ಅಕ್ಕನ ಮನೆಯಲ್ಲೇ ₹52 ಲಕ್ಷ, ಚಿನ್ನ ಕದ್ದ ತಂಗಿ!

| Published : May 08 2024, 01:36 AM IST

ಅಕ್ಕನ ಮನೆಯಲ್ಲೇ ₹52 ಲಕ್ಷ, ಚಿನ್ನ ಕದ್ದ ತಂಗಿ!
Share this Article
  • FB
  • TW
  • Linkdin
  • Email

ಸಾರಾಂಶ

ಮಾಡಿದ್ದ ಸಾಲ ತೀರಿಸಲು ಹಣ ಕೇಳಿದ್ದ ತಂಗಿಗೆ ಹಣ ನೀಡಲು ಅಕ್ಕ ಒಪ್ಪದಿದ್ದಾಗ ಕೀ ನಕಲಿ ಮಾಡಿಸಿ ದುಷ್ಕೃತ್ಯ ಎಸಗಿ ಹಣ, ಚಿನ್ನದ ನಾಣ್ಯ ಜಪ್ತಿ, ಮಾಡಿದ ಯುವತಿಯನ್ನು ಬಂಧನ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಕಲಿ ಕೀ ಬಳಸಿ ಒಡಹುಟ್ಟಿದ ಅಕ್ಕನ ಮನೆಗೆ ಕನ್ನ ಹಾಕಿದ್ದ ತಂಗಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆ ನಿವಾಸಿ ಉಮಾ(29) ಬಂಧಿತ ಆರೋಪಿ. ಈಕೆಯಿಂದ ₹5 ಲಕ್ಷ ನಗದು, 30 ಚಿನ್ನದ ನಾಣ್ಯಗಳು ಹಾಗೂ ತಾನು ಕೆಲಸಕ್ಕಿದ್ದ ಆಟೋ ಕನ್ಸೆಲ್‌ಟೆಂಟ್‌ ಮಾಲಿಕನಿಗೆ ನೀಡಿದ್ದ 16 ಚಿನ್ನದ ನಾಣ್ಯಗಳು ಮತ್ತು ₹46.90 ಲಕ್ಷ ನಗದು ಸೇರಿದಂತೆ ಒಟ್ಟು ₹51.90 ಲಕ್ಷ ನಗದು ಮತ್ತು ₹13 ಲಕ್ಷ ಮೌಲ್ಯದ 182 ಗ್ರಾಂ ತೂಕದ 46 ಚಿನ್ನದ ನಾಣ್ಯಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ದೂರುದಾರ ನಾಗದೇವನಹಳ್ಳಿಯ ಆರ್‌.ಆರ್‌.ಲೇಔಟ್‌ನ ನಿವಾಸಿ ಕುನ್ನೇಗೌಡ ಸಿಮೆಂಟ್‌ ಹಾಗೂ ಕಬ್ಬಿಣದ ವ್ಯಾಪಾರವನ್ನು ದೊಡ್ಡಪ್ಪನ ಮಗನ ಪಾಲುದಾರಿಕೆಯಲ್ಲಿ ಮಾಡುತ್ತಿದ್ದಾರೆ. ಏ.22ರಂದು ಬೆಳಗ್ಗೆ ಕುನ್ನೇಗೌಡರು ಕುಟುಂಬ ಸಮೇತ ಸ್ವಂತ ಊರದ ಹುಲಿಯೂರು ದುರ್ಗದಲ್ಲಿ ನಡೆಯುವ ಚೌಡೇಶ್ವರಿ ದೇವರ ಹಬ್ಬಕ್ಕೆ ತೆರಳಿದ್ದರು. ಇದಕ್ಕೂ ಮುನ್ನ ವ್ಯಾಪಾರ ಪಾಲುದಾರನಾದ ಸಂಬಂಧಿಗೆ ಮನೆಯ ಬೀಗ ಕೀ ನೀಡಿ ರಾತ್ರಿ ಮನೆಗೆ ಬಂದು ಮಲಗುವಂತೆ ಸೂಚಿಸಿದ್ದಾರೆ.

