ಸಾರಾಂಶ
ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿಒಂದಲ್ಲ ಒಂದು ಸಮಸ್ಯೆಗಳಿಂದಾಗಿ ಕೊಡಗು ಜಿಲ್ಲೆಯಲ್ಲಿ ಕೃಷಿಕರು ಭತ್ತದ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಇದೀಗ ಪಾರಿವಾಳಗಳ ಹಿಂಡೂ ಕೂಡ ಭತ್ತದ ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಕಟಾವು ಮಾಡಿದ್ದ ಭತ್ತದ ಫಸಲು ಉದುರಿ ಹೋಗಿದ್ದು, ನಷ್ಟ ಅನುಭವಿಸುವಂತಾಗಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹುದೂರು ಗ್ರಾಮದ ಉದಯೋನ್ಮುಖ ಬೆಳೆಗಾರ, ಕೃಷಿ ಪಂಡಿತ ಪ್ರಶಸ್ತಿ ಪಡೆದಿರುವ ಬಾರಿತ್ತಾಯ ರವಿಶಂಕರ್ ಈ ಬಾರಿ ಸುಮಾರು 30 ಎಕರೆಗೂ ಅಧಿಕ ಭತ್ತದ ಕೃಷಿ ಮಾಡಿದ್ದಾರೆ. ಇದೀಗ ಪರಿವಾಳಗಳ ಹಿಂಡು ಭತ್ತದ ಕೃಷಿಯಲ್ಲಿ ರವಿಶಂಕರ್ ಅವರಿಗೆ ನಷ್ಟ ತಂದೊಡ್ಡಿದೆ.ಇತ್ತೀಚೆಗೆ ಸಿದ್ದಸಣ್ಣ ಎಂಬ ತಳಿಯನ್ನು ಎರಡು ಎಕರೆ ಜಾಗದಲ್ಲಿ ಕಟಾವು ಮಾಡಲಾಗಿದೆ. ಆದರೆ ಕಟಾವು ಮಾಡಿಟ್ಟ ಫಸಲು ತಿನ್ನಲು ಬರುವ ಪಾರಿವಾಳಗಳಿಂದ ಹೆಚ್ಚು ಫಸಲು ಉದುರಿ ಹೋಗಿದೆ. ಮಳೆ ಕೊರತೆಯಿಂದಾಗಿ ಈ ಬಾರಿ ಶೇ. 60ರಷ್ಟು ಫಸಲು ಮಾತ್ರ ಬಂದಿದೆ ಎಂದು ರವಿಶಂಕರ್ ಹೇಳುತ್ತಿದ್ದು, ಇದೀಗ ಪಾರಿವಾಳಗಳಿಂದಾಗಿ ಕಟಾವು ಮಾಡಿದ ಫಸಲಲ್ಲಿ ಶೇ. 30ರಷ್ಟು ಫಸಲು ನಷ್ಟವಾಗಿದೆ ಎಂದು ಬೇಸರದಿಂದ ನುಡಿಯುತ್ತಾರೆ.
