ಕನ್ನಡಪ್ರಭ ವಾರ್ತೆ ಸಕಲೇಶಪುರ
ಒಬ್ಬರೇ ಒಬ್ಬ ನೈಜ ಮತದಾರನು ಮತಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಮತಗಟ್ಟೆ ಅಧಿಕಾರಿಗಳ ಮೇಲಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಹೇಳಿದರು.ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ೨೦ ವರ್ಷಗಳ ನಂತರ ನಡೆಯುತ್ತಿರುವ ಸಮಗ್ರ ವಿಶೇಷ ಮತಪಟ್ಟಿ ಪರಿಷ್ಕರಣೆಯನ್ನು ದಕ್ಷತೆಯಿಂದ ಲೋಪವಾಗದಂತೆ ಮಾಡಬೇಕು, ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೮೭ ಮತಗಟ್ಟೆಅಧಿಕಾರಿಗಳು ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು. ಪ್ರತಿವರ್ಷ ಮಾಡುವ ಪರಿಷ್ಕರಣೆಗೂ ಸಮಗ್ರ ಪರಿಷ್ಕರಣೆಗೂ ಇರುವ ವ್ಯತ್ಯಾಸವೆಂದರೆ, ಪ್ರತಿವರ್ಷ ಮಾಡುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮತಪಟ್ಟಿಗೆ ಹೆಸರು ಸೇರ್ಪಡೆ, ರದ್ದು, ವರ್ಗಾವಣೆ ಹಾಗೂ ತಿದ್ದುಪಡಿ ಮಾಡುತ್ತೇವೆ. ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ೨೦ ಅಥವಾ ೩೦ ವರ್ಷಗಳಿಗೊಮ್ಮೆ ಚುನಾವಣಾ ಆಯೋಗ ಸೂಚಿಸುವಂತೆ ಹಳೇ ಮತದಾರರ ಪಟ್ಟಿಯನ್ನು ತೆಗೆದುಹಾಕಿ ಹೊಸ ಮತದಾರರ ಪಟ್ಟಿ ಸಿದ್ಧಪಡಿಸುವುದಕ್ಕೆ ಸಮಗ್ರ ಮತದಾರರ ಪಟ್ಟಿ ಎನ್ನಲಾಗುತ್ತದೆ. ೧೯೫೨ರಿಂದ ೨೦೨೬ರವರೆಗೆ ಒಟ್ಟು ೧೧ ಬಾರಿ ವಿಶೇಷ ಸಮಗ್ರ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.
ಹೆಸರು ಸೇರ್ಪಡೆಗೊಳಿಸಿ:ಪ್ರತಿಯೊಬ್ಬ ಜವಾಬ್ದಾರಿ ನಾಗರಿಕರು ಚುನಾವಣೆ ಸಂಬಂಧ ನಡೆಯುವ ಹಲವು ಹಂತಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ೨೦೨೬ ಅಕ್ಟೋಬರ್ ೭ರ ಒಳಗೆ ಬರುವ ೧೮ ವರ್ಷ ತುಂಬಿದ ಎಲ್ಲರೂ ಮತದಾನಕ್ಕೆ ಅರ್ಹರು. ಆದ್ದರಿಂದ, ಮತದಾನದಂತ ಅತ್ಯಮೂಲ್ಯ ಹಕ್ಕನ್ನು ಕಳೆದುಕೊಳ್ಳಬಾರದೆಂದರೆ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳಲೇಬೇಕು. ಮತಗಟ್ಟೆ ಅಧಿಕಾರಿಗಳು ತರಬೇತಿ ವೇಳೆ ತಮಗೆ ಅನುಮಾನ ಇರುವ ಎಲ್ಲ ಅಂಶಗಳ ಬಗ್ಗೆ ತಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಬೇಕು. ಜೂನ್ ೩೦ರಿಂದ ಮನೆಮನೆಗೆ ಬರುವ ಮತಗಟ್ಟೆ ಅಧಿಕಾರಿಗಳಿಗೆ ಸಾರ್ವಜನಿಕರು ತಮ್ಮ ಮತದಾನದ ಹಕ್ಕಿನ ಕುರಿತು ಮಾಹಿತಿ ನೀಡುವ ಮೂಲಕ ಸಹಕರಿಸಬೇಕು. ಮತಗಟ್ಟೆ ಕೇಂದ್ರ ದೂರದಲ್ಲಿದ್ದರೆ ಅಥಾವ ದುರಸ್ಥಿತಿಗೆ ಈಡಾಗಿದ್ದರೆ ಸಹಾಯಕ ಚುನಾವಣಾಧಿಕಾರಿಗಳಿಗೆ ಮತಗಟ್ಟೆ ಅಧಿಕಾರಿಗಳು ಮಾಹಿತಿ ನೀಡಬೇಕು. ಆಗಸ್ಟ್ ೮ಕ್ಕೆ ಕರುಡು ಮತದಾರರ ಪಟ್ಟಿ ಸಿದ್ಧಗೊಳ್ಳಲಿದೆ. ಕರಡು ಮತಪಟ್ಟಿಯಲ್ಲಿ ಲೋಪವಿದ್ದರೆ ಸೆ. ೪ರವರೆಗೆ ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಅಕ್ಟೋಬರ್ ೭ಕ್ಕೆ ಹೊಸ ಮತಪಟ್ಟಿ ಸಿದ್ಧಗೊಳ್ಳಲಿದೆ ಎಂದರು.
12 ದಾಖಲೆ ಸಲ್ಲಿಕೆಗೆ ಅವಕಾಶ:
ಯಾವುದೇ ಕಾರಣಕ್ಕೂ ಮತಗಟ್ಟೆ ಅಧಿಕಾರಿಗಳ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅಂತಹ ಪ್ರಯತ್ನದಲ್ಲಿದ್ದವರು ಪ್ರಯತ್ನ ಕೈಬಿಡಬೇಕು, ಮತಪಟ್ಟಿಗೆ ಸೇರ್ಪಡೆಗೊಳ್ಳಲು ಚುನಾವಣಾ ಆಯೋಗ ೧೨ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದ್ದು ನಿತ್ಯದ ಪರಿಷ್ಕರಣೆ ಕಾರ್ಯವನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವುದು ಕಡ್ಡಾಯ. ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದು ಅನಿವಾರ್ಯ. ಮತಗಟ್ಟೆ ಅಧಿಕಾರಿಗಳಿಗೆ ಪ್ರತಿಗಟ್ಟೆ ಕೇಂದ್ರದ ಸಮೀಪ ಸಹಾಯ ಕೇಂದ್ರಗಳನ್ನು ತೆರೆಯಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸುಳ್ಳುದಾಖಲೆ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡರೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು. ಪಾರದರ್ಶಕ ಸಮಗ್ರವಿಶೇಷ ಮತಪಟ್ಟಿ ಪರಿಷ್ಕರಣೆ ನಡೆಸುವ ಉದ್ದೇಶದಿಂದ ಪರಿಷ್ಕರಣೆ ವೇಳೆ ಪರಿಷ್ಕರಣೆ ಮಾಹಿತಿ ಹೊಂದಿರುವ ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು ಮತಗಟ್ಟೆ ಅಧಿಕಾರಿಗಳೊಂದಿಗೆ ತೆರಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಲಾಗಿದೆ ಎಂದರು.
ಹೆಚ್ಚು ಮತದಾರರಿರುವಲ್ಲಿ ಸಮಸ್ಯೆ ಸೃಷ್ಟಿಯಾಗದಂತೆ ತಡೆಯಲು ಹೆಚ್ಚುವರಿ ಮತಗಟ್ಟೆ ಕೇಂದ್ರಗಳನ್ನು ತೆರೆಯಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ತಾಲೂಕು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಹುಲ್ಲಮನಿ ತಿಪ್ಪಣ್ಣ, ತಹಸೀಲ್ದಾರ್ ಸುಪ್ರೀತಾ, ಇಒ ಗಂಗಾಧರ್, ಬಿಇಒ ಪುಷ್ಪ ಮುಂತಾದವರಿದ್ದರು.
ಮುಖ್ಯಾಂಶಗಳುಜೂನ್ ೩೦ರಿಂದ ಮನೆಮನೆಗೆ ಬರುವ ಮತಗಟ್ಟೆ ಅಧಿಕಾರಿಗಳು
ಕರಡು ಮತಪಟ್ಟಿಯಲ್ಲಿ ಲೋಪವಿದ್ದರೆ ಸೆ. ೪ರವರೆಗೆ ಸರಿಪಡಿಸಿಕೊಳ್ಳಲು ಅವಕಾಶಸುಳ್ಳುದಾಖಲೆ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡರೆ ಒಂದು ವರ್ಷದ ಜೈಲು ಶಿಕ್ಷೆ