ಲೋಕಾಯುಕ್ತಕ್ಕೆ ಸಾರ್ವಜನಿಕರ ಅರ್ಜಿಗಳ ಸುರಿಮಳೆ

| Published : Jun 15 2024, 01:00 AM IST

ಸಾರಾಂಶ

ಗದಗ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸಾರ್ವಜನಿಕ ಅಹವಾಲು ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗದಗ

ಗದಗ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸಾರ್ವಜನಿಕ ಅಹವಾಲು ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ಸಭೆ ನಡೆಸಿದರು. ಆದರೆ, ಸಭೆಯಲ್ಲಿ ಸಾರ್ವಜನಿಕರ ವ್ಯಾಪಕವಾದ ಸಲ್ಲಿಕೆಯಾದ ಅರ್ಜಿಗಳನ್ನು ಗಮನಿಸಿದಾಗ, ಜಿಲ್ಲೆಯಲ್ಲಿ ಅಧಿಕಾರಿಗಳು ಸಣ್ಣ-ಸಣ್ಣ ಕೆಲಸಗಳಿಗೂ ಸಾರ್ವಜನಿಕರನ್ನು ಸತಾಯಿಸುತ್ತಾರೆ ಎನ್ನುವುದು ಸ್ಪಷ್ಟವಾಯಿತು.

ಶೌಚಾಲಯಗಳ ನಿರ್ಮಾಣ, ಮನೆ ಮುಂದೆ ಗಟಾರು ನಿರ್ಮಾಣ, ಮನೆ ಕಟ್ಟಲು ಅಕ್ಕ ಪಕ್ಕದವರಿಂದ ತಕರಾರು, ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವುದು, ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದು ಹೀಗೆ ಹತ್ತು ಹಲವಾರು ತೀರಾ ಸಣ್ಣ ಸಮಸ್ಯೆಗಳೇ ಉಪ ಲೋಕಾಯುಕ್ತರಿಗೆ ಸಲ್ಲಿಕೆಯಾದ ದೂರಿನಲ್ಲಿ ಪ್ರಮುಖವಾಗಿದ್ದರು.

ಮೊದಲನೆಯದಾಗಿ ರೋಣ ತಾಲೂಕಿನ ಸವಡಿ ಗ್ರಾಮದ ಯಚ್ಚರಪ್ಪ ಹೂಗಾರ ಅವರು ತಮ್ಮ ಕುಟುಂಬಕ್ಕೆ ಸರಕಾರ ನೀಡಿದ್ದ ಮಂಜೂರಾತಿ ಜಮೀನನ್ನು ತಮ್ಮ ಹೆಸರಿಗೆ ನೋಂದಾಯಿಸುವಂತೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರು ನೀಡಿದ್ದರು. ಅದಕ್ಕೆ ಉಪಲೋಕಾಯುಕ್ತರು ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರೋಣ ತಹಸೀಲ್ದಾರರಿಗೆ ಸೂಚನೆ ನೀಡಿದರು.

ಭಾರತಿ ಯಮನೂರಪ್ಪ ಹೊಸಮನಿ ಅವರು ಕಳೆದ 5 ವರ್ಷಗಳಿಂದ ಶೌಚಾಲಯ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರೂ ಕೇವಲ 6 ತಿಂಗಳ ಗೌರವಧನ ಮಾತ್ರ ನೀಡಿದ್ದಾರೆ. ಬಾಕಿ ಗೌರವಧನ ವಿತರಣೆಗೆ ಅರ್ಜಿ ಸಲ್ಲಿಸಿದ್ದರು. ನಿಮ್ಮ ಬಳಿ 5 ವರ್ಷಗಳ ಕಾಲ ಶೌಚಾಲಯ ನಿರ್ವಹಣೆ ಮಾಡಿದ್ದರ ಕುರಿತು ದಾಖಲಾತಿ ಇದೆಯಾ ಎಂದು ಪ್ರಶ್ನಿಸಿದರು. ಆಗ ದೂರುದಾರರು ನಗರಸಭೆ ಸದಸ್ಯರಿಗೆ ಮಾಹಿತಿ ಇದೆ ಎಂದರು. ಉಪಲೋಕಾಯುಕ್ತರು ನಗರಸಭೆ ಸದಸ್ಯರ ದಾಖಲಾತಿ ಪರಿಗಣಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಈ ಕುರಿತು ದಾಖಲಾತಿ ನೀಡಿದ್ದರೆ, ಪರಿಗಣಿಸಲಾಗುವುದು. ಆದರೂ, ನಗರಸಭೆ ಪೌರಾಯುಕ್ತರಿಗೆ ದಾಖಲಾತಿ ಪರಿಶೀಲಿಸಿ ಕ್ರಮ ಜರುಗಿಸುವಂತೆ ಸೂಚಿಸಿದರು.

