ಇಲ್ಲಿನ ಸರ್ದಾರ್ ಪಟೇಲ್‌ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಭಾ ಭವನದಲ್ಲಿ ಸಂಜೆ ಶಿಕ್ಷಕರು, ಅವರ ಸಹೋದ್ಯೋಗಿಗಳು, ಬಂಧು ಬಾಂಧವರ ಜಾತ್ರೆ ಸೇರಿತ್ತು. ಕಸಾಪ ನೀಡಲಿದ್ದ ಸಾರ್ಥಕ ಶಿಕ್ಷಕ ಪುರಸ್ಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ನೂರಾರು ಜನ ಅಲ್ಲಿ ಸೇರಿದ್ದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಸರ್ದಾರ್ ಪಟೇಲ್‌ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಭಾ ಭವನದಲ್ಲಿ ಸಂಜೆ ಶಿಕ್ಷಕರು, ಅವರ ಸಹೋದ್ಯೋಗಿಗಳು, ಬಂಧು ಬಾಂಧವರ ಜಾತ್ರೆ ಸೇರಿತ್ತು. ಕಸಾಪ ನೀಡಲಿದ್ದ ಸಾರ್ಥಕ ಶಿಕ್ಷಕ ಪುರಸ್ಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ನೂರಾರು ಜನ ಅಲ್ಲಿ ಸೇರಿದ್ದರು.

ಎಲ್ಲರ ಮೊಗದಲ್ಲಿ ಕುತೂಹಲವಿತ್ತು, ಸಮಾರಂಭದಲ್ಲಿ ತಮಗೆ ನಡೆಯಲಿರುವ ಸನ್ಮಾನದ ಬಗ್ಗೆ ಪುರಸ್ಕಾರಕ್ಕೆ ಆಯ್ಕೆಯಾದವರ ಕಂಗಳಲ್ಲಿ ಬೆರಗು, ಕುತೂಹಲ ಕಂಡರೆ, ಜತೆ ಬಂದವರು, ಬಂಧುಗಳ ಕಂಗಳಲ್ಲಿ ತಮ್ಮವರಿಗೆ ನಡೆಯಲಿರುವ ಸನ್ಮಾನ ಕಂಡು ಪುಳಕಿತರಾಗುವ ಹಂಬಲ ಮನೆ ಮಾಡಿತ್ತು.

