ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಮ್ಮ ಹೇಳಿಕೆ ಮುಖಾಂತರ ತನಿಖೆ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಹೇಗೆ ಬೇಕೋ ಹಾಗೆ ತನಿಖೆ ಮಾಡಿ ತೇಪೆ ಹಚ್ಚಲು ಶತಪ್ರಯತ್ನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು : ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಮ್ಮ ಹೇಳಿಕೆ ಮುಖಾಂತರ ತನಿಖೆ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಹೇಗೆ ಬೇಕೋ ಹಾಗೆ ತನಿಖೆ ಮಾಡಿ ತೇಪೆ ಹಚ್ಚಲು ಶತಪ್ರಯತ್ನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆ ಪ್ರಕರಣದ ತನಿಖೆಯ ವಿಚಾರಗಳನ್ನು ಪೊಲೀಸ್ ಆಯುಕ್ತರು ಬಹಿರಂಗ ಮಾಡಿರುವುದು ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತರು ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಒತ್ತಡಕ್ಕೆ ಮಣಿದು ನನ್ನ ಬಗ್ಗೆ ರಜಾ ದಿನವಾದ ಭಾನುವಾರ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯನ್ನು ಓಲೈಸಲು ಇಂತಹ ಹೇಳಿಕೆ ನೀಡಿ ತಾವೇ ಮುಜುಗರಕ್ಕೆ ಸಿಲುಕಿದ್ದಾರೆ. ತನಿಖಾ ಹಂತದಲ್ಲಿ ಯಾವುದೇ ವಿಷಯವನ್ನು ಬಹಿರಂಗವಾಗಿ ಹೇಳಬಾರದು ಎನ್ನುವ ಸುಪ್ರೀಂ ಕೋರ್ಟ್ ಆದೇಶವನ್ನು ಅವರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ನಾನು ಕ್ರಮ ಕೈಗೊಂಡರೆ ಆ ಅಧಿಕಾರಿ ಹಣೆ ಬರಹ ಏನಾಗಬಹುದು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಪೊಲೀಸ್ ಆಯುಕ್ತರು ಹೇಳಿಕೆ ಹೇಳಿಕೆ ಬಂದ ಬಳಿಕ ಅನೇಕ ವ್ಯಾಖ್ಯಾನಗಳು ಆಗಿವೆ. ಸ್ಟಿಂಗ್ ಆಪರೇಷನ್ ಕುಮಾರಸ್ವಾಮಿಗೆ ತಿರುಗುಬಾಣ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಕಾರ್ತಿಕ್ ವಿಷಯದಲ್ಲಿ ಯಾರಿಗೆ ತಿರುಗುಬಾಣ ಆಗುತ್ತದೆ ಎಂಬುದನ್ನು ನಾನು ಚರ್ಚಿಸಲು ಹೋಗುವುದಿಲ್ಲ. ಆದರೆ, ಈ ಮುಖ್ಯಮಂತ್ರಿ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದರು.
ಅಪಾಯಕ್ಕೆ ಸಿಲುಕ್ತೀರಿ:
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಲೀಂ ಅವರೇ, ಚಕ್ರ ತಿರುಗುತ್ತದೆ. ಮೇಲೆ ಇದ್ದವರು ಕೆಳಗಡೆ ಬರಬೇಕು, ಕೆಳಗಡೆ ಇರುವವರು ಮೇಲೆ ಹೋಗಲೇಬೇಕು. ಇದು ಪ್ರಕೃತಿ ನಿಯಮ. ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ. ಮರ್ಜಿಗೆ ಕೆಲಸ ಮಾಡಿದರೆ ಅಪಾಯಕ್ಕೆ ಸಿಲುಕುವವರು ನೀವೇ ಆಗಿರುತ್ತೀರಿ ಎಂದು ಎಚ್ಚರಿಸಿದರು.
