ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ ಹಣ್ಣು ಕೊಯ್ಲು ಪೂರ್ಣಗೊಳಿಸುವುದಕ್ಕೂ ಮುನ್ನವೇ ಕಾಫಿ ಗಿಡದಲ್ಲಿ ಹೂ ಅರಳಿದ್ದು, ಬೆಳೆಗಾರರು ಹಣ್ಣು ಕೊಯ್ಲನ್ನು ಮುಂದೆ ಹಾಕಿದ್ದಾರೆ. ವರ್ಷದ ಮೊದಲ ಮಳೆ ತಾಲೂಕಿನ ಕಾಫಿ ಬೆಳೆಗಾರರಿಗೆ ಕಹಿ ಅನುಭವ ಉಂಟುಮಾಡಿದ್ದು, ಜನವರಿ ತಿಂಗಳ ಮೊದಲ ವಾರದಲ್ಲಿ ತಾಲೂಕಿನ ಬಹುತೇಕ ಭಾಗದಲ್ಲಿ ಒಂದು ಅಂಗುಲದಿಂದ ಮೂರು ಅಂಗುಲದವರಗೆ ಭಾರಿ ಮಳೆಸುರಿದ ಪರಿಣಾಮ ಜನವರಿ ತಿಂಗಳ ಎರಡನೇ ವಾರದ ಆರಂಭದಲ್ಲಿ ಕಾಫಿಗಿಡದಲ್ಲಿ ಹೂವು ಮೂಡಿದ್ದು ಪರಿಣಾಮ ಕಾಫಿ ಹಣ್ಣು ಕೊಯ್ಲು ನಿಲುಗಡೆ ಮಾಡಲಾಗಿದೆ. ನಿಲುಗಡೆ ಏಕೆ?:ಸಾಮಾನ್ಯವಾಗಿ ಕಾಫಿ ಹಣ್ಣು ಕೊಯ್ಲು ನಡೆಸಿದ ತಿಂಗಳ ನಂತರ ಅಂದರೆ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಸ್ವಾಭಾವಿಕವಾಗಿ ಮಳೆ ಬಂದರೆ ಅಥಾವ ಹನಿ ನೀರಾವರಿ ಮೂಲಕ ಹೂವು ಬಿಡಿಸುವುದು ಬೆಳೆಗಾರರ ಅಳವಡಿಸಿಕೊಂಡಿದ್ದ ಪರಿಪಾಠ. ಆದರೆ, ಈ ಬಾರಿ ಕಾಫಿ ಗಿಡದಲ್ಲೆ ಇರುವ ವೇಳೆ ಕಾಫಿ ಗಿಡಗಳು ಹೂವಾಗಿರುವುದರಿಂದ ಕೊಯ್ಲು ನಡೆಸಿದರೆ ಹೂವು ನೆಲಸೇರುತ್ತದೆ ಎಂಬ ಭಯ ವಾರಗಳ ಕಾಲ ತೋಟಕ್ಕೆ ಕಾಲಿಡದಂತ ಪರಿಸ್ಥಿತಿ ಸೃಷ್ಟಿಸಿದೆ. ಇತ್ತ ಹೂವು ಮಾಗಿದ ನಂತರ ಹಣ್ಣು ಕೂಯ್ಲು ನಡೆಸಿದರು ಕಾರ್ಮಿಕರ ಕೈಸ್ಪರ್ಶದಿಂದ ಸಾಕಷ್ಟು ಹೂವು ಧರೆ ಸೇರುವುದರಿಂದ ಮುಂದಿನ ಇಳುವರಿ ಕುಸಿಯಲಿದೆ ಎಂಬ ಆತಂಕ ಮನೆ ಮಾಡಿದೆ. ಡಿಸಂಬರ್ ತಿಂಗಳಿನ ಮಧ್ಯಭಾಗದಲ್ಲೂ ಸಹ ತಾಲೂಕಿನ ಹೆತ್ತೂರು ಹಾಗೂ ಹಾನುಬಾಳ್ ಹೋಬಳಿಯಾದ್ಯಂತ ಮಳೆಯಾಗಿದ್ದ ಕಾರಣ ಈ ಭಾಗದಲ್ಲಿ ಶೇ ೩೦ರಷ್ಟು ಗಿಡಗಳಲ್ಲಿ ಹೂವು ಮೂಡಿತ್ತು.
ಸದ್ಯ ಡಿಸೆಂಬರ್ ತಿಂಗಳಿನಿಂದಲೇ ಕಾಫಿಗಿಡದಲ್ಲಿ ಹೂವು ಮೂಡುತ್ತಿರುವುದರಿಂದ ಮುಂದಿನ ಹಂಗಾಮಿನಲ್ಲಿ ರೋಬಸ್ಟ್ ಕಾಫಿ ಫಸಲು, ಅರೇಭಿಕ ಕಾಫಿಗಿಂತ ಮುಂಚಿತವಾಗಿ ಬರಲಿದೆ ಎಂಬ ಆತಂಕ ಒಂದೇಡೆಯಾದರೆ ಮೂರು ಹಂತದಲ್ಲಿ ಕಾಫಿ ಕೊಯ್ಲು ನೆಡಸ ಬೇಕಾಗುತ್ತದೆ ಎಂಬ ಚಿಂತೆ ಸಹ ಬೆಳೆಗಾರರನ್ನು ಕಾಡುತ್ತಿದೆ. ಲಾಭವೆಲ್ಲ ಮಣ್ಣುಪಾಲು:ಕಾಫಿಗೆ ಉತ್ತಮ ಧಾರಣೆ ಇರುವುದರಿಂದ ಈ ಬಾರಿ ಶೇ. ೩೦ ರಿಂದ ೪೦ ರಷ್ಟು ಲಾಭದ ಲೆಕ್ಕಾಚಾರದಲ್ಲಿದ್ದರು. ಸದ್ಯ ಹವಮಾನ ವೈಪರೀತ್ಯದಿಂದ ಶೇ ೨೦ರಿಂದ ೩೦ರಷ್ಟು ಕಾಫಿ ನೆಲಸೇರಿರುವುದು ಹಾಗೂ ಕೊಯ್ಲು ನಡೆಸಲು ಅಧಿಕ ವೆಚ್ಚ ತಗುಲುತ್ತಿರುವುದರಿಂದ ಕಾಫಿ ಬೆಳೆಯಿಂದ ದೂರಕುವ ಲಾಭ ಈ ಬಾರಿ ಅಷ್ಟಕ್ಕಷ್ಟೆ ಎಂಬ ಲೆಕ್ಕಾಚಾರ ಕೇಳಿ ಬರುತ್ತಿದೆ. ಬಿಸಿಲು:
ಸದ್ಯ ಕಳೆದೊಂದು ತಿಂಗಳಿನಿಂದ ಮೋಡ, ಮಳೆಯಿಂದ ಚಿಂತಿಗೀಡಾಗಿದ್ದ ಬೆಳೆಗಾರರ ವಲಯ ಸದ್ಯ ಕಳೆದ ಮೂರು ದಿನಗಳಿಂದಿರುವ ಚುರುಕು ಬಿಸಲು ಕಂಡು ಖುಷಿಯಾಗಿದ್ದು ಸದ್ಯ ಮಳೆಯಾಗದಿದ್ದರೆ ಸಾಕು ಎಂದು ಕಂಡಕಂಡ ದೇವರಿಗೆ ಪ್ರಾರ್ಥಿಸುತ್ತಿದ್ದಾರೆ.ಕಳ್ಳತನದಲ್ಲೆ ವರ್ಷದ ದುಡಿಮೆ:
ತಾಲೂಕಿನಲ್ಲಿ ಸಾಕಷ್ಟು ಕಂಪನಿ ತೋಟಗಳಿದ್ದರೆ ಮತ್ತಷ್ಟು ಬೆಂಗಳೂರಿನ ಉದ್ಯಮಿಗಳು ತಮ್ಮ ಕಪ್ಪುಹಣ ಬಿಳುಪಿಗಾಗಿ ತೋಟಗಳನ್ನು ಖರೀಧಿಸಿ ಪಾಳುಬಿಟ್ಟಿದ್ದರೆ ಹೀಗೆ ಪಾಳು ಬಿಟ್ಟಿರುವ ತೋಟಗಳ ವಿಸ್ತೀರ್ಣ ೧೦ ಸಾವಿರ ಎಕರೆಗೊ ಅಧಿಕ ಎನ್ನಲಾಗುತ್ತಿದೆ. ಹೀಗೆ ಪಾಳುಬಿಟ್ಟಿರುವ ತೋಟಗಳ ಮೇಲ್ವಿಚಾರಣೆ ಸಹ ನಡೆಯದ ಪರಿಣಾಮ ಸಾಕಷ್ಟು ಜನರು ತಮ್ಮದೆ ತೋಟದ ಕಾಫಿ ಎಂಬಷ್ಟು ರಾಜಾರೋಷವಾಗಿ ಕಾಫಿ ಕಳ್ಳತನ ನಡೆಸುತ್ತಿದ್ದು ೨೫ ರಿಂದ ೫೦ ಮೂಟೆಯಷ್ಟು ಕಾಫಿಯನ್ನು ಒಂದೊಂದು ಕುಟುಂಬಗಳು ಕೂಯ್ಲು ನಡೆಸುತ್ತಿವೆ ಎಂಬುದು ಸಮೀಪವರ್ತಿಗಳ ದೂರು. ಸರ್ಕಾರಿ ದಿಣ್ಣೆಗಳು ಈಗ ಕಣ:ಏಕಕಾಲಕ್ಕೆ ಬರುವ ಕಾಫಿಯನ್ನು ಒಣಗಿಸಲು ಕಣದ ಸಮಸ್ಯೆ ಬೆಳೆಗಾರರನ್ನು ತೀವ್ರವಾಗಿ ಕಾಡುತ್ತಿರುವುದರಿಂದ ಸಾಕಷ್ಟು ಗ್ರಾಮಗಳಲ್ಲಿ ನೂರಾರು ಎಕರೆ ಸರ್ಕಾರಿ ದಿಣ್ಣೆಗಳನ್ನು ಸಮತಟ್ಟು ಮಾಡಿಕೊಂಡು ಕಣ ನಿರ್ಮಾಣ ಮಾಡಿದ್ದರೆ ಮತ್ತಷ್ಟು ಬೆಳೆಗಾರರು ದಿಣ್ಣೆಗೆ ಟಾರ್ಪಲ್ ಹಾಕಿ ಕಾಫಿ ಒಣಗಿಸುತ್ತಿದ್ದಾರೆ. ಸರ್ಕಾರಿ ಭೂಮಿಯನ್ನು ಸಮತಟ್ಟು ಮಾಡಿ ಕಣ ಮಾಡಿರುವುದರಿಂದ ಜಾನುವಾರುಗಳ ಮೇವಿಗೆ ತೊಂದರೆಯಾಗುತ್ತದೆ ಎಂಬ ಆಕ್ಷೇಪಣೆಗಳು ಕ್ಷೀಣ ಧ್ವನಿಗಳಲ್ಲಿ ಕೇಳಿ ಬರುತ್ತಿದೆ. ಸಾಕಷ್ಟುನಷ್ಟ:
ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಾಕಷ್ಟುನಷ್ಟ ಸಂಭವಿಸಿದ್ದು, ಕಾಫಿ ಬೆಳೆಗಾರ ಒಣಹಾಕಿದ್ದ ಕಾಫಿ, ಕಣದಲ್ಲಿರುವ ಭತ್ತ ರಕ್ಷಿಸಿಕೊಳ್ಳಲಾಗದೆ ಪರದಾಡಿದ್ದರೆ, ಕಣದಲ್ಲಿ ನೆನೆದ ಕಾಫಿ ಹಾಗೂ ಭತ್ತ ಸಂಸ್ಕರಣೆಗೆ ಮತ್ತೊಂದು ವಾರಗಳ ಸಮಯ ಹಿಡಿದಿದ್ದು ಮಳೆ ನೀರಿನಿಂದ ನೆನೆದು ಗುಣಮಟ್ಟ ಕಳೆದುಕೊಂಡ ಬೆಳೆಯನ್ನು ಬೇಕಾಬಿಟ್ಟಿ ಮಾರಾಟ ಮಾಡುವ ಮೂಲಕ ಸಾಕಷ್ಟು ನಷ್ಟ ಉಂಟಾಗಿದೆ ಇತ್ತ ಬಿರುಸಿನ ಮಳೆಗೆ ಗಿಡದಲ್ಲಿ ಹಣ್ಣಾಗಿ ಮಾಗಿದ ಫಸಲು ನೆಲಸೇರಿದೆ. ಇದಲ್ಲದೆ ಅಕಾಲಿಕವಾಗಿ ಗಿಡಗಳಲ್ಲಿ ಹೂವು ಮೂಡಿರುವುದರಿಂದ ಮುಂದಿನ ಹಂಗಾಮಿನ ಇಳುವರಿ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಗಿಡಗಳಲ್ಲಿ ಹಣ್ಣು ಇರುವಾಗಲೇ ಹೂವಾಗಿರುವುದು ಬಾರಿ ಬೇಸರದ ಸಂಗತಿ. ಇದರಿಂದಾಗಿ ಮುಂದಿನ ಹಂಗಾಮಿನಲ್ಲಿ ಕಾಫಿ ಇಳುವರಿ ಬಾರಿ ಪ್ರಮಾಣದಲ್ಲಿ ಕುಸಿಯಲಿರುವುದು ನಿಶ್ಚಿತ.ಬಸವರಾಜು.ಎಸ್‌ಎಲ್‌ಒ. ಕಾಫಿ ಮಂಡಳಿ. ಮಠಸಾಗರ.