ಕೊಡಗಿನ ಖಾಸಗಿ ಅಂತಾರಾಜ್ಯ ಬಸ್‌ನಲ್ಲಿ ಮಹಿಳಾ ಚಾಲಕಿ!

| Published : Feb 12 2025, 12:34 AM IST

ಸಾರಾಂಶ

ಕೇರಳ ರಾಜ್ಯದ ಕಣ್ಣೂರಿನ ಮಾನಂದವಾಡಿಯ ನಿವಾಸಿಯಾಗಿರುವ ಉದಯ, ಕ್ಯಾಲಿಕಟ್ ವಿಶ್ವ ವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದು, ಇದೀಗ ವೃತ್ತಿಯಾಗಿ ಬಸ್ ಚಾಲನೆಯಲ್ಲಿ ತೊಡಗಿಕೊಂಡು ಮಹಿಳೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಖಾಸಗಿ ಅಂತಾರಾಜ್ಯ ಬಸ್‌ನಲ್ಲಿ ಮಹಿಳೆಯೊಬ್ಬರು ಚಾಲಕಿಯಾಗಿ ಕೆಲಸ ಮಾಡುತ್ತಿದ್ದು, ಮಾದರಿಯಾಗಿದ್ದಾರೆ. ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲೂ ಕೂಡ ಮಹಿಳೆ ಬಸ್ ಚಾಲನೆ ಮಾಡುತ್ತಿರುವುದರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೇರಳ ರಾಜ್ಯದ ಕಣ್ಣೂರಿನ ಮಾನಂದವಾಡಿಯ ನಿವಾಸಿಯಾಗಿರುವ ಉದಯ, ಕ್ಯಾಲಿಕಟ್ ವಿಶ್ವ ವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದು, ಇದೀಗ ವೃತ್ತಿಯಾಗಿ ಬಸ್ ಚಾಲನೆಯಲ್ಲಿ ತೊಡಗಿಕೊಂಡು ಮಹಿಳೆ, ಯಾವುದಕ್ಕೂ ಕಡಿಮೆ ಇಲ್ಲ. ಮಹಿಳೆ ಏನು ಬೇಕಾದರೂ ಸಾಧನೆ ಮಾಡಬಲ್ಲಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೊಡಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಬಸ್ ಚಾಲನೆ ಮಾಡುತ್ತಿರುವುದು ಗಮನಾರ್ಹವಾಗಿದೆ.

ಕೇರಳ ರಾಜ್ಯದ ಕಣ್ಣೂರಿನಿಂದ ಕೊಡಗಿನ ಮಡಿಕೇರಿ ವರೆಗೆ ಪ್ರತಿ ದಿನ ಕ್ಲಾಸಿಕ್ ಎಂಬ ಹೆಸರಿನ ಬಸ್ ಸಂಚರಿಸುತ್ತದೆ. ಕಣ್ಣೂರು-ಇರಿಟ್ಟಿ-ಮಾಕುಟ್ಟ-ವಿರಾಜಪೇಟೆ-ಸಿದ್ದಾಪುರ- ಮಡಿಕೇರಿ ಮಾರ್ಗವಾಗಿ ಬಸ್ ತೆರಳುತ್ತದೆ.

ಉದಯ ಅವರು ಕಳೆದ ಎರಡು ವರ್ಷದಿಂದ ಭಾರಿ ಗಾತ್ರದ ವಾಹನ ಚಾಲನೆ ಮಾಡುವ ಲೈಸನ್ಸ್ ಮಾಡಿಕೊಂಡಿದ್ದಾರೆ. ಈ ಹಿಂದೆ ನ್ಯಾಷನಲ್ ಪರ್ಮಿಟ್ ಲಾರಿಯನ್ನು ಕೂಡ ಚಾಲನೆ ಮಾಡುತ್ತಿದ್ದರು. ಇದೀಗ ತನಗೆ ಬಸ್ ಚಾಲನೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡ ಮೇರೆಗೆ ಕ್ಲಾಸಿಕ್ ಟೂರ್ ಆ್ಯಂಡ್ ಟ್ರಾವೆಲ್ಸ್‌ನ ಮಾಲಕ ಹಬೀಬ್ ಅವರು ಉದಯ ಅವರಿಗೆ ತಮ್ಮ ಬಸ್‌ನಲ್ಲಿ ಚಾಲನೆ ಮಾಡಲು ಸಹಕರಿಸಿದ್ದಾರೆ. ಇದರಿಂದ ಉದಯ ಅವರ ಆಸೆ ಈಡೇರಿದೆ.

ಈಗ ಬಸ್ ಚಾಲಕಿಯಾಗಿ ತಾತ್ಕಾಲಿಕವಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಣ್ಣ ವಯಸ್ಸಿನಿಂದಲೇ ಉದಯ ಅವರಿಗೆ ವಾಹನ ಚಾಲನೆ ಮಾಡುವ ಕ್ರೇಜ್ ಇತ್ತು. 5ನೇ ತರಗತಿಯಲ್ಲೆ ಬುಲೆಟ್ ಚಾಲನೆ ಮಾಡುತ್ತಿದ್ದರು. ಈ ಹಿಂದೆ ನಾಷನಲ್ ಪರ್ಮಿಟ್ ಲಾರಿ ಕೂಡ ಚಾಲನೆ ಮಾಡಿದ್ದರು.

ಮಹಿಳೆಯಾದರೂ ಅಂತಾರಾಜ್ಯ ಬಸ್ ಚಾಲನೆ ಮಾಡುತ್ತಿರುವ ಉದಯ ಅವರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉದಯ ಅವರು, ಕ್ಲಾಸಿಕ್ ಬಸ್ ಚಾಲಕಿಯಾಗಿ ಕಳೆದ ನಾಲ್ಕು ದಿನಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಸ್‌ನ ಮಾಲೀಕರು ಕೂಡ ಉತ್ತೇಜನ ನೀಡುತ್ತಿದ್ದಾರೆ. ಉದಯ ಅವರಿಂದ ಬಸ್‌ನ ಕಲೆಕ್ಷನ್ ಎರಡು ಸಾವಿರ ರು. ಹೆಚ್ಚಾಗಿದೆ ಎಂದು ಮಾಲೀಕರು ಹೇಳುತ್ತಾರೆ.

ಬೆಳಗ್ಗೆ 6 ಗಂಟೆಗೆ ಕಣ್ಣೂರಿನಿಂದ ಹೊರಡುವ ಬಸ್‌, ಮಡಿಕೇರಿಗೆ ಬೆಳಗ್ಗೆ 11 ಗಂಟೆಗೆ ಸುಮಾರಿಗೆ ತಲುಪುತ್ತದೆ. ನಂತರ 12 ಗಂಟೆಗೆ ಮಡಿಕೇರಿಯಿಂದ ಹೊರಡುವ ಬಸ್ ರಾತ್ರಿ 8.30ಕ್ಕೆ ಕೇರಳದ ಕಣ್ಣೂರಿಗೆ ತಲುಪುತ್ತದೆ.

-----------------

ಭಾರಿ ಗಾತ್ರದ ವಾಹನಗಳನ್ನು ಚಾಲನೆ ಮಾಡಬೇಕೆಂಬ ಆಸೆ ಸಣ್ಣ ವಯಸ್ಸಿನಿಂದಲೇ ಇತ್ತು. ಅದರಂತೆ ಕಳೆದ ಎರಡು ವರ್ಷದ ಹಿಂದೆ ಲಾರಿಗಳನ್ನು ಚಾಲನೆ ಮಾಡಿದ್ದೆ. ಇದೀಗ ಬಸ್ ಅನ್ನು ಚಾಲನೆ ಮಾಡಲು ಹಬೀಬ್ ಅವರು ಅವಕಾಶ ನೀಡಿದ್ದಾರೆ. ಶ್ರದ್ಧೆ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು.

। ಉದಯ, ಕ್ಲಾಸಿಕ್ ಬಸ್ ಮಹಿಳಾ ಚಾಲಕಿ ಕಣ್ಣೂರು-------------

ಉದಯ ಅವರು ನನಗೆ ಬಸ್ ಚಾಲನೆ ಮಾಡಲು ಅವಕಾಶ ನೀಡುವಂತೆ ಕೋರಿಕೊಂಡಿದ್ದರು. ಅದರಂತೆ ಅವರಿಗೆ ನಮ್ಮ ಬಸ್‌ನಲ್ಲಿ ಅವಕಾಶ ನೀಡಿದ್ದೇನೆ. ಬಸ್ ಅನ್ನು ಜಾಗರೂಗತೆಯಿಂದ ಚಾಲನೆ ಮಾಡುತ್ತಿದ್ದಾರೆ. ಇವರಿಂದಾಗಿ ನಮ್ಮ ಕಲೆಕ್ಷನ್ ಈಗ ಎರಡು ಸಾವಿರ ರು. ಹೆಚ್ಚಾಗಿದೆ.

। ಎಂ.ಎ. ಹಬೀಬ್ ಉಲ್ಲ ಖಾನ್, ಕ್ಲಾಸಿಕ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮಾಲೀಕ ಬಿಳುಗುಂದ ವಿರಾಜಪೇಟೆ