ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲವರೆ ಇರಲಿ: ಡಾ.ಶ್ರೀ ಬಸವಮರುಳಸಿದ್ದ ಸ್ವಾಮೀಜಿ

| Published : Jun 15 2024, 01:00 AM IST

ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲವರೆ ಇರಲಿ: ಡಾ.ಶ್ರೀ ಬಸವಮರುಳಸಿದ್ದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆ ಬಲ್ಲವರನ್ನೆ ಕಡ್ಡಾಯ ವಾಗಿ ನಿಯೋಜಿಸಬೇಕೆಂದು ಬಸವತತ್ತ್ವ ಪೀಠದ ಅಧ್ಯಕ್ಷ ಡಾ. ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಹೇಳಿದರು.

- ಪಟ್ಟಣ ಸಹಕಾರ ಬ್ಯಾಂಕ್ ಕಲ್ಯಾಣನಗರ ಶಾಖೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆ ಬಲ್ಲವರನ್ನೆ ಕಡ್ಡಾಯ ವಾಗಿ ನಿಯೋಜಿಸಬೇಕೆಂದು ಬಸವತತ್ತ್ವ ಪೀಠದ ಅಧ್ಯಕ್ಷ ಡಾ. ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಹೇಳಿದರು.ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ ನಗರದ ಹೊರವಲಯ ಬೈಪಾಸ್ ರಸ್ತೆ ಕಲ್ಯಾಣನಗರ ವೀರಶೈವ ಮಹಾಸಭಾ ಕಾಂಪ್ಲೆಕ್ಸ್‌ನಲ್ಲಿ ಪ್ರಾರಂಭಿಸಿರುವ ಬ್ಯಾಂಕಿನ ಪ್ರಥಮ ಶಾಖೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.ಬ್ಯಾಂಕ್‌ಗಳಲ್ಲಿ ಎಲ್ಲ ರೀತಿಯ ಜನರು ವ್ಯವಹರಿಸುವುದು ಇಂದು ಅನಿವಾರ್‍ಯವಾಗಿದೆ. ಬಹುತೇಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಉತ್ತರ ಭಾರತದ ಸಿಬ್ಬಂದಿಯನ್ನು ಕಾಣುತ್ತೇವೆ. ಬಹಳಷ್ಟು ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ಅನಕ್ಷರಸ್ಥರು, ವಯೋವೃದ್ಧರು, ರೈತಾಪಿ ವರ್ಗಕ್ಕೆ ಇಂಗ್ಲೀಷ್ ಅಥವಾ ಹಿಂದಿ ಭಾಷೆ ಗೊತ್ತಿರುವುದಿಲ್ಲ ಎಂದರು. ವ್ಯವಹಾರಕ್ಕೆ ಸ್ಥಳೀಯ ಭಾಷೆ ಬಳಸಬೇಕೆಂಬ ಕನಿಷ್ಠ ತಿಳುವಳಿಕೆಯನ್ನಾದರೂ ಹೊಂದಬೇಕು. ಸೇವೆ ಉದ್ದೇಶ ಸಫಲವಾಗಬೇಕಾದರೆ ಜನರಿಗೆ ಗೊತ್ತಿರುವ ಭಾಷೆಯಲ್ಲಿ ಸಿಬ್ಬಂದಿ ವ್ಯವಹಾರ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಕರ್ನಾಟಕದಲ್ಲಿ ಕಾರ್‍ಯನಿರ್ವಹಿಸುವಾಗ ಸಿಬ್ಬಂದಿ ಇಲ್ಲಿಯ ಕನ್ನಡ ಭಾಷೆ ಕಲಿತಿರಬೇಕೆಂದು ಸ್ವಾಮೀಜಿ ಒತ್ತಾಯಿಸಿದರು. ಸಹಕಾರಿ ಸಂಘ ಮತ್ತು ಬ್ಯಾಂಕ್‌ಗಳು ನಾಗರಿಕರಿಗೆ ಸುಲಭವಾಗಿ ಎಟಕುತ್ತವೆ. ಸ್ಥಳೀಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರು ಇರುವುದರಿಂದ ಜನರ ಅಗತ್ಯ ಅರಿವು ಹೊಂದಿರುತ್ತಾರೆ. ವಿಶೇಷವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯವಹರಿಸಲು ಅನೇಕ ಕಾಯ್ದೆ ಕಟ್ಟಳೆಗಳು ರೋಸು ಹಿಡಿಸುತ್ತವೆ. ಸಾಲ ಪಡೆಯುವಾಗ ಅವರು ಕೇಳುವ ದಾಖಲಾತಿ ಹೊಂದಿಸಿಕೊಡಲು ಬಹಳಷ್ಟು ಸಮಯವೇ ಬೇಕಾಗುತ್ತದೆ. ತುರ್ತು ಅಗತ್ಯತೆಗೆ ಅನುಗುಣವಾಗಿ ನಂಬಿಕೆ, ವಿಶ್ವಾಸಾರ್ಹತೆ ಪರಿಗಣಿಸಿ ಸ್ಥಳೀಯ ಬ್ಯಾಂಕ್‌ಗಳಲ್ಲಿ ಶೀಘ್ರದಲ್ಲೆ ಸಾಲ ಸಿಗುತ್ತದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ ಎಂದು ಸ್ವಾಮೀಜಿ ನುಡಿದರು.

