ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ರೈತ ಕುಟುಂಬ

| Published : May 13 2025, 01:20 AM IST

ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ರೈತ ಕುಟುಂಬ
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಧ ಎಕರೆಯಲ್ಲಿ ಕೋಳಿ ಫಾರಂಗೆ ಬೇಕಾದ ಶೆಡ್‌ ನಿರ್ಮಿಸಿ, ಭೋಗ್ಯಕ್ಕೆ ಹಾಕಿದರು. ಅದರಿಂದ ಮಾಸಿಕ ಮೂರು ಸಾವಿರ ರು. ಬರುತ್ತದೆ. ಇನ್ನರ್ಧ ಎಕರೆಯಲ್ಲಿ ಜಾನುವಾರುಗಳಿಗೆ ಬೇಕಾದ ಹಸಿರು ಮೇವು, ಫಾರಂ ಹುಲ್ಲು, ಜೋಳ ಬೆಳೆಯತೊಡಗಿದರು.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ಕುಮಾರಬೀಡು ಗ್ರಾಮದ ಶಿವಣ್ಣ ಅವರ ಕುಟುಂಬ ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದೆ.

ಅವರಿಗೆ ಒಂದು ಎಕರೆ ಜಮೀನಿದೆ. ಸ್ವಂತ ಹಣದಿಂದ ಒಂದು ಕೊಳವೆ ಬಾವಿ ಕೊರೆಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಲ್ಲಿ ಮತ್ತೊಂದು ಕೊಳವೆ ಬಾವಿ ಕೊರೆಸಿದ್ದಾರೆ. ಆರಂಭದಲ್ಲಿ ಕೋಸು, ಟೊಮ್ಯಾಟೋ, ಬೀನ್ಸ್, ಸೊಪ್ಪು ಬೆಳೆದು ಜೀವನ ನಿರ್ವಹಿಸುತ್ತಿದ್ದರು. ಇದು ಕಷ್ಟ ಎನಿಸಿದಾಗ ಹೈನುಗಾರಿಕೆ ಕಡೆ ಹೊರಳಿದರು.

ಅರ್ಧ ಎಕರೆಯಲ್ಲಿ ಕೋಳಿ ಫಾರಂಗೆ ಬೇಕಾದ ಶೆಡ್‌ ನಿರ್ಮಿಸಿ, ಭೋಗ್ಯಕ್ಕೆ ಹಾಕಿದರು. ಅದರಿಂದ ಮಾಸಿಕ ಮೂರು ಸಾವಿರ ರು. ಬರುತ್ತದೆ. ಇನ್ನರ್ಧ ಎಕರೆಯಲ್ಲಿ ಜಾನುವಾರುಗಳಿಗೆ ಬೇಕಾದ ಹಸಿರು ಮೇವು, ಫಾರಂ ಹುಲ್ಲು, ಜೋಳ ಬೆಳೆಯತೊಡಗಿದರು. ಪ್ರತಿನಿತ್ಯ ಡೇರಿಗೆ 10 ಲೀಟರ್‌ ಹಾಲು ಪೂರೈಸುತ್ತಾರೆ. ಕೆಲವೊಮ್ಮೆ ಇನ್ನೂ ಹೆಚ್ಚುಹಾರು ಪೂರೈಸುತ್ತಾರೆ. ಇದರಿಂದಲೇ ಮಾಸಿಕ 10 ರಿಂದ 20 ಸಾವಿರ ರು.ವರೆಗೂ ಗಳಿಕೆ ಇದೆ. ಇದಲ್ಲದೆ ಈಗಲೂ ಸೊಪ್ಪು, ತರಕಾರಿ ಬೆಳೆಯುತ್ತಿದ್ದು, ಮೈಸೂರಿನ ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ.

ಇದೆಲ್ಲದರ ಪರಿಣಾಮ ಆರ್ಥಿಕವಾಗಿ ಚೇತರಿಕೆ ಕಂಡರು. ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದಾರೆ. ಮಗ ಮೈಸೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿ.

ಸಂಪರ್ಕ ವಿಳಾಸಃ

ಶಿವಣ್ಣ ಬಿನ್‌ ಲೇಟ್‌ ಚೆನ್ನನಾಯಕ

ಕುಮಾರಬೀಡು

ಇಲವಾಲ ಹೋಬಳಿ

ಮೈಸೂರು ತಾಲೂಕು

ಮೈಸೂರು ಜಿಲ್ಲೆ

ಮೊ.96119 45403

ವ್ಯವಸಾಯ ಕಷ್ಟ ಏನಿಲ್ಲ. ಮನಸ್ಸಿನಿಂದ ಮಾಡಿದರೆ ಯಾವುದೂ ಕಷ್ಟವಲ್ಲ. ನಾನು ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದೇನೆ

- ಶಿವಣ್ಣ, ಕುಮಾರಬೀಡು

ಜ್ಯೂಟ್ ಉತ್ಪನ್ನಗಳ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು: ರುಡ್‌ ಸೆಟ್ ಸಂಸ್ಥೆ ಮೈಸೂರಿನಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಯುವಕ, ಯುವತಿಯರಿಗಾಗಿ ಸ್ವ ಉದ್ಯೋಗ ಮಾಡಲು ಜ್ಯೂಟ್ ಉತ್ಪನ್ನಗಳ ತಯಾರಿಕೆ ತರಬೇತಿಯನ್ನು ಮೇ 15 ರಿಂದ 27 ರವರೆಗೆ (13 ದಿನಗಳು) ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. 18 ರಿಂದ 45 ವಯೋಮಿತಿಯ, ಕನ್ನಡ ಓದು ಬರಹ ಬಲ್ಲವರಾಗಿರಬೇಕು. ಸ್ವ ಉದ್ಯೋಗವನ್ನು ಮಾಡಬೇಕೆಂಬ ಆಸಕ್ತಿ ಹೊಂದಿರಬೇಕು.

ತರಬೇತಿಯು ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಮೊಬೈಲ್ ನಂಬರ್‌ ವುಳ್ಳ ಸ್ವವಿಳಾಸದ ಅರ್ಜಿಯೊಂದಿಗೆ, ಆಧಾರ್‌ ಕಾರ್ಡ್, ಬಿಪಿಎಲ್. ರೇಷನ್‌ ಕಾರ್ಡ್ ಜೆರಾಕ್ಸ್ ಪ್ರತಿಗಳೊಂದಿಗೆ ಮೇಲ್ಕಾಣಿಸಿದ ಪ್ರಾರಂಭಿಕ ದಿನಾಂಕದೊಳಗಾಗಿ ಸಂಪರ್ಕಿಸಿ ರುಡ್‌ ಸೆಟ್ ಸಂಸ್ಥೆಯಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳಲು ತಿಳಿಸಲಾಗಿದೆ. ತರಬೇತಿಗೆ ಆಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನೇರ ಸಂದರ್ಶನ ಮೂಲಕ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ. 0821- 2519663, ಮೊ. 97404 30061, 98440 13948, 94498 60466 ಸಂಪರ್ಕಿಸಬಹುದು.