲ್ಲರೂ ಉದ್ಯಮಿಗಳಾಗುವತ್ತ ಗಮನ ನೀಡಬೇಕು. ಕೃಷಿ ಉದ್ಯಮವಾಗಿ ಬೆಳೆಯಲು ಇದು ಸಹಕಾರಿಯಾಗಲಿದೆ.
ಕೃಷಿ ಇಲಾಖೆಯ ನೇತೃತ್ವದಲ್ಲಿ ನಡೆಯುವ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿಯೂ ಸಹ ಈ ಉದ್ಯಮಿಗಳ ಮಾರುಕಟ್ಟೆ ವಿಸ್ತರಣೆಗೆ ಪೂರಕ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿಯೂ ಈ ಉದ್ಯಮಿಗಳು ತಯಾರಿಸಿದ ಆಹಾರ ಪದಾರ್ಥಗಳ ಮಾರಾಟಕ್ಕೆ ಅನುವು ಮಾಡಿಕೊಡುವ ದಿಶೆಯಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದೆ.
ಎನ್. ಚೆಲುವರಾಯಸ್ವಾಮಿ
ಕೃಷಿ ಸಚಿವರು
ಕರ್ನಾಟಕ ಸರ್ಕಾರ