ಶಾಖೆಯನ್ನು ಲೋಕಾರ್ಪಣೆಗೊಳಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸಹಕಾರಿ ಬ್ಯಾಂಕ್‌ ಗಳು ಶ್ರೀಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ವಿಫುಲ ಜನಸಂಖ್ಯೆ ಹೊಂದಿರುವ ಭಾರತದಂತಹ ಬೃಹತ್ ದೇಶಕ್ಕೆ ಸಹಕಾರಿ ವ್ಯವಸ್ಥೆ ಉಪಯುಕ್ತ. ಪರಸ್ಪರ ಸಹಕಾರದಿಂದ ಬೆಳೆಯುವ ಆಶೋತ್ತರಗಳನ್ನು ಹೊಂದಿರುವ ಸಹಕಾರಿ ಸಂಸ್ಥೆಗಳು ಜನಸಾಮಾನ್ಯರ ಪ್ರೀತಿ ವಿಶ್ವಾಸಗಳಿಸಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ನಂಜೇಗೌಡ ಮಾತ ನಾಡಿ, 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬ್ಯಾಂಕ್ 42 ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದೆ. 74 ಕೋಟಿ ರು. ಠೇವಣಿಯನ್ನು ಬ್ಯಾಂಕಿನ ಮೇಲೆ ವಿಶ್ವಾಸವಿಟ್ಟು ಜನ ನೀಡಿದ್ದಾರೆ. ವಿವಿಧ ರೀತಿ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲು ಆಡಳಿತ ಮಂಡಳಿ ಸದಾ ಕಾರ್‍ಯಪ್ರವೃತ್ತವಾಗಿದೆ. ಹೆಚ್ಚು ಜನರಿಗೆ ಬ್ಯಾಂಕಿನ ಸೇವಾ ಸೌಲಭ್ಯ ಸಿಗಬೇಕೆಂಬ ಆಶಯದೊಂದಿಗೆ ಇಲ್ಲಿ ಮೊದಲ ಶಾಖೆ ಆರಂಭಿಸ ಲಾಗಿದೆ ಎಂದರು.

ಸಹಕಾರ ಇಲಾಖೆ ಉಪ ನಿಬಂಧಕಿ ತೇಜಸ್ವಿನಿಗೌಡ ಮತ್ತು ಸಹಾಯಕ ನಿಬಂಧಕ ಎ.ಆರ್.ರಘು ಸೇವಾ ಕ್ಷೇತ್ರ ವಿಸ್ತರಿಸಿಕೊಂಡಿರುವ ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್‌ನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಭಗವತಿ ಹರೀಶ್, ಜಿ.ರಘು, ಶಶಿಧರ್, ಧರ್ಮರಾಜು, ಸಿ.ಆರ್ .ಮಂಜುನಾಥ್, ಕೆ.ಡಿ.ಪುಟ್ಟಣ್ಣ, ಕೆ.ಟಿ.ಮಂಜುನಾಥ್, ಶಾಖಾ ವ್ಯವಸ್ಥಾಪಕ ಅಶೋಕ, ಶೈಲಾ ಉಪಾಧ್ಯಕ್ಷ ಬಿ.ಎಚ್. ಶ್ರೀಕಾಂತ ಪೈ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಬಿ.ವಿ.ರಾಘವೇಂದ್ರ ಉಪಸ್ಥಿತರಿದ್ದರು..

ಪೋಟೋ ಫೈಲ್‌ ನೇಮ್‌ 14 ಕೆಸಿಕೆಎಂ 1ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ ಕಲ್ಯಾಣನಗರ ವೀರಶೈವ ಮಹಾಸಭಾ ಕಾಂಪ್ಲೆಕ್ಸ್‌ನಲ್ಲಿ ಪ್ರಾರಂಭಿಸಿರುವ ಪ್ರಥಮ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಶಾಸಕ ಎಚ್‌.ಡಿ. ತಮ್ಮಯ್ಯ, ಬ್ಯಾಂಕಿನ ಅಧ್ಯಕ್ಷ, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.