ಕೇಂದ್ರ ಮಂತ್ರಿ ಎಚ್‌ಡಿಕೆಗೆ ಅದ್ಧೂರಿ ಸ್ವಾಗತ

| Published : Jun 15 2024, 01:00 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್‌‍ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್‌‍ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ಶುಕ್ರವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಿಂದ ಹೊರಬರುತ್ತಿದ್ದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಬರಮಾಡಿಕೊಳ್ಳಲು ಮುಖಂಡರು ಮುಗಿಬಿದ್ದರು. ಹೂ ಮಾಲೆ ಹಾಕಿ, ಪುಷ್ಪಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಸ್ಥಳದಲ್ಲಿ ತಳ್ಳಾಟ ನಡೆಯಿತು. ಈ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್‌ ಯೋಧರು ಜೆಡಿಎಸ್‌ ಕಾರ್ಯಕರ್ತರನ್ನು ಚದುರಿಸಿದರು.

ಬಳಿಕ ಬೆಂಗಳೂರಿನತ್ತ ಹೊರಟ ಕುಮಾರಸ್ವಾಮಿ ಅವರಿಗೆ ವಿಮಾನ ನಿಲ್ದಾಣದ ಸಾದಹಳ್ಳಿ ಟೋಲ್ ಬಳಿ ಜಮಾಯಿಸಿದ್ದ ಜೆಡಿಎಸ್ ಕಾರ್ಯಕರ್ತರು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಸ್ವಾಗತಿಸಿದರು. ಜೆಸಿಬಿ ಹಾಗೂ ಕ್ರೇನ್‌ಗಳ ಮೂಲಕ ಬೃಹತ್ ಸೇಬಿನ ಹಾರ, ಹೂಮಾಲೆ ಹಾಕಿ ತಮ್ಮ ಅಭಿಮಾನ ಮೆರೆದರು. ಈ ವೇಳೆ ಕುಮಾರಸ್ವಾಮಿ ಪರ ಜೈಕಾರ ಕೂಗಲಾಯಿತು.

ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಮೈತ್ರಿ ಪಕ್ಷದ ನಾಯಕರು, ಕಾರ್ಯಕರ್ತರ ಶಕ್ತಿಯಿಂದ ಮತ್ತು ದೇವರ ಆಶೀರ್ವಾದದಿಂದ ಕೇಂದ್ರ ಸಚಿವನಾಗಿದ್ದು, ರಾಜ್ಯದ ಜನತೆಯ ಒಂದೊಂದೇ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಈಗಲೇ ಸನ್ಮಾನ ಸ್ವೀಕರಿಸಲು ಇಚ್ಛಿಸುವುದಿಲ್ಲ. ನಾನು ಮಾಡುವ ಕೆಲಸಗಳನ್ನು ನೋಡಿಕೊಂಡು ಅಭಿನಂದಿಸಬೇಕು. ಯಾವಾಗಲೂ ನನ್ನನ್ನು ಹೊಗಳುವುದಕ್ಕಿಂತ ತಪ್ಪುಗಳನ್ನು ಸಹ ಮರೆಮಾಚದೆ ತಿಳಿಸಿದರೆ, ತಿದ್ದಿಕೊಂಡು ಹೋಗಲು ಸಹಕಾರಿಯಾಗಲಿದೆ ಎಂದರು.

ಜೆಡಿಎಸ್‌ ಪಕ್ಷ ನನ್ನದಾಗಲಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರದಾಗಲಿ ಅಲ್ಲ. ಪಕ್ಷವು ಜನತೆಯದ್ದಾಗಿದ್ದು, ಅವರು ಬೆಳೆಸಿದ ಪಕ್ಷವಾಗಿದೆ. ಸಚಿವನಾಗಿರುವ ಕಾರಣ ರಾಜ್ಯಕ್ಕೆ ಹೆಚ್ಚಿನ ವೇಳೆ ಬರಲು ಸಾಧ್ಯವಾಗದಿರಬಹುದು. ಆದರೆ, ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸಲು ಪಕ್ಷದ ಯುವ ಮುಖಂಡ ನಿಖಿಲ್‌ ಕುಮಾರಸ್ವಾಮಿ ಸೇರಿದಂತೆ ಇತರೆ ಮುಖಂಡರು ಇರಲಿದ್ದು, ಸ್ಪಂದಿಸಲಿದ್ದಾರೆ. ಜನತೆಯ ಜತೆ ನಾನು ಯಾವಾಗಲೂ ಇದ್ದು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು. ಬಳಿಕ ಕುಮಾರಸ್ವಾಮಿ ಅವರು ಮುಖಂಡರೊಂದಿಗೆ ಪಕ್ಷದ ಕಚೇರಿಗೆ ಆಗಮಿಸಿದರು.ಜೆಡಿಎಸ್‌ ಮುಗಿಸಿದ್ದೇವೆ ಎಂದವರಿಗೆ ಉತ್ತರಿಸಲ್ಲ: ಎಚ್‌ಡಿಕೆ ತಿರುಗೇಟುಜೆಡಿಎಸ್ ಪಕ್ಷವನ್ನು ಮುಗಿಸಿದ್ದೇವೆಂಬ ದುರಹಂಕಾರದಲ್ಲಿ ಮಾತನಾಡಿದವರಿಗೆ ಉತ್ತರ ಕೊಡುವುದಿಲ್ಲ. ನನಗೆ ಬೇಕಾಗಿರುವುದು ರಾಜ್ಯದ ಅಭಿವೃದ್ಧಿಯೇ ಹೊರತು ರಾಜಕೀಯವಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೋದ್ಯಮ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇನ್ನು ಮುಂದೆ ನಾಲ್ಕು ದಿನ ದೆಹಲಿಯಲ್ಲಿ ಕೆಲಸ ಮಾಡಲಿದ್ದು, ಎರಡು ದಿನ ಕರ್ನಾಟಕದಲ್ಲಿ ಇರುತ್ತೇನೆ. ಅದರಲ್ಲೂ ಒಂದು ದಿನ ಮಂಡ್ಯದಲ್ಲಿ ಇರುತ್ತೇನೆ ಎಂದಿದ್ದಾರೆ.

ಕೇಂದ್ರ ಸಚಿವರಾದ ಬಳಿಕ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿ ಜೆಡಿಎಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.

ಜೆಡಿಎಸ್‌ -ಬಿಜೆಪಿ ಮೈತ್ರಿಯನ್ನು ಮುಗಿಸಲು ಕಾಂಗ್ರೆಸ್‌ ಹುನ್ನಾರ ನಡೆಸಿತು. ಆದರೆ, ಅದು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂಭತ್ತು ಸ್ಥಾನ ಗೆಲುವು ಸಾಧಿಸಿರುವುದು ಶ್ರಮದಿಂದಲ್ಲ, ಬದಲಿಗೆ ಮೈತ್ರಿ ಪಕ್ಷದವರು ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಗೆದ್ದಾಯಿತು ಎಂದು ಶ್ರಮ ಸ್ವಲ್ಪ ಕಡಿಮೆ ಹಾಕಿದರ ಫಲವಾಗಿ ಕಾಂಗ್ರೆಸ್‌ ಜಯಗಳಿಸಿತು. ಇಲ್ಲದಿದ್ದರೆ ಮೈತ್ರಿ ಅಭ್ಯರ್ಥಿಗಳು ಜಯಗಳಿಸುತ್ತಿದ್ದರು ಎಂದರು.ನಾನು ಕೇಂದ್ರ ಸಚಿವನಾದ ಮೇಲೆ ಕೆಲವರಿಗೆ ನಿದ್ದೆ ಬರುತ್ತಿಲ್ಲ ಮತ್ತು ಊಟಕ್ಕೆ ಕೂತರೆ ಅನ್ನ ಸೇರುತ್ತಿಲ್ಲ. ಆಗಲೂ ಅವರಿಗೆ ಕುಮಾರಸ್ವಾಮಿ ನೆನಪಿಗೆ ಬರುತ್ತಾರೆ. ನಾನು ಯಾರ ಮೇಲೂ ದ್ವೇಷ ಸಾಧಿಸಲ್ಲ. ಆ ಜಾಯಮಾನ ನನ್ನದಲ್ಲ. ಹಾಸನದಲ್ಲಿ ಜಯಗಳಿಸಲು ಪೆನ್ ಡ್ರೈವ್ ಗಳನ್ನು ಹರಿಬಿಟ್ಟು ನೀಚ ರಾಜಕಾರಣ ಮಾಡಿದರು. ಪೆನ್ ಡ್ರೈವ್ ಪ್ರಕರಣದಲ್ಲಿ ಆಡಿಯೋ ಬಂತಲ್ಲಾ, ಅದರ ಬಗ್ಗೆ ಏನು ಕ್ರಮ ತೆಗೆದುಕೊಂಡರು? ಹೆಣ್ಣು ಮಕ್ಕಳ ಗೌರವ ಹಾಳು ಮಾಡಿದ ನೀಚರು. ಚುನಾವಣೆಯಲ್ಲಿ ಗೆಲ್ಲಲು ಹಲವು ಕುಟುಂಬಗಳನ್ನು ಹಾಳು ಮಾಡಿರುವ ನೀಚ ಸರ್ಕಾರ. ಸಿಡಿ ಶಿವ ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಕೇಂದ್ರ ಸಚಿವನಾಗಿ ಆ ಹುದ್ದೆಗೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದು ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ಸೋಲನುಭವಿಸಿದ್ದಕ್ಕೆ ಜಿಲ್ಲೆಯ ಜನತೆಯನ್ನಾಗಲಿ, ಕಾರ್ಯಕರ್ತರನ್ನಾಗಲಿ ದೂಷಿಸುವುದಿಲ್ಲ. ಆ ಜಿಲ್ಲೆಯ ಜನತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಶಕ್ತಿ ನೀಡಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೆ ಕಾರ್ಯಕರ್ತರನ್ನು ಮರೆಯುವುದಿಲ್ಲ. ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಯಾಗಿದ್ದು, ಮುಂದಿನ ದಿನದಲ್ಲಿ ಒಳ್ಳೆಯ ಕಾಲ ಬರಲಿದೆ. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕುಟುಂಬ ಕುರಿತು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.

ರಾಜಕೀಯದಲ್ಲಿ ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನೆರೆಯ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಹಿಂದಿನ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆದ್ದಿದ್ದರು? ಕಡೆಗೆ ಅನೇಕ ಶಾಸಕರು ಅವರನ್ನು ಬಿಟ್ಟು ಹೋದರು. ಅವರನ್ನು ಜೈಲಿಗೂ ಕಳಿಸಿದರು. ಈಗ ಮತ್ತೆ ಎಷ್ಟು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದರು ಎನ್ನುವುದನ್ನು ಗಮನಿಸಬೇಕು. ಕರ್ನಾಟಕದಲ್ಲಿಯೂ ಇದು ನಡೆಯುತ್ತದೆ. ಒಂದು ಸಲ ಅವಕಾಶ ಕೊಡಿ ಎಂದು ಕೇಳಿದೆ. ನಾನು ಹೇಳಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದೆ. ಅದಕ್ಕೂ ಅವಹೇಳನ ಮಾಡಿದರು. ಚಕ್ರ ತಿರುಗುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.ಕೃಷಿ ಸಚಿವರಾಗಿ ಕೆಲಸ ಮಾಡಬೇಕೆಂಬ ಆಸೆ ರಾಜ್ಯದ ಜನತೆಯಲ್ಲಿತ್ತು. ಕೈಗಾರಿಕೆ ಸಚಿವ ಸ್ಥಾನ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದೊಡ್ಡ ಖಾತೆಗಳ ಜವಾಬ್ದಾರಿಯನ್ನು ನೀಡಿದ್ದಾರೆ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇನೆ. ಸಮಯ ವ್ಯರ್ಥ ಮಾಡುವುದಿಲ್ಲ. ಎಲ್ಲ ಇಲಾಖೆಯಲ್ಲಿ ನಮ್ಮ ರಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇನೆ. ಇಲಾಖೆಯಲ್ಲಿ ನಮ್ಮ ರಾಜ್ಯದ ಸಮಸ್ಯೆಗೆ ಪರಿಹಾರ ತರುವ ಕೆಲಸ ಮಾಡಲಾಗುವುದು. ರೈತರ ಕೃಷಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೆಗೌಡ, ರಾಜ್ಯ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಮಲ್ಲೇಶ್ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯ ನಾಯಕ್, ಶಾಸಕರಾದ ಎ.ಮಂಜು, ಸಮೃದ್ಧಿ ಮಂಜುನಾಥ್, ಸಿ.ಎನ್.ಬಾಲಕೃಷ್ಣ, ಕರೆಮ್ಮ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ ಇತರರು ಉಪಸ್ಥಿತರಿದ್ದರು.