ಸಾರಾಂಶ
ಬೇಲಿ ನಿರ್ಮಿಸಿ ಸುರಕ್ಷತೆ: ಹೋರಿ ಹಬ್ಬ ಆಯೋಜಿಸಿದ್ದ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸಮಿತಿಯವರು ಎರಡು ಬದಿಯಲ್ಲಿ ಸುರಸ್ಥಿತವಾಗಿ ಬೇಲಿ ಹಾಕಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಸಮಿತಿಯು ಜನರ ಸುರಕ್ಷತೆಗೆ ಗಮನ ನೀಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು. ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರಿಗೆ ಗೌರವಿಸಿ, ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಓಟೂರು ಗ್ರಾಮದಲ್ಲಿ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸಮಿತಿಯಿಂದ ವಿಶೇಷ ದೀಪಾವಳಿ ಅಂಗವಾಗಿ ರೈತರ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.ದೀಪಾವಳಿ ನಂತರದ ದಿನಗಳಲ್ಲಿ ತಾಲೂಕಿನಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವ ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡುವುದನ್ನು ಕಣ್ತುಂಬಿಕೊಳ್ಳಲು ನೆರೆಯ ತಾಲೂಕಿನ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಟ ಕೀಳುವ ದೃಶ್ಯ ಮೈನವಿರೇಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು.
ಅಖಾಡದಲ್ಲಿ ಸಾರೆಕೊಪ್ಪ ಸರ್ದಾರ, ಕುಪ್ಪಗಡ್ಡೆ ಪವರ್ ಸ್ಟಾರ್, ಮದರವಳ್ಳಿ ಡೇಂಜರ್ ಮುತ್ತು, ಮರೂರು ತಾರಕಾಸುರ, ಕುಪ್ಪಗಡ್ಡೆ ಕಿಂಗ್, ಗುಡುವಿ ಗಣೇಶ, ಕೊಡಕಣಿ ಶ್ರೀಬಸವ, ಹುಣಸೆಕಟ್ಟೆ ಜೈ ಹನುಮ, ಉದ್ರಿ ವೀರೇಶ, ಯಡಗೊಪ್ಪ ಸೆವೆನ್ ಸ್ಟಾರ್, ಕುಪ್ಪಗಡ್ಡೆ ಹೊಯ್ಸಳ, ಕೆರೆಹಳ್ಳಿ ಒಡೆಯ, ಬೆನ್ನೂರು ಬಸವೇಶ್ವರ, ಕೊರಕೋಡು ನರಸಿಂಹ, ಹರಗಿ ಸೂಪರ್ ಸ್ಟಾರ್, ಕಾತುವಳ್ಳಿ ಜಗಮೆಚ್ಚಿದ ನಾಯಕ, ಗುಡ್ಡೆಕೊಪ್ಪದ ಹುಲಿ, ತುಡನೀರು ಚಿನ್ನಾಟದ ಚಿನ್ನ, ಕೆರೆಕೊಪ್ಪ ಸರ್ಕಾರ್, ಚಿಕ್ಕಮಾಕೊಪ್ಪ ದೊಡ್ಮನೆ ಚಿನ್ನ, ತವನಂದಿಯ ಡಾಲಿ, ಜಡೆ ಸೂರ್ಯ, ಕುಪ್ಪಗಡ್ಡೆ ರಾಗಿಣಿ, ಓಟೂರು ಗ್ರಾಮದ ಗೂಳಿ, ಪ್ರಳಯ, ಈಡಿಗರ ಸರ್ಕಾರ್, ವಾರಸುದಾರ, ಕಾಂತಾರ, ರಾವಣ ಮಹಾರಾಜ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.ಬೇಲಿ ನಿರ್ಮಿಸಿ ಸುರಕ್ಷತೆ:
ಹೋರಿ ಹಬ್ಬ ಆಯೋಜಿಸಿದ್ದ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸಮಿತಿಯವರು ಎರಡು ಬದಿಯಲ್ಲಿ ಸುರಸ್ಥಿತವಾಗಿ ಬೇಲಿ ಹಾಕಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಸಮಿತಿಯು ಜನರ ಸುರಕ್ಷತೆಗೆ ಗಮನ ನೀಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು. ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರಿಗೆ ಗೌರವಿಸಿ, ಅಭಿನಂದಿಸಲಾಯಿತು.- - -
-11ಕೆಪಿಸೊರಬ01:ಸೊರಬ ತಾಲೂಕಿನ ಓಟೂರು ಗ್ರಾಮದ ಹೋರಿ ಬೆದರಿಸುವ ಹಬ್ಬದಲ್ಲಿ ಪೈಲ್ವಾನರ ಕೈಗೆ ಸಿಗದೇ ಓಡುತ್ತಿರುವ ಹೋರಿ.