ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಜಾಗದ ವಿವಾದ ವಿಕೋಪಕ್ಕೆ ತಿರುಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು ಹಲವರು ಗಾಯಗೊಂಡ ಘಟನೆ ತುಳಸಿಗೇರಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.ಒಂದು ಕುಟುಂಬದ 12 ಜನರ ಮೇಲೆ, ಇನ್ನೊಂದು ಕುಟುಂಬ 7 ಜನರ ಮೇಲೆ ಹಲ್ಲೆ ನಡೆದಿದೆ ಎಂದು ದೂರು ಪ್ರತಿದೂರು ನೀಡಿದ್ದಾರೆ.
ನಡೆದಿದ್ದೇನು?:ತುಳಸಿಗೇರಿ ಗ್ರಾಮದ ಐ.ಬಿ. ಹತ್ತಿರ ಇರುವ ಪ್ಲಾಟ್ ಒಂದಕ್ಕೆ ಸಂಬಂಧಿಸಿದಂತೆ ಸಕಲಾದಗಿ ಹಾಗೂ ಸೊನ್ನದ ಕುಟುಂಬಗಳ ಮಧ್ಯೆ ತಂಟೆ ಇತ್ತು. ಇದೇ ವಿಷಯವಾಗಿ ಸೋಮವಾರ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ನಂತರ ಕಬ್ಬಿಣದ ರಾಡ್, ಪೈಪ್‌ಗಳೊಂದಿಗೆ ಎರಡೂ ಕುಟುಂಬದವರು ಹೊಡೆದಾಡಿಕೊಂಡಿದ್ದಾರೆ. ಗಾಯಗೊಂಡವರನ್ನು ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಲಾದಗಿ ಕುಟುಂಬದ ಗಾಯಾಳುಗಳು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ, ಸೊನ್ನದ ಕುಟುಂಬದ ಗಾಯಾಳುಗಳು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕಲಾದಗಿ ಪಿಎಸೈ ಚಂದ್ರಶೇಖರ ಹೇರಕಲ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಪ್ರತ್ಯೇಕ ಪ್ರಕರಣ ದಾಖಲು:ತುಳಸಿಗೇರಿಯ ಗಂಗವ್ವ ಶ್ರೀನಿವಾಸ ಸೊನ್ನದ ಅವರು ತಮ್ಮ ಕುಟುಂಸ್ಥರ 12 ಜನರ ಮೇಲೆ ಹಲ್ಲೆಯಾಗಿದೆ ಎಂದು ದೂರಿ ಸಕಲಾದಗಿ ಕುಟುಂಬದ 15 ಜನರ ಮೇಲೆ ದೂರು ದಾಖಲಿಸಿದ್ದಾರೆ.ಪ್ರಲ್ಹಾದ ಶ್ರೀಕಾಂತ ಸಕಲಾದಗಿ ಕೂಡ ತಮ್ಮ ಕುಂಟುಂಬದ 7 ಜನರ ಮೇಲೆ ಹಲ್ಲೆ ಮಾಡಲಾಗಿದೆ ಎಂದು 23 ಜನರ ದೂರು ದಾಖಲಿಸಿದ್ದಾರೆ.