ತುಂಬಿದ ಹಳ್ಳ; ನಡು ನೀರಲ್ಲಿ ಸಿಲುಕಿದ ಪುರಸಭೆ ಸದಸ್ಯ

| Published : Jun 08 2024, 12:33 AM IST

ಸಾರಾಂಶ

ಗುಡುಗು ಸಹಿತ ಭಾರೀ ಮಳೆಯಾಗಿದ್ದರಿಂದ ಪಟ್ಟಣದ ಬಸ್ ಘಟಕದ ಮುಖ್ಯ ರಸ್ತೆಯ ಜಾನಕಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಮೇಲೆ ನೀರು ರಭಸವಾಗಿ ಬಂದ ಕಾರಣ ಹಳ್ಳದ ಸೆಳವಿನಲ್ಲಿ ಪುರಸಭೆ ಸಿಲುಕಿಗೊಂಡು ಪರದಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಗುಡುಗು ಸಹಿತ ಭಾರೀ ಮಳೆಯಾಗಿದ್ದರಿಂದ ಪಟ್ಟಣದ ಬಸ್ ಘಟಕದ ಮುಖ್ಯ ರಸ್ತೆಯ ಜಾನಕಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಮೇಲೆ ನೀರು ರಭಸವಾಗಿ ಬಂದ ಕಾರಣ ಹಳ್ಳದ ಸೆಳವಿನಲ್ಲಿ ಪುರಸಭೆ ಸಿಲುಕಿಗೊಂಡು ಪರದಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಗುರುವಾರ ರಾತ್ರಿ ೧೧.೪೦ರ ಸುಮಾರಿಗೆ ಬೈಕಿನ ಮೇಲೆ ಕುಳಿತು ಮನೆಗೆ ತೆರಳುತ್ತಿದ್ದ ಪುರಸಭಾ ಸದಸ್ಯ ನಿಂಗಪ್ಪ ಗುರಲಿಂಗಪ್ಪ ಕುಂಟೋಜಿ (೩೫) ಹಳ್ಳದ ಸೆಳುವಿನಲ್ಲಿ ಸಿಲುಕಿದ್ದರು. ನಿಂಗಪ್ಪ ಎಳನೀರು ವ್ಯಾಪಾರ ಮಾಡುತ್ತಿದ್ದ ತನ್ನ ತಮ್ಮನ ಅಂಗಡಿ ಬಂದ್ ಮಾಡಿಕೊಂಡು ಮನೆಗೆ ತೆರಳುತ್ತಿದ್ದ ಸಮಯದಲ್ಲಿ ರಾತ್ರಿ ಸಮಯವಾಗಿದ್ದರಿಂದ ಬಸ್ ಘಟಕದ ಮುಖ್ಯ ರಸ್ತೆಯ ಜಾನಕಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಮೇಲೆ ಹೊರಟಿದ್ದರು. ಆದರೆ, ಜಾನಕಿ ಹಳ್ಳದ ನೀರು ರಭಸದಿಂದ ಹರಿಯುತ್ತಿರುವುದನ್ನು ಲಕ್ಷೀಸದೇ ಬೈಕಿನ ಮೇಲೆ ನಡು ಹಳ್ಳಕ್ಕೆ ಹೋದಾಗ ಚಾಲು ಇದ್ದ ಬೈಕ್ ಬಂದ್‌ ಆದ ಕಾರಣದಿಂದ ಹಳ್ಳದ ನಡು ನೀರಿನಲ್ಲಿ ಸಿಲುಕಿಕೊಂಡರು.

ಸದಸ್ಯ ನಿಂಗಪ್ಪ ಹಳ್ಳದ ನಡು ನೀರಿನಲ್ಲಿ ಸಿಲುಕಿದ್ದನ್ನು ನೋಡಿದ ಸಚಿನ ಹಂಚಾಟೆ ಎಂಬವರು ಕೂಡಲೇ ಅಗ್ನಿಶಾಮಕ ಠಾಣೆಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದರು. ಆಗ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಹಗ್ಗದ ಸಹಾಯದಿಂದ ಪುರಸಭೆ ಸದಸ್ಯನನ್ನು ರಕ್ಷಣೆ ಮಾಡಿದರು.

ಅಗ್ನಿ ಶಾಮಕ ಠಾಣಾ ಅಧಿಕಾರಿ ಪ್ರಭು ಸಣ್ಣಕ್ಕಿ ಹಾಗೂ ವಾಹನ ಚಾಲಕ ವಿರೇಶ ಹಂಡ್ರಗಲ್ಲ, ಸಿಬ್ಬಂದಿಗಳಾದ ಸಿ.ಸಿ.ಅಂಬಳನೂರ, ದೇವೀಂದ್ರ ರಾಠೋಡ, ಶ್ರೀನಿವಾಸ ಚವ್ಹಾಣ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.