ಇವೆಲ್ಲದರ ನಡುವೆಯೇ ಸುಂದರ ಸಂಜೆ ಅಹ್ಲಾದಕರ ವಾತಾವರಣದಲ್ಲಿ ಸುವರ್ಣ ಭವನದಲ್ಲಿ ಪ್ರೈಮರಿ, ಹೈಸ್ಕೂಲ್‌, ಐಟಿಐ, ಪದವಿ, ಪದವಿ ಪೂರ್ವ ಹೀಗೆ ಎಲ್ಲಾ ವಿಭಾಗಗಳಲ್ಲಿ ಜಿಲ್ಲಾದ್ಯಂತ ಸೇವೆಸಲ್ಲಿಸುತ್ತಿರುವ ಗುರುಗಳಾದ ಡಾ. ಗುರುಪ್ರಕಾಶ ಹೂಗಾರ, ಡಾ. ಬಸವರಾಜೇಶ್ವರಿ ಇಂದೂರ, ಡಾ. ಗಿರಿಜಾಬಾಯಿ ಗುಜಗೊಂಡ, ಮೀನಾಕ್ಷಿ ಶೇಷಮೂರ್ತಿ ಅವಧಾನಿ, ಶರಣು ಬಿರಾದಾರ, ಶಿವಾನಂದ ನಿರವಾಣಿ, ಭೋಜನಗೌಡ ಪಾಟೀಲ, ದೌಲತರಾಯ ದೇಸಾಯಿ, ವಿಜಯಕುಮಾರ ಪಾಟೀಲ, ಮರೆಪ್ಪ ಬಸವಪಟ್ಟಣ, ರಮೇಶಕುಮಾರ ದೇವಣಿ, ಜೆ.ಹೆಚ್. ಪಾಟಿಲ, ಪರಮೇಶ್ವರ ಪಾಟೀಲ, ಶಾರದಾ ದೇಸಾಯಿ, ಪ್ರಕಾಶ ಕೋಟ್ರೆ ಈರಮ್ನ ಸುತಾರ, ರಾಜಶೇಖರ ಸಜ್ಜಿ, ವಿಶಾಲಾ ಕಾಟಾಪೂರ, ದೇವಿದಾಸ ಪವಾರ, ಮಹಾಂತೇಶ್ವರಿ ಕಟ್ಟಿಮನಿ, ಭೀಮಾಶಂಕರ ಮಡಿವಾಳ, ಸುನಂದಾ ಕುಲಕರ್ಣಿ, ಮೈತ್ರಾಬಾಯಿ ಪತ್ತಾರ, ಡಾ. ಅನ್ನಪೂರ್ಣ ಗಂಗಾಣಿ, ವಿಶಾಲಾ ಕಾಟಾಪೂರ ಅವರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಕನ್ನಡ ಬಾವುಟ ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ನಿಂಗಪ್ಪ ಮಂಗೊಂಡ ಹಾಗೂ ಮಾಜಿ ಪ್ರದಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ ಪೂಜಾರಿ, ಜಯಶ್ರೀ ಜಮಾದಾರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಅಭಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ, ಯುವ ನಾಯಕ ಪ್ರಫುಲ್‌ ನಮೋಶಿ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗೂ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸೇವಂತಾ ಚವ್ಹಾಣ, ಸರಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಭೋಜನಗೌಡ ಪಾಟೀಲ, ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಸಿದ್ಧಲಿಂಗ ಬಾಳಿ, ಶಿವಲೀಲಾ ಕಲಗುರ್ಕಿ, ಬಿ.ಎಂ. ಪಾಟೀಲ ಕಲ್ಲೂರ, ರಾಜೇಂದ್ರ ಮಾಡಬೂಳ, ರಮೇಶ ಬಡಿಗೇರ, ಗಣೇಶ ಚಿನ್ನಾಕಾರ ಶಿಕ್ಷಕರೆಲ್ಲರಿಗೂ ಗೌರವಿಸಿದರು.

ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸತತ ಅಧ್ಯಯನಶೀಲರಾಗಿ, ಚಾರಿತ್ರ್ಯವಂತರಾಗಿರಿ, ಶಿಕ್ಷಕರು ನಮ್ಮ ನಾಡಿನ ಸಾಂಸ್ಕೃತಿಕ ಲೋಕದ ಆಧಾರಸ್ತಂಭ ಎಂದು ಅಭಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೋಮಶೇಖರ್‌ ಹೇಳಿದರು.ಕಳೆದ ನಾಲ್ಕೂವರೆ ವರ್ಷಗಳಿಂದ ನಿರಂತರವಾಗಿ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಷತ್ತನ್ನು ಸಾಮಾನ್ಯ ಜನರ ಬಳಿ ಕೊಂಡೊಯ್ಯಲಾಗಿದೆ. ಎಲ್ಲಾ ಜನ ಸಮುದಾಯದರೊಂದಿಗೆ ಜಿಲ್ಲೆಯಲ್ಲಿ ಕನ್ನಡ ತೇರನ್ನೆಳೆಯುವ ಕೆಲಸ ಮಾಡುತ್ತಿದ್ದೇವೆ ಎಂದು ಕಲಬುರಗಿ ಕಸಾಪ ಅಧ್ಯಕ್ಷ ವಿಜಯಕುಮಾರ್‌ ತೇಗಲತಿಪ್ಪಿ ಹೇಳಿದರು.

ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಅನ್ಯ ಕಾರ್ಯಗಳ ಭಾರ ಹೆಚ್ಚಾಗಿದೆ. ಕಲಿಕಾ ವಾತಾವರಣಕ್ಕಿಂತ ಆನ್‍ಲೈನ್ ವ್ಯವಹಾರ ಜಾಸ್ತಿಯಾಗಿದೆ. ಇದನ್ನು ತಪ್ಪಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಶಿಕ್ಷಕರಿಗೆ ಅನುವು ಮಾಡಿಕೊಡಬೇಕು ಎಂದು ಕಲಬುರಗಿ ಎನ್‌ಪಿಎಸ್‌ ಶಾಲೆ ನಿರ್ದೇಶಕ ಪ್ರಫುಲ್‌ ನಮೋಶಿ ಹೇಳಿದರು.