ರಾಮನಗರ: ಶಿಫ್ಟ್ ವಿಚಾರವಾಗಿ ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಕೈಲಾಂಚ ಹೋಬಳಿ ಚೆಕ್ಕೆರೆದೊಡ್ಡಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ರಾಂಪುರ ವಾಸಿ ಅವಿನಾಶ್ ಕೊಲೆಯಾದ ದುರ್ದೈವಿ. ಕನಕಪುರ ತಾಲೂಕಿನ ಗಾಣಾಳು ಗ್ರಾಮದ ಜೀವನ್ , ಶಿವರುದ್ರ, ಪವನ್ ಬಂಧಿತರು. ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಖಾಸಗಿ ಕಂಪನಿಯಲ್ಲಿ ಅವಿನಾಶ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಅದೇ ಸಂಸ್ಥೆಗೆ ತನ್ನ ಸ್ನೇಹಿತ ಜೀವನ್‌ನನ್ನು ಕೆಲಸಕ್ಕೆ ಸೇರಿಸಿದ್ದನು. ಶಿಫ್ಟ್ ವಿಚಾರವಾಗಿ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಅವಿನಾಶ್ ಸಂಸ್ಥೆ ಮ್ಯಾನೇಜರ್‌ಗೆ ಜೀವನ್ ವಿರುದ್ಧ ದೂರು ನೀಡಿದ್ದರು.

ಇದರಿಂದ ಕುಪಿತಗೊಂಡಿದ್ದ ಜೀವನ್ ತನ್ನ ಸಂಬಂಧಿಕರಾದ ಶಿವರುದ್ರ ಮತ್ತು ಪವನ್ ಅವರಿಗೆ ವಿಷಯ ತಿಳಿಸಿದ್ದಾನೆ. ಗ್ರಾಮಕ್ಕೆ ಅವಿನಾಶ್ ಬಂದು ಹೋಗುವುದನ್ನು ಅರಿತಿದ್ದ ಮೂವರು ಆತನ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಚೆಕ್ಕೆರೆದೊಡ್ಡಿಯಲ್ಲಿ ಕ್ಯಾಬ್ ಹಾಳಾಗಿದೆ ಎಂದು ಶಿವರುದ್ರ ಮತ್ತು ಪವನ್ ಡ್ರಾಮಾ ಮಾಡಿ, ಅದೇ ರಸ್ತೆಯಲ್ಲಿ ಬಸ್ಸಿನಲ್ಲಿ ಬರುತ್ತಿದ್ದ ಅವಿನಾಶ್ ಬಳಿ ಸಹಾಯ ಕೇಳಿದ್ದಾರೆ. ಅವಿನಾಶ್ ಕ್ಯಾಬ್ ತಳ್ಳುವಾಗ ಹಿಂಬದಿಯಿಂದ ದೊಣ್ಣೆಯಿಂದ ತಲೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಸ್ಥಳೀಯರು ಅವಿನಾಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವಿನಾಶ್ ಮೇಲೆ ಹಲ್ಲೆ ಮಾಡುವ ದೃಶ್ಯ ಬಸ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.