ರಥ ಸಪ್ತಮಿ ಮಹೋತ್ಸವದಲ್ಲಿ ಮೇಳೈಸಿದ ಜಾನಪದ ಕಲಾಮೇಳ

| Published : Feb 06 2025, 12:16 AM IST

ಸಾರಾಂಶ

ಬೆಳಗ್ಗೆ 6.30ಕ್ಕೆ ಆರಂಭವಾದ ಜಾನಪದ ಕಲಾ ಮೇಳದಲ್ಲಿ ಪಾಲ್ಗೊಂಡಿದ್ದ ಸುಮಾರು 600ಕ್ಕೂ ಹೆಚ್ಚು ಕಲಾವಿದರು 10.30ರ ವರೆಗೆ ಚೆಲುವನಾರಾಯಣಸ್ವಾಮಿಗೆ ಕಲಾರಾಧನೆಯ ಸೇವೆ ಮಾಡಿದರು. ಮೇಲುಕೋಟೆಯ ಉತ್ಸವ ಬೀದಿಗಳಲ್ಲಿ ಜನಪದ ಕಲಾರಾಧನೆ ವೇದಿಕೆಯಾಗಿ ಬದಲಾಗಿ ಜನಪದ ಕಲಾ ಪ್ರಕಾರಗಳ ಪ್ರದರ್ಶನ ಮೇಳೈಸಿತ್ತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಚೆಲುವನಾರಾಯಣಸ್ವಾಮಿ ರಥಸಪ್ತಮಿ ಮಹೋತ್ಸವದ ಅಂಗವಾಗಿ ನಡೆದ 26ನೇ ವರ್ಷದ ಜಾನಪದ ಕಲಾರಾಧನೆಯ ಜಾನಪದ ಕಲಾ ಮೇಳ ಬುಧವಾರ ಅದ್ಧೂರಿಯಾಗಿ ನೆರವೇರಿತು.

ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಕಲಾ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ದಂಪತಿ ಚಾಲನೆ ನೀಡಿದರು.

ಇದಕ್ಕೂ ಮುನ್ನ ಬೆಳಗ್ಗೆ 5.30ಕ್ಕೆ ಮೇಲುಕೋಟೆಗೆ ಆಗಮಿಸಿದ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಕುಟುಂಬದವರನ್ನು ಶ್ರೀನಿವಾಸನರಸಿಂಹನ್ ಗುರೂಜಿ ಬರಮಾಡಿಕೊಂಡರು. ದೇವರ ದರ್ಶನ ಪಡೆದು ವೇದಿಕೆ ಆಗಮಿಸಿದ ಸಚಿವರು ಜಾನಪದ ಕಲಾ ಮೇಳ ಉದ್ಘಾಟಿಸಿದರು.

ನಂತರ ಬೆಳಗ್ಗೆ 7.30ಕ್ಕೆ ಸಚಿವ ಚಲುವರಾಯಸ್ವಾಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಸೂರ್ಯಮಂಡಲ ವಾಹನೋತ್ಸವದ ತೇರು ಎಳೆಯುವ ಮೂಲಕ ರಥಸಪ್ತಮಿಗೆ ಚಾಲನೆ ನೀಡಿದರು.

ಇದಕ್ಕೂ ಮೊದಲು ಬೆಳಗ್ಗೆ 6.30ಕ್ಕೆ ಆರಂಭವಾದ ಜಾನಪದ ಕಲಾ ಮೇಳದಲ್ಲಿ ಪಾಲ್ಗೊಂಡಿದ್ದ ಸುಮಾರು 600ಕ್ಕೂ ಹೆಚ್ಚು ಕಲಾವಿದರು 10.30ರ ವರೆಗೆ ಚೆಲುವನಾರಾಯಣಸ್ವಾಮಿಗೆ ಕಲಾರಾಧನೆಯ ಸೇವೆ ಮಾಡಿದರು. ಮೇಲುಕೋಟೆಯ ಉತ್ಸವ ಬೀದಿಗಳಲ್ಲಿ ಜನಪದ ಕಲಾರಾಧನೆ ವೇದಿಕೆಯಾಗಿ ಬದಲಾಗಿ ಜನಪದ ಕಲಾ ಪ್ರಕಾರಗಳ ಪ್ರದರ್ಶನ ಮೇಳೈಸಿತ್ತು.

ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ನಡೆದ ಜಾನಪದ ಜಾತ್ರೆಯಲ್ಲಿ ತಮಟೆ, ನಗಾರಿ, ಚಂಡೆಗಳ ನೀನಾದ ಮೈನವಿರೇಳುವಂತೆ ಮಾಡಿದರೆ ಗಾರುಡಿಗೊಂಬೆಗಳ ನರ್ತನ ನೋಡುಗರನ್ನು ಜನಪದಲೋಕಕ್ಕೆ ಕರೆದೊಯ್ಯಿತು.