ಉಳಿದಂತೆ ಸುಧಾಕರ ವೀರಾಪೂರ ಅವರು ಅಕ್ರಮ ನೇಮಕಾತಿ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರು. ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಪೌರಾಯುಕ್ತರಿಗೆ ಪರಿಶೀಲಿಸುವಂತೆ ಸೂಚಿಸಿದರು. ಮುಂಡರಗಿ ಮಂಜುನಾಥ ಕಟ್ಟಿಮನಿ ಅವರು ಸಿಂಧುತ್ವ ಪ್ರಮಾಣ ಪತ್ರ ವಿತರಣೆ ವಿಳಂಬ ಕುರಿತು ಅರ್ಜಿ ಸಲ್ಲಿಸಿದ್ದರು. ಉಪಲೋಕಾಯುಕ್ತರು 4 ತಿಂಗಳು ವಿಳಂಬ ಯಾಕೆ ಎಂದು ತಹಸೀಲ್ದಾರರಿಗೆ ಪ್ರಶ್ನಿಸಿದರು.

ಅವರ ದಾಖಲಾತಿ ಪ್ರಕಾರ ಅವರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಲಾಗಿದೆ. ಅವರು ಬಯಸಿದ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎಂದರು. ಈ ಕುರಿತು ಉಪ ಲೋಕಾಯುಕ್ತರು ದೂರುದಾರರಿಗೆ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ, ದಾಖಲಾತಿ ಪರಿಶೀಲಿಸಿ ಪೂರಕ ಪ್ರಮಾಣ ಪತ್ರ ನೀಡುತ್ತಾರೆ ಎಂದು ಹೇಳಿದರು.

ರೋಣ ತಾಲೂಕಿನ ಕುರಡಗಿ ಗ್ರಾಮದ ಶೌಕತ್ ಅಲಿ ನರೇಗಲ್ ಅವರು ಕುರಡಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಉಪಲೋಕಾಯುಕ್ತರು ಲೋಕೋಪಯೋಗಿ ಇಲಾಖೆ ಹಾಗೂ ಕೆಎಸ್‍ಆರ್ ಟಿಸಿ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಪ್ರಕಾಶ ನಾಡಗೇರ, ನಿಬಂಧಕ ಅಮರನಾರಾಯಣ ಕೆ, ಉಪಲೋಕಾಯುಕ್ತರ ಆಪ್ತಕಾರ್ಯದರ್ಶಿ ಕಿರಣ ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಪಂ ಸಿಇಒ ಭರತ್ ಎಸ್., ಎಸ್ಪಿ ಬಿ.ಎಸ್. ನೇಮಗೌಡ, ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ, ಡಿವೈಎಸ್ಪಿ ವಿಜಯ ಬಿರಾದಾರ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು. ನಿರ್ಲಕ್ಷ್ಯಕ್ಕೆ ಕನ್ನಡಿ

ಸಲ್ಲಿಕೆಯಾಗಿರುವ ಬಹುತೇಕ ಅರ್ಜಿಗಳನ್ನು ಗ್ರಾಪಂ ಮಟ್ಟದಲ್ಲಿ (ಪಿಡಿಒ) ಇಲ್ಲವೇ ಅದಕ್ಕಿಂತ ಮೇಲಿನ ಅಧಿಕಾರಿಗಳೇ ಬಗೆ ಹರಿಸಬಹುದಿತ್ತು. ಆದರೆ, ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ಅತೀ ಹೆಚ್ಚು ಸಮಸ್ಯೆಗಳು ಗದಗ ಬೆಟಗೇರಿ ನಗರಸಭೆಗೆ ಸಂಬಂಧಿಸಿದ್ದವು. ಇಷ್ಟೊಂದು ಸಣ್ಣ ಕೆಲಸಗಳ ಅರ್ಜಿಗಳು ಉಪಲೋಕಾಯುಕ್ತರವರಿಗೂ ತಲುಪಿವೆ ಎಂದರೆ ಜಿಲ್ಲೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದು ಕನ್ನಡಿಯಾಗಿದೆ. ಇದನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಬೇಕಿದೆ.