ಸಾರಾಂಶ
ಎಚ್.ಕೆ.ಬಿ.ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬತಾಲೂಕಿನ ಹೆಸರಿ ಗ್ರಾಮದ ಬಳಿ ನರಬಲಿ ಭೈರವನ ಪಾದ ಸ್ಮಾರಕ ಶಿಲ್ಪಪತ್ತೆಯಾಗಿದ್ದು, ಚಾಲುಕ್ಯರು ಮತ್ತು ಹೊಯ್ಸಳರ ಕಾಲದ ಸ್ಮಾರಕವೆಂದು ಊಹಿಸಲಾಗಿದೆ. ಅಲ್ಲದೇ ೧೦-೧೨ನೇ ಶತಮಾನದಲ್ಲಿಯೇ ನರಬಲಿ ಆಚರಣೆಯಲ್ಲಿತ್ತು ಎನ್ನು ವುದನ್ನು ಪ್ರಚುರಪಡಿಸಿದ್ದು, ಇದು ತಾಲೂಕಿನಲ್ಲಿ ದೊರೆತ ಮೊದಲ ನರಬಲಿ ಶಿಲ್ಪವಾಗಿದೆ.
ತಾಲೂಕಿನ ಇಂಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಗ್ರಾಮ ಹೆಸರಿ. ಚಿಟ್ಟೂರು ಸರ್ಕಾರಿ ಪ್ರೌಢಶಾಲೆಯ ಇತಿಹಾಸ ಶಿಕ್ಷಕ ಹೆಚ್. ನಾಗರಾಜಪ್ಪ ಮತ್ತು ಇತಿಹಾಸ ಸಂಶೋಧಕ ರಮೇಶ್ ಬಿ.ಹಿರೇಜಂಬೂರವರು ಕ್ಷೇತ್ರ ಕಾರ್ಯದಲ್ಲಿ ಈ ಸ್ಮಾರಕ ಶಿಲ್ಪವನ್ನು ಪತ್ತೆ ಮಾಡಿದ್ದಾರೆ.ಗ್ರಾಮದ ಉತ್ತರ ದಿಕ್ಕಿನ ಚೌಡೇಶ್ವರಿ ಪೀಠದ ಬಳಿ ಎರಡುವರೆ ಅಡಿ ಉದ್ದ ಒಂದುವರೆ ಅಡಿ ಅಗಲವಿರುವ ಬಳಪದ ಕಲ್ಲಿನ ಚಪ್ಪಡಿಯ ಮಧ್ಯದಲ್ಲಿ ಸುಂದರವಾದ ಎರಡು ಪಾದಗಳ ಕೆತ್ತನೆ ಇದ್ದು, ಆರು ಇಂಚುಗಳಷ್ಟು ಉದ್ದಳತೆಯನ್ನು ಹೊಂದಿವೆ. ಇವುಗಳ ಕೆತ್ತನೆ ನಿಪುಣ ಶಿಲ್ಪಿಯಿಂದ ಆಗಿದೆ ಎಂಬುದನ್ನು ಶಿಲ್ಪದ ಸೌಂದರ್ಯವು ಸ್ಪಷ್ಟಪಡಿಸುತ್ತದೆ. ಈ ಪಾದಗಳ ಮುಂಭಾಗ ದಲ್ಲಿ ಎರಡು ನಾಗಗಳು ಹೆಡೆ ಎತ್ತಿದ್ದು, ಅವುಗಳ ಬಾಲಗಳು ಎಡ ಮತ್ತು ಬಲ ಭಾಗದಲ್ಲಿ ಬೋರಲಾಗಿ ಮಲಗಿರುವ ಎರಡು ಮಾನವನ ಮುಂಡದ ಕೈಗಳಿಗೆ ಸುತ್ತಿಕೊಂಡಿವೆ. ಎರಡು ಮುಂಡಗಳ ಮುಂದೆ ಬಲಿ ಅರ್ಪಿಸಿದ ನಂತರ ಕಡಿದ ಶಿರಗಳ ಕೆತ್ತನೆ ಇದೆ. ಪಾದಗಳ ಮುಂಭಾಗದಲ್ಲಿ ಟಗರಿನ ಶಿರದ ಶಿಲ್ಪವಿದ್ದು, ಹಿಂಭಾಗದಲ್ಲಿ ಅಡ್ಡಲಾಗಿ ಚೇಳಿನ ಚಿತ್ರವನ್ನು ಕೆತ್ತಲಾಗಿದೆ.