ಟಚ್ ಮಾಡಿ ನೋಡಿ:
ಕರ್ನಾಟಕ ರಾಜ್ಯೋತ್ಸವದ ದಿನ ಈ ಸರ್ಕಾರ ಯಾವ ರೀತಿ ಕರಾಮತ್ತು ನಡೆಸಿದೆ ಎಂಬುದನ್ನು ನಾನು ಗಮನಿಸಿದ್ದೇನೆ. ಅಸಲಿ ಆರೋಪಿಗಳನ್ನು ಬಿಟ್ಟು ಕೇವಲ ವಿಡಿಯೋ ಅಪ್ ಲೋಡ್ ನೆಪದಲ್ಲಿ ನಮ್ಮ ಕಾರ್ಯಕರ್ತರ ಬೆನ್ನು ಬಿದ್ದಿದ್ದೀರಿ. ಅದರಲ್ಲಿ ನನ್ನ ಹೆಸರನ್ನು ಎಳೆದು ತಂದಿದ್ದೀರಿ. ನಾನು ನಿಮ್ಮ ಬೆದರಿಕೆಗಳಿಗೆ ಹೆದರುವ ವ್ಯಕ್ತಿಯಲ್ಲ. ಬೇಕಿದ್ದರೆ ನನ್ನನ್ನು ಒಮ್ಮೆ ಟಚ್ ಮಾಡಿ ನೋಡಿ. ಅದು ಹೋಗಿ ಎಲ್ಲಿಗೆ ಮುಟ್ಟುತ್ತದೆ ಎಂಬುದು ನಿಮಗೆ ಗೊತ್ತಾಗುತ್ತದೆ. ಅಪಾಯದ ಜೊತೆ ನೀವು ಚೆಲ್ಲಾಟ ಆಡುತ್ತಿದ್ದೀರಿ. ನೀವೆಲ್ಲರೂ ತಕ್ಕ ಪಾಠ ಅನುಭವಿಸುತ್ತಿರಿ ಎಂದು ಎಚ್ಚರಿಕೆ ನೀಡಿದರು.
ರಿತೇಶ್ ಮುಖ ನೋಡಿಲ್ಲ:
ನಾನು ಎರಡು ಬಾರಿ ಮುಖ್ಯಮಂತ್ರಿ ಆದರೂ ಒಬ್ಬನೇ ಒಬ್ಬ ಅಧಿಕಾರಿಗೆ ಈ ರೀತಿ ಒತ್ತಡ ಹಾಕಿಲ್ಲ. ಪ್ರಧಾನಿ ಸ್ಥಾನವನ್ನೂ ನೋಡಿರುವ ಕುಟುಂಬ ನಮ್ಮದು. ನಾನೂ ಏನೇ ಮಾಡಿದರೂ ಬಹಿರಂಗವಾಗಿ ಮಾಡುತ್ತೇನೆ. ಕದ್ದುಮುಚ್ಚಿ ಮಾಡುವ ಅಗತ್ಯವಿಲ್ಲ. ಈ ರಿತೇಶ್ ಪಾಂಡೆ ಯಾರೆಂಬುದೇ ನನಗೆ ಗೊತ್ತಿಲ್ಲ. ದೆಹಲಿಯ ನಮ್ಮ ಗೃಹ ಕಚೇರಿಗೆ ನೂರಾರು ಜನ ಬರುತ್ತಾರೆ. ತಪಾಸಣೆ ಸಹ ಇರುವುದಿಲ್ಲ. ರಿತೇಶ್ ಪಾಂಡೆ ಎಂಬುವವನ ಮುಖ ಸಹ ನೋಡಿಲ್ಲ. ಅವನನ್ನು ಗಾಜಿಯಾಬಾದ್ನಲ್ಲಿ ಬಂಧಿಸಲಾಗಿದೆ. ಆದರೆ, ಆತ ನಮ್ಮ ಮನೆಯಲ್ಲಿದ್ದ ಎಂದು ಹೇಳಲಾಗುತ್ತಿದೆ ಎಂದು ಕಿಡಿಕಾರಿದರು.
