ಸಾರಾಂಶ
ಬಾಲಕಿ ಮಹಾಂತಮ್ಮಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಅಫಜಲ್ಪುರ ತಾಲೂಕಿನ ಚಿಣಮಗೇರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ಸಾಂಬಾರ್‌ನಲ್ಲಿ ಬಿದ್ದು ತೀವ್ರವಾಗಿ ಗಾಯದಿಂಡಿದ್ದ 2ನೇ ತರಗತಿ ವಿದ್ಯಾರ್ಥಿನಿ ಮಹಾಂತಮ್ಮ (8) ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.ನ.16ರಂದು ಬಿಸಿಯೂಟದ ಕುದಿಯುತ್ತಿದ್ದ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಶೇ.50ರಷ್ಟು ಅಧಿಕ ಸುಟ್ಟಗಾಯ ಅನುಭವಿಸಿದ್ದ ಮಹಾಂತಮ್ಮಳನ್ನು ಕಲಬುರಗಿ ನಗರದ ಜಿಮ್ಸ್, ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ನಂತರ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೂ ಸುಟ್ಟ ಗಾಯಗಳ ತೀವ್ರತೆಯೇ ಹೆಚ್ಚಾಗಿ ಆಕೆ ಅಲ್ಲಿನ ವೈದ್ಯರ ಚಿಕಿತ್ಸೆಗೂ ಸ್ಪಂದಸದೆ ಕೊನೆಯುಸಿರು ಎಳೆದಿದ್ದಾಳೆ.
ಅಫಜಲ್ಪುರ ಶಾಸಕ ಎಂ.ವೈ. ಪಾಟೀಲ್ ಅವರ ಸೂಚನೆಯಂತೆ ಅವರ ವೈದ್ಯಪುತ್ರ ಡಾ. ಸಂಜೀವ ಪಾಟೀಲ್ ಸಹಕಾರದಿಂದ ನಿನ್ನೆಯಷ್ಟೇ ಶನಿವಾರವಷ್ಟೇ ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗಿನ ಜಾವ 3.30ಕ್ಕೆ ಬಾಲಕಿ ಸಾವನ್ನಪ್ಪಿದ್ದಾಳೆ.ಸದರಿ ಘಟನೆ ಹಿನ್ನೆಲೆ ಈಗಾಗಲೇ ಮುಖ್ಯ ಶಿಕ್ಷಕ, ಸಹ ಶಿಕ್ಷಕ ಹಾಗೂ ಅಡುಗೆ ಮುಖಸ್ಥರನ್ನ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಯವರು ಅಮಾನತು ಮಾಡಿರೋದನ್ನ ಇಲ್ಲಿ ಸ್ಮರಿಸಬಹುದಾಗಿದೆ.
ಬಾಲಕಿ ಮಹಾಂತಮ್ಮಳ ಪಾರ್ಥೀವ ಶರೀರ ಬೆಂಗಳೂರಿನಿಂದ ಬರಬೇಕಿದೆ. ಅಲ್ಲಿಂದ ಬಂದ ನಂತರ ಆಕೆಯ ಹುಟ್ಟೂರು ಚಿಣಗೇರಾದಲ್ಲಿಯೇ ಶವ ಸಂಸ್ಕಾರ ನಡೆಯಲಿದೆ. ಬಾಲಕಿಯ ಕುಟುಂಬಕ್ಕೆ ದೂರವಾಣಿ ಕರೆ ಮಾಡಿ ಶಾಸಕ ಎಂವೈ ಪಾಟೀಲ್ ಸಾಂತ್ವನ ಹೇಳಿದ್ದಾರೆ.ತಮ್ಮ ಮಗಳ ಸಾವಿಗೆ ಶಾಲೆಯಲ್ಲಿನ ಕೆಲಸ ಮಾಡುತ್ತಿದ್ದ ಶಿಕ್ಷಕರು, ಅಡುಗೆಯವರು ಸೇರಿದಂತೆ ಹಲವರ ಕರ್ತವ್ಯ ಲೋಪದಿಂದಲೇ ಸದರಿ ದುರಂತ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಬಾಲಕಿ ಮಹಾಂತಮ್ಮಳ ತಾಯಿ ಸಂಗೀತಾ ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.