ಭತ್ತದ ಕೃಷಿ ಕೈ ಬಿಡಬಾರದು ಎಂಬ ನಿಟ್ಟಿನಲ್ಲಿ ತಾನು ಈ ಕೃಷಿ ಮಾಡಿಕೊಂಡು ಬರುತ್ತಿದ್ದೇನೆ. ಈ ಹಿಂದೆ ಕೃಷಿಯಲ್ಲಿ ಹಂದಿಗಳ ಕಾಟ ಇತ್ತು. ಕಳೆದ ವರ್ಷ ಮಳೆಯಿಂದಾಗಿ ಕಟಾವು ಮಾಡಿದ್ದ ಫಸಲು ಮೊಳಕೆಯೊಡೆದಿತ್ತು. ಆದರೆ ಇದೀಗ ಫಸಲು ತಿನ್ನಲು ಬರುವ ಪಾರಿವಾಳಗಳಿಂದಾಗಿ ಫಸಲು ಉದುರಿ ಹೋಗುತ್ತಿದ್ದು, ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ರವಿಶಂಕರ್ ಅಳಲು ತೋಡಿಕೊಂಡಿದ್ದಾರೆ.ಇದೀಗ ಉದುರಿರುವ ಫಸಲು ಸಂಗ್ರಹಿಸುವುದು ಕಷ್ಟವಾಗಿದೆ. ಬ್ಯಾಟರಿ ಚಾಲಿತ ವ್ಯಾಕ್ಯೂಮ್ ಬಳಸಿ ಸಂಗ್ರಹಿಸುವ ಪರಿಸ್ಥಿತಿ ಉಂಟಾಗಿದೆ. ಕಟಾವು ಮಾಡಲು ಇನ್ನೂ 30 ಎಕರೆ ಭತ್ತದ ಜಮೀನಿದ್ದು, ಪಾರಿವಾಳಗಳಿಂದ ಫಸಲು ಮತ್ತಷ್ಟು ಫಸಲು ನಷ್ಟವಾಗುವ ಆತಂಕ ಎದುರಾಗಿದೆ. ಸಿದ್ದಸಣ್ಣ, ಮಣಿ ಸಣ್ಣ, ಕಾಗೆ ಸಣ್ಣ, ಮೈಸೂರು ಸಣ್ಣ ಸೇರಿದಂತೆ 20ಕ್ಕೂ ಅಧಿಕ ಬಗೆಯ ತಳಿಗಳನ್ನು ರವಿ ಶಂಕರ್ ಬೆಳೆದಿದ್ದಾರೆ.
ಮಳೆ ಕೊರತೆಯಿಂದಾಗಿ ಭತ್ತ ಬೆಳೆಯ ಬುಡ ದಪ್ಪ ಬಾರದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೀಸಿದ ಜೋರಾದ ಗಾಳಿಯಿಂದ ಭತ್ತದ ಬೆಳೆ ನೆಲಕ್ಕೆ ಬಾಗಿದ್ದು, ಕಟಾವು ಮಾಡಲು ಕಷ್ಟದ ಪರಿಸ್ಥಿತಿ ಉಂಟಾಗಿದೆ.ಭತ್ತದ ಕೃಷಿ ಕೊಡಗಿನಲ್ಲಿ ತೀರಾ ಕುಂಠಿತ!
ಭತ್ತದ ಕೃಷಿಯಲ್ಲಿ ತೊಡಗುವ ಕೃಷಿಕರಿಗೆ ಕಾಡಾನೆ, ಕಾಡಂದಿ, ಮಳೆ, ಕಾರ್ಮಿಕರ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿ ಪ್ರಮಾಣ ಗಣನೀಯವಾಗಿ ಕುಸಿತವಾಗುತ್ತಿದೆ. ಕೃಷಿ ಇಲಾಖೆಯ ವರದಿಯ ಪ್ರಕಾರ ಈ ಬಾರಿ ಜಿಲ್ಲೆಯಲ್ಲಿ ಸುಮಾರು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲು ಗುರಿ ಇತ್ತು. ಆದರೆ ಈ ಬಾರಿ 19,152 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಮಾಡಲಾಗಿದ್ದು, ಶೇ.66ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಈ ಬಾರಿ ಮಳೆ ಕೊರತೆಯೂ ಭತ್ತದ ಕೃಷಿಗೆ ಹಿನ್ನಡೆಯಾಗಿದೆ. 7,620 ಹೆಕ್ಟೇರ್ ಪ್ರದೇಶದಲ್ಲಿ ಮಳೆ ಕೊರತೆಯಿಂದ ನಷ್ಟ ಉಂಟಾಗಿದೆ.ಭತ್ತದ ಫಸಲು ಕೈಬಿಡಬಾರದು ಎಂಬ ನಿಟ್ಟಿನಲ್ಲಿ ಈ ಕೃಷಿ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಈ ಕೃಷಿಯಲ್ಲಿ ಪ್ರತಿ ಬಾರಿ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಿದೆ. ಇದೀಗ ಪಾರಿವಾಳಗಳ ಗುಂಪಿನಿಂದ ಕಟಾವು ಮಾಡಿಟ್ಟಿದ್ದ ಫಸಲು ಉದುರಿ ಹೋಗಿವೆ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ.
-ಬಾರಿತ್ತಾಯ ರವಿಶಂಕರ್, ಭತ್ತ ಕೃಷಿಕ ಹುದೂರು ಗ್ರಾಮ