ಸೀಡಿ ಶಿವುಗೆ ಸಿದ್ದು ಔಟ್:
ಸೀಡಿ ಶಿವು ಕೊಟ್ಟ ಕೆಲ ಮಾಹಿತಿಗಳಿಂದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಅವರ ಪಕ್ಷ ಉಳಿಯಬೇಕು ಎಂದರೆ, ಅವರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಅದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ನಮಗೆ ನಮ್ಮ ಪಕ್ಷ ಉಳಿಸಿಕೊಂಡರೆ ಸಾಕು ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಕೃಪಾ ಆಳ್ವ ಎಲ್ಲಿ?:
ತಾಂತ್ರಿಕ ಸಾಕ್ಷಿಗಳಿವೆ ಎಂದು ಗೃಹ ಸಚಿವರು ಹೇಳಿದ್ದಾರೆ. ಅವುಗಳನ್ನು ಇರಿಸಿಕೊಂಡು ಪೂಜೆ ಮಾಡಲು ಹೇಳಿ. ಅಷ್ಟೆಲ್ಲ ಇದ್ದ ಮೇಲೆ ಏಕೆ ಸುಮ್ಮನ್ನಿದ್ದೀರಾ? ತನಿಖೆ ಮಾಡಿ. ಕೃಪಾ ಆಳ್ವ ಎಲ್ಲಿ? ಎಲ್ಲಿಗೆ ಕಳುಹಿಸಿದ್ದೀರಿ? ಕೇರಳದ ಹೆಣ್ಣು ಮಗಳನ್ನು ಎಲ್ಲಿಗೆ ಕಳಿಸಿದ್ದೀರಿ? ಆ ಹೆಣ್ಣು ಮಗಳಿಂದ ಏನು ಹೇಳಿಕೆ ತಗೊಂಡಿದ್ದೀರಿ? ಎಷ್ಟು ಹಣ ಕೊಟ್ಟಿದ್ದೀರಿ? ಸ್ಟಿಂಗ್ ಆಪರೇಷನ್ ಮೂಲ ಪುರುಷ ಕೋರ್ಟ್ನಲ್ಲಿ ಇಷ್ಟೊಂದು ಅಪ್ಲಿಕೇಶನ್ ಹಾಕಿಕೊಂಡಿರುವುದು ಏಕೆ? ನಾನು ತನಿಖೆಗೆ ಸಿದ್ಧನಿದ್ದೇನೆ. ತನಿಖೆ ಮಾಡಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ನನ್ನನ್ನು ಯಾಕೆ ವಿಚಾರಣೆ ಮಾಡ್ತಾರೆ?:
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ, ಈಗಾಗಲೇ ನಿಮ್ಮ ನಡವಳಿಕೆ ನೋಡಿ ಕರ್ನಾಟಕದಲ್ಲಿ ನಿಮಗೆ ಬಾಗಿಲು ಹಾಕುತ್ತಿದ್ದಾರೆ. ರಾಹುಲ್ ಗಾಂಧಿಯವರಿಗೆ ಮಾಹಿತಿ ಕೊಟ್ಟಿದ್ದಾರಂತೆ. ಇನ್ನೊಂದು ವಾರದಲ್ಲಿ ಕೇಂದ್ರದ ಮಂತ್ರಿಯನ್ನು ಬಂಧಿಸುವುದಾಗಿ ಹೇಳಿದ್ದಾರಂತೆ. ಯಾವ ಕೇಂದ್ರದ ಮಂತ್ರಿಯನ್ನು ಬಂಧಿಸುತ್ತಾರೋ ಗೊತ್ತಿಲ್ಲ. ನನ್ನನ್ನು ವಿಚಾರಣೆಗೆ ಏಕೆ ಕರೆಯುತ್ತಾರೆ. ನಾನೇನು ಮಾಡಿದ್ದೇನೆ ಎಂದು ಕರೆಯುತ್ತಾರೆ ಎಂದು ಪ್ರತಿಕ್ರಿಯಿಸಿದರು.