ಕೇರಳದ ಚೆಂಡೆ ಮೇಳ, ಚಿಲಿಪಿಲಿಗೊಂಬೆ, ಕೊತ್ತತ್ತಿಯ ಮರಗಾಲು ಕುಣಿತ, ಚಿಕ್ಕಮಗಳೂರಿನ ಹುಲಿವೇಷ, ಕರಗದನೃತ್ಯ, ಮೈಸೂರು ನಗಾರಿ, ಹುಬ್ಬಳ್ಳಿಯ ಜಗ್ಗಲಿಕೆ ಮೇಳ ನಾಸಿಕ್‌ ಡೋಲ್, ಕರಡಿ ಮಜಲು, ನಂದಿಕಂಬ, ಪಟಾ ಕುಣಿತ, ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ, ಕೋಲಾಟ, ಡೊಳ್ಳುಕುಣಿತ, ಜಾಂಜ್‌ ಮೇಳ, ಸೋಮನ ಕುಣಿತ. ಚಕ್ರಾದಿಬಳೆ, ಖಡ್ಗ ಪವಾಡ, ವೀರಭದ್ರನ ಕುಣಿತ, ಗಾರುಡಿಗೊಂಬೆಗಳು, ಶಾಲಾ ಮಕ್ಕಳ 101 ಕಳಶ, ವೀರ ಮಕ್ಕಳ ಕುಣಿತ, ಕಂಸಾಳೆ, ನಾದಸ್ವರ, ಚಂಡೆನಗಾರಿ, ಜಡೆ ಕೋಲಾಟ, ದಾಸಯ್ಯರ ದರ್ಶನ, ಮಹಿಳಾ ಡೊಳ್ಳು, ಯಕ್ಷಗಾನ ಗೊಂಬೆಗಳು, ಕೋಳಿ ನೃತ್ಯ, ಕರಡಿ ಕುಣಿತ ಸೇರಿದಂತೆ ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸುವ ಜಾನಪದ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.

ಪಾಂಡವಪುರ ಜಿಜೆಸಿ ಮಕ್ಕಳ ಬ್ಯಾಂಡ್ ಜಕ್ಕನಹಳ್ಳಿ ಸರ್ಕಾರಿಪ್ರೌಢ ಶಾಲೆ ಬಳಿಘಟ್ಟ, ಅಮೃತಿ, ಮೇಲುಕೋಟೆಯ ಪ್ರಾಥಮಿಕ ಶಾಲೆ ಮಕ್ಕಳು ಭಾಗವಹಿಸಿದ್ದರು. ಈ ವರ್ಷ ಕಲಾ ಮೇಳದಲ್ಲಿ ಮಹಿಳಾ ಕಲಾ ತಂಡಗಳು ಮೇಳೈಸಿ ಪ್ರೇಕ್ಷಕರ ಮನಸೂರೆಗೊಂಡವು. ಮಹಿಳಾ ಚಂಡೆ, ಕೋಲಾಟ, ಯಕ್ಷಗಾನ ವೈಭವ, ಮಹಿಳಾ ಡೊಳ್ಳು ಕುಣಿತ, ಮಹಿಳಾ ಕೋಲಾಟ ವಿದ್ಯಾರ್ಥಿನಿಯರ ಕಳಸ ತಂಡ ಹೀಗೆ 200ಕ್ಕೂ ಹೆಚ್ಚು ಮಹಿಳಾ ಕಲಾವಿದರು ಭಾಗವಹಿಸಿ ಉತ್ಸವಕ್ಕೆ ಕಳೆ ತಂದುಕೊಟ್ಟರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಇಸ್ರೋ ವಿಜ್ಞಾನಿ ಡಾ.ಶ್ರೀನಾಥ್, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ಕಲಾ ಮೇಳದ ಸಂಘಟಕರಾದ ಸೌಮ್ಯ ಸಂತಾನಂ, ಕದಲಗೆರೆ ಶಿವಣ್ಣಗೌಡ, ಇತಿಹಾಸ ತಜ್ಞ ಪ್ರೊ. ಶಲ್ವಪ್ಪಿಳ್ಳೆ ಅಯ್ಯಂಗಾರ್, ದೇವಾಲಯದ ಇಒ ಶೀಲಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.ಜಾನಪದ ಕಲೆಗಳಿಗೆ ಪ್ರೋತ್ಸಾಹ ಶ್ಲಾಘನೀಯ: ಸಚಿವ ಚಲುವರಾಯಸ್ವಾಮಿ

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ಸ್ವಾಮಿ ಸನ್ನಿಧಿಯಲ್ಲಿ ಜಾನಪದ ಕಲೆಗಳಿಗೆ ವೇದಿಕೆ ಒದಗಿಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ರಥ ಸಪ್ತಮಿ ಮಹೋತ್ಸವದ ಅಂಗವಾಗಿ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ 26ನೇ ವರ್ಷದ ಜಾನಪದ ಕಲಾರಾಧನೆ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಆದಿದೈವ ಚೆಲುವನಾರಾಯಣಸ್ವಾಮಿ ನನ್ನ ಮನೆ ದೇವರು. ಕುಟುಂಬ ಸಮೇತ ರಥಸಪ್ತಮಿ ಹಾಗೂ ಜಾನಪದ ಕಲಾ ಮೇಳದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ ಎಂದರು.

ಭಾರತೀಯ ಸಂಸ್ಕೃತಿ ಪ್ರತೀಕವಾದ ಜಾನಪದ ಕಲೆಗಳು ಇಂದು ನಶಿಸುತ್ತಿವೆ. ಇಂತಹ ಕಲೆಗಳನ್ನುಉಳಿಸಲು ಸರ್ಕಾರ ನಿರಂತರವಾಗಿ ಜನಪದ ಕಲೆಗಳನ್ನು ಪ್ರೋತ್ಸಾಹಿಸುತ್ತಿದೆ. ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ಜನಪದ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದರು.