ಭಾರತದ ಒಗ್ಗಟ್ಟನ್ನು ಒಡೆಯುವ ಸಲುವಾಗಿಯೇ ದೇಶದ್ರೋಹಿ ಗ್ಯಾಂಗ್ ಸಿದ್ಧವಾಗಿದ್ದು, ಅದುವೇ ಕಾಕ್ರೋಚ್ ಜನತಾ ಪಾರ್ಟಿ.

ಗಣೇಶನ ವಿಜರ್ಜನೆ ಕಾರ್ಯಕ್ರಮದಲ್ಲಿ ವಿಜಯಪುರ ಶಾಸಕ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಭಾರತದ ಒಗ್ಗಟ್ಟನ್ನು ಒಡೆಯುವ ಸಲುವಾಗಿಯೇ ದೇಶದ್ರೋಹಿ ಗ್ಯಾಂಗ್ ಸಿದ್ಧವಾಗಿದ್ದು, ಅದುವೇ ಕಾಕ್ರೋಚ್ ಜನತಾ ಪಾರ್ಟಿ (ಸಿಜಿಪಿ) ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನ ಹತ್ತಿರ ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶನ ವಿಜರ್ಜನೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಕಾಕ್ರೋಚ್‌ಗಳ ಉದ್ದೇಶ ದೇಶವನ್ನು ಒಂದು ಮಾಡುವುದು ಅಲ್ಲ. ಬದಲಿಗೆ ಅಸ್ಥಿರ ಮಾಡುವುದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಗತ್ತಿನಲ್ಲಿ 5ನೇ ಶಕ್ತಿಯಾಗಿ ದೇಶ ಬೆಳೆಯುತ್ತಿದೆ. ಇದನ್ನು ಸಹಿಸಲಾಗದೆ ದೇಶವನ್ನು ಛಿದ್ರ ಮಾಡಬೇಕು ಎನ್ನುವ ಸಲುವಾಗಿ ಕೆಲ ಸಂಘಟನೆಗಳೊಂದಿಗೆ ಕೂಡಿಕೊಂಡು ಸನಾತನ ಹಿಂದೂ ಧರ್ಮವನ್ನು ಮುಗಿಸಬೇಕು ಎಂದು ದೇಶದಲ್ಲಿ ಒಂದು ದೊಡ್ಡ ಷಡ್ಯಂತರ ನಡೆದಿದೆ ಎಂದು ಆರೋಪಿಸಿದರು.

ಹಿಂದೂಗಳ ಗಣೇಶ ಹಬ್ಬಕ್ಕೆ ಇಲ್ಲಸಲ್ಲದ ಕಾನೂನು ತೊಡಕು ಉಂಟು ಮಾಡುತ್ತಾರೆ. ಆದರೆ ಭಾರತಕ್ಕೆ ಸ್ವಾತಂತ್ರ‍್ಯ ಸಿಗಬೇಕಾದಾಗ ಹಿಂದೂಗಳನ್ನು ಒಂದುಗೂಡಿಸಲು, ಸ್ವಾತಂತ್ರದ ಬಗ್ಗೆ ಅರಿವು ತರಿಸಲು ಬ್ರಿಟಿಷರ ಕಾಲದಲ್ಲಿ ಲೋಕಮಾನ್ಯ ಬಾಲಗಂಗಾಧರ್ ತಿಲಕ ಅವರು ಮನೆಗಷ್ಟೇ ಸೀಮಿತವಾಗಿದ್ದ ಆಚರಣೆಯನ್ನು ಸಾರ್ವಜನಿಕವಾಗಿ ಆಚರಣೆಗೆ ತಂದು ಹಿಂದೂ ಸಮಾಜವನ್ನು ಒಗ್ಗೂಡಿಸಲು ದಾರಿ ತೋರಿಸಿದ್ದಾರೆ. ಗಣೇಶ ಹಬ್ಬದ ಮೂಲಕ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ರಾಜಕಾರಣಿಗಳು ಜನ ಕೂಡಿಸಲು ಹಣ ಖರ್ಚು ಮಾಡಿದರೂ ಜನ ಬರುವುದಿಲ್ಲ. ಆದರೆ ಗಣೇಶ ಹಬ್ಬಕ್ಕೆ ಜನ ಕೂಡುತ್ತಿದ್ದಾರೆ, 2028ಕ್ಕೆ ರಾಜ್ಯದಲ್ಲಿ ಜೆಸಿಬಿ ಸರ್ಕಾರ ಅಂದರೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆಗ ಗಣೇಶನ ಹಬ್ಬವನ್ನು ಯಾವುದೇ ಆತಂಕ ಇಲ್ಲದೆ ಆಚರಿಸಬಹುದು ಎಂದರು.