ಟಗರಿನ ತಲೆ ಮತ್ತು ಚೇಳು ಇವು ಭೈರವ ಶಿಲ್ಪದ ಸೂಚಕಗಳಾಗಿವೆ. ಇಂತಹ ಶಿಲ್ಪಗಳನ್ನು ಭೈರವನ ಪಾದಗಳೆಂದು ಇತಿಹಾಸಕಾರರು ಗುರುತಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಭದ್ರಾವತಿ ಹಾಗೂ ಹೊಸನಗರ ತಾಲೂಕುಗಳ ವಿವಿಧೆಡೆಗಳಲ್ಲಿ ಇಂತಹ ಬಲಿ ಭೈರವನ ಪಾದಶಿಲ್ಪಗಳು ಕಂಡು ಬರುತ್ತವೆ. ಸೊರಬ ತಾಲೂಕಿನಲ್ಲಿ ಇದುವರೆಗೂ ಇಂತಹ ನರಬಲಿಯ ಶಿಲ್ಪಗಳು ದೊರೆತಿಲ್ಲ. ಇದೇ ರೀತಿಯಾದ ಶಿಲ್ಪಗಳು ರಾಜ್ಯದ ವಿವಿಧೆಡೆಯಲ್ಲಿ ದೊರೆತ ಸಾಕಷ್ಟು ಉಲ್ಲೇಖ ಗಳು ಇವೆ. ಇವುಗಳು ಸಾಮಾನ್ಯವಾಗಿ ಚಾಲುಕ್ಯರು ಮತ್ತು ಹೊಯ್ಸಳರ ಅವಧಿಯಲ್ಲಿ ಹೆಚ್ಚಾಗಿ ಕೆತ್ತಲ್ಪಟ್ಟಿವೆ ಎಂದು ಇತಿಹಾಸ ಸಂಶೋಧಕರು ಉಲ್ಲೇಖಿಸುತ್ತಾರೆ.
ಈ ಶಿಲ್ಪದ ಸನಿಹದಲ್ಲಿ ಭಗ್ನಗೊಂಡಿರುವ ಗಣಪತಿಯ ಶಿಲ್ಪವು ಇದ್ದು, ಅನತಿ ದೂರದಲ್ಲಿ ಶಿವ ದೇವಾಲಯವಿದೆ. ಅಲ್ಲಿ ಒಡೆದು ಹೋಗಿರುವ ೧೨ನೇ ಶತಮಾನದ ವೀರಗಲ್ಲು ಲಭ್ಯವಿದೆ. ಈ ದೇವಾಲಯ ೧೧-೧೨ನೇ ಶತಮಾನಕ್ಕೆ ಸೇರಿರಬಹು ದೆಂಬುದು ಸ್ಪಷ್ಟವಾಗುತ್ತದೆ. ಈ ಅವಧಿಯಲ್ಲಿ ಹೆಸರಿ ಗ್ರಾಮದಲ್ಲಿ ಭೈರವನ ಆರಾಧನೆಯಲ್ಲಿ ನರಬಲಿ ನಡೆದಿರಬಹುದಾಗಿದೆ. ಈಗಾಗಲೇ ಹೆಸರಿ ಗ್ರಾಮದಲ್ಲಿ ಕೆಳದಿ ಚೆನ್ನಮ್ಮನ ಅವಧಿಯ ದಾನ ಶಾಸನವನ್ನು ಇತಿಹಾಸಕಾರರು ಗುರುತಿಸಿ ಅಧ್ಯಯನ ಗೈದಿದ್ದಾರೆ. ಈ ಸ್ಮಾರಕ ಶಿಲ್ಪದ ಕ್ಷೇತ್ರ ಕಾರ್ಯಕ್ಕೆ ಗ್ರಾಮದ ಹತ್ತಿ ಪ್ರಕಾಶ್ ಬಸವಣ್ಣೆಪ್ಪ ಮತ್ತು ನೀಲಕಂಠ ಸಹಕಾರ ನೀಡಿದ್ದಾರೆ. ಅಧ್ಯಯನಕ್ಕೆ ಡಾ.ಶೇಜೇಶ್ವರ್ ನಾಯಕ್, ಡಾ. ಜಗದೀಶ ಅಗಸಿ ಬಾಗಿಲು, ಶ್ರೀಪಾದ ಬಿಚ್ಚುಗತ್ತಿ ಹಾಗೂ ಮಂಜಪ್ಪ ಚುರ್ಚಿಗುಂಡಿ ಮಾರ್ಗದರ್ಶನ ನೀಡಿದ್ದಾರೆ.ಭೈರವನ ಆರಾಧನೆ; ನರಬಲಿ ಐತಿಹ್ಯಭೈರವನ ಆರಾಧನೆಯು ಅತ್ಯಂತ ಪ್ರಾಚೀನವಾಗಿದ್ದು, ಅದರಲ್ಲಿ ನರಬಲಿಯೂ ಒಂದು ಪ್ರಮುಖ ಆಚರಣೆಯಾಗಿರುವುದು ಇತಿಹಾಸದ ಅನೇಕ ಅಂಶಗಳಿಂದ ತಿಳಿದು ಬರುತ್ತದೆ. ಕಠೋರವಾದ ಶಿವಭಕ್ತಿಯು ಭೈರವನ ಆರಾಧನೆ ಮುಖ್ಯ ಲಕ್ಷಣ. ೧೦- ೧೨ನೇ ಶತಮಾನದ ಅವಧಿಯಲ್ಲಿ ಈ ಪ್ರದೇಶದಲ್ಲಿ ಕಾಳಾಮುಖರು ಪ್ರಮುಖವಾದ ಶೈವ ಆರಾಧಕರಾಗಿ ಕಂಡು ಬರುತ್ತಾರೆ. ಜೊತೆಯಲ್ಲಿ ಕಾಪಾಲಿಕರು ಕಠೋರ ಪ್ರವೃತ್ತಿಯ ಶೈವ ಆರಾಧಕರಾಗಿರುವ ಉಲ್ಲೇಖಗಳಿವೆ. ತಾಂತ್ರಿಕ ಆರಾಧನೆಯೂ ಈ ವರ್ಗದಲ್ಲಿ ಕಂಡುಬರುತ್ತದೆ. ಕಾಪಾಲಿಕರು ಭೈರವನ ಆರಾಧಕರಾಗಿದ್ದು, ಈ ಭೈರವ ಆರಾಧನೆಯಲ್ಲಿ ನರಬಲಿ ಒಂದು ಪ್ರಮುಖ ಆಚರಣೆ ಎಂಬುದು ಈ ಶಿಲ್ಪಗಳಿಂದ ಸ್ಪಷ್ಟವಾಗುತ್ತದೆ. ಪ್ರಾಚೀನ ಕಾಲದಲ್ಲಿ ಮಾತೃದೇವತೆಗಳಿಗೆ ಪ್ರಾಣಿಗಳ ಬಲಿಕೊಡುವುದು ಒಂದು ಆರಾಧನೆಯ ವಿಧವಾಗಿದ್ದರೆ ಬೈರವನ ಆರಾಧನೆಯಲ್ಲಿ ನರ ಬಲಿಯನ್ನು ಕೊಡುವುದು ಶೈವ ಆರಾಧನೆ ಒಂದು ಗಂಭೀರ ಸ್ವರೂಪವಾಗಿದೆ.
ಕಾಳಮುಖ ಶೈವ ಪರಂಪರೆ ಶಿಲ್ಪಸೊರಬ ಮತ್ತು ಶಿಕಾರಿಪುರದ ಪ್ರಾಚೀನ ನಾಗರಖಂಡ ೭೦ ಭಾಗದಲ್ಲಿ ಸುಮಾರು ೧೧-೧೨ ನೇ ಶತಮಾನದ ಹೊತ್ತಿಗೆ ಕಾಳಮುಖ ಶೈವ ಪರಂಪರೆ ಪ್ರಚಲಿತದಲ್ಲಿದ್ದ ಕುರುಹಿಗೆ ಶಾಸನ, ಮೂರ್ತಿ ಶಿಲ್ಪಗಳು ನೆರವಾಗಿವೆ. ೧೨-೧೩ನೇ ಶತಮಾನ ದ ಹೊತ್ತಿಗೆ ಕುಬಟೂರಿನ ಒಂದು ವಾಣೆ ಮನೆತನ ಕಾಳಮುಖ ಶೈವ ಪಂಥದ ಅನುಯಾಯಿಗಳಾಗಿದ್ದರು. ಅವರು ಮಾಂಡಳೀಕರಾಗಿದ್ದ ಬಗ್ಗೆ ಶಾಸನಾನುಲ್ಲೇಖವಿದೆ. ೮-೯ನೇ ಶತಮಾನದ ಹೊತ್ತಿಗೆ ತಾಂತ್ರಿಕ ಪಂಥ ಇದ್ದ ಬಗ್ಗೆ ಬಳ್ಳಿಗಾವೆಯ ಶಿಲ್ಪ ಸಾಕ್ಷಿಗಿದೆ. ಹಾಗಾಗಿ ಇದು ಕಾಳಮುಖ, ಕಾಪಾಲಿಕ ಪಂಥಗಳ ನೆನಪಿಸುವ ಶಿಲ್ಪವಾಗಿರುವ ಸಾಧ್ಯತೆ ಇದೆ ಎಂದು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಯಲಸಿ ಹೇಳಿದರು.