ಕೊರಟಗೆರೆ ತಾಲೂಕಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀನಮೇಷ?

| Published : May 28 2024, 01:16 AM IST

ಕೊರಟಗೆರೆ ತಾಲೂಕಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀನಮೇಷ?
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಆದರೆ ಶಾಲೆಗಳ ಕಟ್ಟಡಗಳ ಅಭಿವೃದ್ಧಿ ಮತ್ತು ಸೌಲಭ್ಯ ಕೊರತೆಯು ದಾಖಲಾತಿ ಮೇಲೆ ಪರಿಣಾಮ ಬೀರುತ್ತಿದೆ. ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ ಅಭಿವೃದ್ಧಿಗೆ ಅನುದಾನ ತರುವತ್ತ ಗಮನ ಹರಿಸಬೇಕಾಗಿದೆ.

ಎಚ್.ಎನ್.ನಾಗರಾಜು ಹೊಳವನಹಳ್ಳಿ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಆದರೆ ಶಾಲೆಗಳ ಕಟ್ಟಡಗಳ ಅಭಿವೃದ್ಧಿ ಮತ್ತು ಸೌಲಭ್ಯ ಕೊರತೆಯು ದಾಖಲಾತಿ ಮೇಲೆ ಪರಿಣಾಮ ಬೀರುತ್ತಿದೆ. ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ ಅಭಿವೃದ್ಧಿಗೆ ಅನುದಾನ ತರುವತ್ತ ಗಮನ ಹರಿಸಬೇಕಾಗಿದೆ.

ತಾಲೂಕಿನಲ್ಲಿ ೨೬೦ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ೧೯ ಸರ್ಕಾರಿ ಪ್ರೌಢ ಶಾಲೆ, ೦೩ ಅನುದಾನಿತ ಪ್ರಾಥಮಿಕ ಶಾಲೆ, ೧೪ ಅನುದಾನಿತ ಪ್ರೌಢ ಶಾಲೆ ಸೇರಿ ಒಟ್ಟು ೨೯೬ ಶಾಲೆಗಳಲ್ಲಿ ೨೦೨೩-೨೪ನೇ ವರ್ಷದ ಅಂಕಿ ಅಂಶದ ಪ್ರಕಾರ ೨೦,೭೦೦ ವಿದ್ಯಾರ್ಥಿಗಳ ದಾಖಲಾತಿ ಇದೆ. ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಮತ್ತು ಅಭಿವೃದ್ಧಿ ಇಲ್ಲದೇ ಮಕ್ಕಳ ದಾಖಲಾತಿಯು ಶೂನ್ಯವಾಗಿ ಶಿಕ್ಷಣ ಇಲಾಖೆ ೧೩ ಶಾಲೆಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಿದೆ.

೨೮೪ ಕೊಠಡಿಗಳ ಅಭಿವೃದ್ಧಿ ಅಗತ್ಯ: ಶಿಕ್ಷಣ ಇಲಾಖೆಯ ಅಂಕಿ- ಅಂಶಗಳ ಪ್ರಕಾರ ೨೭೯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಒಟ್ಟು ೮೫೮ ಕೊಠಡಿಗಳಿವೆ. ಅವುಗಳಲ್ಲಿ ೫೬೪ ಕೊಠಡಿ ಉತ್ತಮ ಸ್ಥಿತಿ, ಇನ್ನುಳಿದ ೧೪೩ ಕೊಠಡಿ ಅರ್ಧ ಶಿಥಿಲವಾದರೆ, ೧೫೧ ಕೊಠಡಿಗಳ ಮೇಲ್ಛಾವಣಿ, ಕಿಟಕಿ, ಬಾಗಿಲು, ನೆಲ ಮತ್ತು ಗೋಡೆಯು ಕುಸಿಯುವ ಹಂತದಲ್ಲಿವೆ. ಮುಂಗಾರು ಮಳೆ ಪ್ರಾರಂಭವಾದರೆ ಶಾಲೆಯಲ್ಲಿ ಆಟದ ಜೊತೆ ಪಾಠವೂ ಮಕ್ಕಳ ಪಾಲಿಗೆ ಮರೀಚಿಕೆಯಾಗಿ ಶಾಲೆಗೆ ರಜೆ ನೀಡಬೇಕಾದ ಲಕ್ಷಣಗಳಿವೆ.

ಮೈದಾನ ಇಲ್ಲದೇ ಆಟವೇ ಇಲ್ಲ: ೨೭೯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ೧೪೦ಕ್ಕೂ ಅಧಿಕ ಶಾಲೆಗಳಿಗೆ ಆಟದ ಮೈದಾನದ ಜೊತೆ ದೈಹಿಕ ಶಿಕ್ಷಕರಿಲ್ಲದೇ ಕ್ರೀಡೆಗಳಿಗೆ ಉತ್ತೇಜನವೇ ಇಲ್ಲದಂತಾಗಿದೆ. ೮೫ ಶಾಲೆಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದ್ದು, ಶೌಚಾಲಯ, ಅಡುಗೆ ಕೋಣೆಗಳಿಗಂತೂ ನೀರಿನ ಸಂಪರ್ಕವೇ ಇಲ್ಲದಿರುವ ದುಸ್ಥಿತಿಯಿದೆ. ೭೫ ಸರ್ಕಾರಿ ಶಾಲೆಗಳಿಗೆ ಕಾಂಪೌಂಡು ಇಲ್ಲದೇ ಜಾನುವಾರು ಮತ್ತು ನಾಯಿಗಳ ಹಾವಳಿ ಹೆಚ್ಚಾಗಿದೆ.

೧೦೦ ಶಿಕ್ಷಕರ ಹುದ್ದೆ ಖಾಲಿ: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಪ್ರಸಕ್ತ ಸಾಲಿನ ಅಂಕಿ ಅಂಶ ಪ್ರಕಾರ ಒಟ್ಟು ೨೬೬ ಶಾಲೆಗಳಲ್ಲಿ ಮುಖ್ಯ ಶಿಕ್ಷಕ ಸೇರಿ ೮೭೯ ಹುದ್ದೆಗಳಿವೆ. ಅದರಲ್ಲಿ ೧೦೦ ಹುದ್ದೆ ಖಾಲಿಯಿವೆ, ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಸಮಸ್ಯೆಯಾಗಿದೆ. ೨೭೯ ಶಾಲೆಗಳಲ್ಲಿ ೨೭೦ ಶಾಲೆಗಳ ಜಮೀನಿನ ಆಸ್ತಿ ನೋಂದಣಿಯಾಗಿದೆ. ೯ ಶಾಲೆ ಜಮೀನಿನ ಇ-ಖಾತೆ ಬಾಕಿಯಿದೆ.

ನರೇಗಾ ಆಸರೆ: ಕೊರಟಗೆರೆಯ ೨೦೬ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಾಂಪೌಂಡು, ಶೌಚಾಲಯ, ಆಟದ ಮೈದಾನ, ಅಡುಗೆ ಕೊಣೆ ಮತ್ತು ಗಾರ್ಡನ್ ಅಭಿವೃದ್ಧಿಗೆ ಜಿಪಂಯಿಂದ ೨೦೨೪ರ ಜನವರಿಯಲ್ಲಿ ೧೨ ಕೋಟಿ ರು. ಅನುದಾನಕ್ಕೆ ಅನುಮೋದನೆ ದೊರೆತಿದೆ. ಅದರಲ್ಲಿ ಈಗಾಗಲೇ ೨೭ ಶಾಲೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿವೆ. ಇನ್ನುಳಿದ ೮೯ ಶಾಲೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಒಟ್ಟಾರೆ ೨೦೬ ಶಾಲೆಗಳ ಕಾಮಗಾರಿಯು ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ.

ಶೂನ್ಯ ದಾಖಲಾತಿ; ೧೩ ಶಾಲೆಗಳಿಗೆ ಬೀಗ : ತೋವಿನಕೆರೆ, ಮಣುವಿನಕುರಿಕೆ, ಅರಸಾಪುರ, ಸೋಂಪುರ, ಕೋಳಾಲ, ವೀರನಗರ, ಅಳಾಲಸಂದ್ರ, ವೆಂಕಟಾಪುರ, ಹಂಚಿಮಾರನಹಳ್ಳಿ, ಚಿಕ್ಕಾವಳ್ಳಿ, ಹನುಮಂತಪುರ, ಜಿ.ನಾಗೇನಹಳ್ಳಿ, ಸೋಂಪುರ, ಜನತಾ ಕಾಲೋನಿ ಸೇರಿ ಒಟ್ಟು ೧೩ ಸರ್ಕಾರಿ ಉರ್ದು ಮತ್ತು ಕಿರಿಯ ಪ್ರಾಥಮಿಕ ಶಾಲೆ ಬೀಗ ಬಿದ್ದಿದೆ. ೧೩ ಶಾಲೆಗಳಿಗೆ ೨೦೨೧ ರಿಂದ ೨೦೨೩ ರವರೆಗೆ ಶೂನ್ಯ ದಾಖಲಾತಿಯಾಗಿರುವ ಕಾರಣ ಶಿಕ್ಷಣ ಇಲಾಖೆಯಿಂದ ತಾತ್ಕಾಲಿಕವಾಗಿ ಬೀಗ ಜಡಿಯಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದೇನೆ. ಅಪಾಯದ ಹಂತದಲ್ಲಿರುವ ಹಳೆ ಕೊಠಡಿಗಳ ದುರಸ್ತಿಗೆ ಸೂಚಿಸಲಾಗಿದೆ. ಶೂನ್ಯ ದಾಖಲಾತಿ ಇರುವ ಶಾಲೆ ಮುಚ್ಚಿಸಲಾಗಿದೆ. ನೂತನ ಕೊಠಡಿ, ಕಾಂಪೌಂಡ್‌ ಅಭಿವೃದ್ಧಿಗೆ ಜಿಪಂಗೆ ಪತ್ರ ಬರೆಯಲಾಗಿದೆ.

ಮಂಜುನಾಥ. ಡಿಡಿಪಿಐ. ಮಧುಗಿರಿ