ಅದರಂತೆ ಏ.22 ಮತ್ತು 23ರಂದು ಸಂಬಂಧಿ ಕುನ್ನೇಗೌಡರ ಮನೆಗೆ ಬಂದು ಮಲಗಿದ್ದಾರೆ. ಏ.24ರಂದು ರಾತ್ರಿ 10.30ಕ್ಕೆ ಮಲಗಲು ಬಂದಿದ್ದಾಗ ರೂಮಿನಲ್ಲಿ ಬೀರುವಿನ ಬಾಗಿಲು ತೆರೆದಿರುವುದು ಮತ್ತು ಮನೆಯ ವಸ್ತುಗಳು ಚೆಲ್ಲಾಪಿಲ್ಲಿ ಆಗಿರುವುದು ಕಂಡು ಬಂದಿದೆ. ಕಳ್ಳತನ ನಡೆದಿರುವ ಶಂಕೆಯಲ್ಲಿ ತಕ್ಷಣ ಕುನ್ನೇಗೌಡರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮಲಗಲು ಬಂದಾಗ ಬೀರು ತೆರೆದಿತ್ತು:

ಅಂದು ತಡರಾತ್ರಿ ಕುಟುಂಬದೊಂದಿಗೆ ಮನೆಗೆ ವಾಪಾಸ್‌ ಆದ ಕುನ್ನೇಗೌಡರು ಪರಿಶೀಲನೆ ಮಾಡಿದಾಗ, ಬೀರುವಿನಲ್ಲಿದ್ದ 180 ಗ್ರಾಂ ತೂಕದ 46 ಚಿನ್ನದ ನಾಣ್ಯಗಳು ಮತ್ತು ಮಂಚದ ಕೆಳಗೆ ಇರಿಸಿದ್ದ ₹52 ಲಕ್ಷ ನಗದು ಹಣ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ಕೆಂಗೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾದಿನಿಯೇ ಕಳ್ಳಿ!

ಆರೋಪಿ ಉಮಾ ದೂರುದಾರ ಕುನ್ನೇಗೌಡರ ಪತ್ನಿಯ ಸ್ವಂತ ತಂಗಿ. ಇನ್ನೂ ಮದುವೆಯಾಗದ ಉಮಾ ಲಗ್ಗೆರೆಯಲ್ಲಿ ನೆಲೆಸಿದ್ದಳು. ಆಟೋ ಕನ್ಸೆಲ್‌ಟೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು. ಶೋಕಿಯ ಗೀಳು ಹತ್ತಿಕೊಂಡಿದ್ದ ಉಮಾ, ಮೂರು ಲಕ್ಷ ರು. ಕೈ ಸಾಲ ಮಾಡಿಕೊಂಡಿದ್ದಳು. ಈ ಸಾಲ ತೀರಿಸಲು ಬೇರೆ ಮಾರ್ಗ ಇಲ್ಲದೆ ಅಕ್ಕನ ಬಳಿ ಸಾಲ ಕೇಳಿದ್ದಳು. ಆದರೆ, ಅಕ್ಕ ಹಣ ನೀಡಲು ನಿರಾಕರಿಸಿದ್ದರು. ಅಕ್ಕನ ಮನೆಗೆ ಆಗಾಗ ಬರುತ್ತಿದ್ದ ಉಮಾ, ಹಣ ಇರುವುದರ ಬಗ್ಗೆ ತಿಳಿದುಕೊಂಡಿದ್ದಳು. ಒಂದು ದಿನ ಮನೆಗೆ ಬಂದಿದ್ದಾಗ ಯಾರಿಗೂ ತಿಳಿಯದಂತೆ ಮನೆ ಕೀ ತೆಗೆದುಕೊಂಡು ನಕಲಿ ಕೀ ಮಾಡಿಸಿಕೊಂಡಿದ್ದಳು. ಏ.24ರಂದು ಅಕ್ಕನ ಮನೆಯಲ್ಲಿ ಯಾರು ಇಲ್ಲದಿರುವುದರ ಬಗ್ಗೆ ತಿಳಿದುಕೊಂಡು ನಕಲಿ ಕೀ ಬಳಸಿ ಮನೆ ಪ್ರವೇಶಿಸಿ ಬೀರುವಿನಲ್ಲಿದ್ದ ಚಿನ್ನದ ನಾಣ್ಯಗಳು ಹಾಗೂ ಮಂಚದ ಕೆಳಗೆ ಇದ್ದ ನಗದು ಹಣವನ್ನು ಕದ್ದು ಪರಾರಿಯಾಗಿದ್ದಳು.

ಅಕ್ಕ-ಬಾವನ ಹೆಸರಿನಲ್ಲಿಮಾಲೀಕರಿಗೆ ಹಣ, ಚಿನ್ನ!

ಆರೋಪಿ ಉಮಾ ಚಿನ್ನದ ನಾಣ್ಯ ಮತ್ತು ನಗದು ಹಣವನ್ನು ಕದ್ದ ಬಳಿಕ ಅದನ್ನು ಏನು ಮಾಡಬೇಕು ಎಂಬ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದಾಳೆ. ಬಳಿಕ ತಾನು ಕೆಲಸ ಮಾಡುವ ಆಟೋ ಕನ್ಸೆಲ್‌ಟೆಂಟ್‌ ಮಾಲೀಕನಿಗೆ 16 ಚಿನ್ನದ ನಾಣ್ಯಗಳು ಮತ್ತು ₹46.90 ಲಕ್ಷ ನಗದು ಹಣವನ್ನು ನೀಡಿ, ಉಳಿದಿದ್ದನ್ನು ತಾನೇ ಇರಿಸಿಕೊಂಡಿದ್ದಳು. ಅಕ್ಕ-ಬಾವ ಊರಿನಲ್ಲಿ ಇಲ್ಲ. ಊರಿಗೆ ಹೋಗುವಾಗ ಈ ಹಣ ಮತ್ತು ಚಿನ್ನದ ನಾಣ್ಯಗಳನ್ನು ಇರಿಸಿಕೊಳ್ಳುವಂತೆ ನನಗೆ ನೀಡಿದ್ದಾರೆ. ನಾನು ಸಹ ಊರಿಗೆ ಹೋಗುತ್ತಿದ್ದೇನೆ. ನಾನು ವಾಪಾಸ್‌ ಬರುವವರೆಗೂ ಇದನ್ನು ನಿಮ್ಮ ಬಳಿಯೇ ಇರಿಸಿಕೊಂಡಿರಿ ಎಂದು ಮಾಲೀಕರಿಗೆ ಹೇಳಿದ್ದಳು.

ಸಿಸಿಟಿವಿ ಸುಳಿವು

ಪೊಲೀಸರು ತನಿಖೆಗೆ ಇಳಿದಾಗ, ಕಳ್ಳರು ಕುನ್ನೇಗೌಡರ ಮನೆಯ ಬಾಗಿಲನ್ನು ನಕಲಿ ಕೀ ಮೂಲಕ ತೆರೆದಿರುವುದು ಕಂಡು ಬಂದಿದೆ. ಹೀಗಾಗಿ ಪರಿಚಿತರೇ ಈ ಕೃತ್ಯ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಂತೆಯೇ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಉಮಾ ಓಡಾಡಿರುವುದು ಸೆರೆಯಾಗಿತ್ತು. ಬಳಿಕ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ನಕಲಿ ಕೀ ಬಳಸಿ ಅಕ್ಕನ ಮನೆಯಲ್ಲಿ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.