ಕನ್ನಡಪ್ರಭ ವಾರ್ತೆ ವಿಜಯಪುರ ಹೆತ್ತ ಮಗ ತನ್ನಂತೆ ಹೋಲಿಕೆಯಲ್ಲಿ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನನ್ನು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತಾಲೂಕಿನ ನಾಗಠಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿದ್ಧಾರ್ಥ ಮಲ್ಲಿಕಾರ್ಜುನ ಅರಕೇರಿ (6) ಹತ್ಯೆಯಾದ ಬಾಲಕ.
ಕನ್ನಡಪ್ರಭ ವಾರ್ತೆ ವಿಜಯಪುರ
ಹೆತ್ತ ಮಗ ತನ್ನಂತೆ ಹೋಲಿಕೆಯಲ್ಲಿ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನನ್ನು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತಾಲೂಕಿನ ನಾಗಠಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಸಿದ್ಧಾರ್ಥ ಮಲ್ಲಿಕಾರ್ಜುನ ಅರಕೇರಿ (6) ಹತ್ಯೆಯಾದ ಬಾಲಕ. ಈತನ ತಂದೆ ಮಲ್ಲಿಕಾರ್ಜುನ ಅರಕೇರಿ ಹತ್ಯೆ ಮಾಡಿರುವ ಆರೋಪಿಯಾಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಗನನ್ನು ಟ್ಯೂಶನ್‌ಗಾಗಿ (ಕೋಚಿಂಗ್) ಹಾಸ್ಟೇಲ್‌ಗೆ ಸೇರಿಸುವುದಾಗಿ ಕರೆದೊಯ್ದು ಕೃಷ್ಣಾನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ.ಏನಿದು ಘಟನೆ?:
ತನ್ನ ಮಗ ತನ್ನಂತೆ ಹೋಲಿಕೆ ಇಲ್ಲವೆಂದು ಪತ್ನಿಯ ಮೇಲೆ ಅನುಮಾನಿಸಿ ಜಗಳವಾಡುತ್ತಿದ್ದ. ಇದಕ್ಕೆ ಪುಷ್ಟಿ ಎಂಬಂತೆ ಗ್ರಾಮದ ಕೆಲ ಕಿಡಿಗೇಡಿಗಳು ಸಹ ಛೇಡಿಸಿದ್ದರು. ಪರಿಣಾಮವಾಗಿ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬ ವ್ಯಕ್ತಿಯು ಮಾ.16ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಹೆಂಡತಿಗೆ ಸುಳ್ಳು ಹೇಳಿ ಸಿದ್ಧಾರ್ಥನನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಮಗ ಸಿದ್ಧಾರ್ಥನನ್ನು ಮಹಾರಾಷ್ಟ್ರ ಗಡಿಯ ಕೃಷ್ಣಾನದಿಗೆ ಕರೆದೊಯ್ದು ನದಿಗೆ ತಳ್ಳಿ ಕೊಂದು ಹಾಕಿದ್ದಾನೆ. ವಾಪಸ್ ಬಂದ ಬಳಿಕ ಸಿಂದಗಿ ಬಳಿ ವಸತಿ ಶಾಲೆಯಲ್ಲಿ ಕೋಚಿಂಗ್ ಸೇರಿಸಿದ್ದೇನೆ ಎಂದು ಮನೆಯಲ್ಲಿ ಹೇಳಿದ್ದಾನೆ. ನಂತರದಲ್ಲಿ ಏ.1 ರಂದು ಮಗನ ಹುಟ್ಟುಹಬ್ಬವಿದ್ದ ಕಾರಣ ಮಗನನ್ನು ನೋಡಲೇಬೇಕೆಂದು ಪತ್ನಿ ಪಟ್ಟು ಹಿಡಿದಾಗ ಮಲ್ಲಿಕಾರ್ಜುನ ಅರಕೇರಿ ಮನೆ ಬಿಟ್ಟು ಪರಾರಿಯಾಗಿದ್ದಾನೆ.ನಂತರ ಅನುಮಾನಗೊಂಡ ಪತ್ನಿ ಭಾಗ್ಯಶ್ರೀ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ಕಾಣೆಯಾದ ದೂರು ನೀಡಿದ್ದಾಳೆ. ಪೊಲೀಸರು ಮಲ್ಲಿಕಾರ್ಜುನನನ್ನು ಹುಡುಕಿ ತಂದು ವಿಚಾರಿಸಿದಾಗ ಪ್ರಕರಣ ಬಯಲಾಗಿದೆ. ಈ ಕುರಿತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 16ರಂದು ವಸತಿ ಶಾಲೆಗೆ ಸೇರಿಸಲು ಪತಿ ಮಲ್ಲಿಕಾರ್ಜುನ ಮಗನನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ, ವಾಪಸ್ ಮಗನನ್ನು ಕರೆದುಕೊಂಡು ಬಾ ಎಂದಾಗ ಗಂಡನೂ ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರು ನೀಡಿದ ಬಳಿಕ ತನಿಖೆ ಆರಂಭಿಸಲಾಯಿತು. ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನೇ ಮಗುವನ್ನು ಕರೆದುಕೊಂಡು ಹೋಗಿ ಮಹಾರಾಷ್ಟ್ರದ ಕರಾಡ ಜಿಲ್ಲೆಯ ವಡೋಲಿ ಬಳಿ ಕೃಷ್ಣಾ ನದಿಗೆ ಎಸೆದು ಕೊಂದಿದ್ದ. ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿರುವುದು ಬಹಿರಂಗವಾಗಿದೆ. ಮಹಾರಾಷ್ಟ್ರದಲ್ಲಿ ಬಾಲಕನ ಶವ ಕೂಡ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ.