ಸಾರಾಂಶ
ಶ್ರೀಶೈಲ ಮಠದ
ಬೆಳಗಾವಿ : ಬಡತನ ಸಾಧನೆಗೆ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದಲ್ಲಿ 7 ಚಿನ್ನದ ಪದಕ ಪಡೆದ ಬೆಂಗಳೂರಿನ ಕೂಲಿ ನೇಕಾರನ ಪುತ್ರ ಹಾಗೂ 1 ಚಿನ್ನದ ಪದಕ ಪಡೆದ ಬೆಳಗಾವಿಯ ಆಟೋ ಚಾಲಕನ ಪುತ್ರಿ ನಿರೂಪಿಸಿದ್ದಾರೆ.
ಬೆಳಗಾವಿಯ ಕಪಿಲೇಶ್ವರ ನಗರದ ನಿವಾಸಿ, ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿನಿ ಮೇಘನಾ ಅನಿಲ ಪವಾರ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಆ್ಯಂಡ್ ಡಾಟಾ ಸೈನ್ಸ್‌ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ವೃತ್ತಿಯಲ್ಲಿ ಅಟೋ ಚಾಲಕರಾಗಿರುವ ಮೇಘನಾ ತಂದೆ ಅನಿಲ ಪವಾರ ಅವರಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಆಟೋರಿಕ್ಷಾ ಅವರ ಬದುಕಿಗೆ ಆಸರೆ. ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಅವರ ಹಂಬಲಕ್ಕೆ ಮಕ್ಕಳು ಕೂಡ ಸಾಥ್ ನೀಡಿದ್ದು ವಿಶೇಷ. ಕೋರಿಯರ್ ಸರ್ವಿಸ್ ಜೊತೆಗೆ ಕ್ಯಾಂಪ್ ಪ್ರದೇಶದಲ್ಲಿನ ಸೇಂಟ್ ಮೇರಿ ಸ್ಕೂಲ್‌ಗೆ ಮಕ್ಕಳನ್ನು ಕರೆದುಕೊಂಡು ಹೋಗುವುದು, ಬಿಡುವುದು ಮಾಡುತ್ತಾರೆ. ಮಾಸಿಕವಾಗಿ ಬರುವ ಆದಾಯವನ್ನು ಬಿಟ್ಟರೆ ಮತ್ತೆ ಯಾವುದೇ ಆದಾಯದ ಮೂಲವಿಲ್ಲ. ಆದರೂ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಸಲು ಶ್ರಮಿಸುತ್ತಿದ್ದಾರೆ.
ಸರ್ಕಾರಿ ಕೋಟಾದಲ್ಲಿ ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದ ಮೇಘನಾ, ತಂದೆಯ ಕನಸನ್ನು ಸಾಕಾರಗೊಳಿಸಲು ಹಗರಲಿರುಳು ಶ್ರಮಿಸಿದ್ದರ ಪ್ರತಿಫಲವಾಗಿ ಈಗ ಚಿನ್ನದ ಸಾಧನೆ ಮಾಡಿದ್ದಾಳೆ. ದಿನದ ಆದಾಯವನ್ನೇ ನಂಬಿರುವ ತಂದೆ ಅನಿಲ ಪವಾರ ಮಗಳಿಗೆ ಸಾಲ ಮಾಡಿ ಲ್ಯಾಪ್ ಟಾಪ್ ಕೊಡಿಸಿದ್ದಾರೆ. ಅಲ್ಲದೆ, ಪ್ರತಿಯೊಂದು ಹಂತದಲ್ಲಿಯೂ ಮಗಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಎಷ್ಟೇ ಕಷ್ಟ ಬಂದರೂ ಕೂಡ ಎದೆಗುಂದದೆ ಕುಟುಂಬ ನಿರ್ವಹಣೆ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಹಂಬಲ. ಮೇಘನಾಳ ಕಿರಿಯ ಸಹೋದರಿಯೂ ಕೂಡ ಪ್ರತಿಭಾವಂತೆ. ಅವಳೂ ಸಹ ಅಂಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾಳೆ. ಇನ್ನೊಬ್ಬ ಕಿರಿಯ ಪುತ್ರ ಪಿಯುಸಿಯಲ್ಲಿ ಓದುತ್ತಿದ್ದಾನೆ.
ಪ್ರತಿದಿನ 2-3 ಗಂಟೆ ಅಭ್ಯಾಸ ಮಾಡುತ್ತಿದ್ದೆ. ನನಗೆ ಪ್ರೋತ್ಸಾಹಿಸಿದ ತಂದೆ-ತಾಯಿ, ವಿಭಾಗದ ಮುಖ್ಯಸ್ಥ ಸಾಗರ ಬಿರ್ಜೆ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ. ಮುಂದೆ ಡೇಟಾ ಸೈನ್ಸ್ ನಲ್ಲಿ ಉನ್ನತ ಶಿಕ್ಷಣ ಮಾಡುವ ಭಯಕೆಯಿದೆ.
-ಮೇಘನಾ ಪವಾರ ಚಿನ್ನದ ಪದಕ ಪುರಸ್ಕೃತೆ
ಕೂಲಿ ನೇಕಾರನ ಪುತ್ರನಿಗೆ ಒಲಿದ 7 ಚಿನ್ನದ ಪದಕ
ಬೆಂಗಳೂರು ಎಸ್.ಜೆ.ಬಿ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮೋಹನಕುಮಾರ ಎಲ್. ಬರೋಬ್ಬರಿ 7 ಚಿನ್ನದ ಪದಕ ಸ್ವೀಕರಿಸಿದರು. ಮೋಹನಕುಮಾರ ತಂದೆ ಲೋಕೇಶ ವೃತ್ತಿಯಲ್ಲಿ ಕೂಲಿ ನೇಕಾರ. ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ. ಕೂಲಿ ಮಾಡಿ ಮೂವರು ಮಕ್ಕಳಿಗೂ ಒಳ್ಳೆಯ ಶಿಕ್ಷಣ ನೀಡಿದ್ದಾರೆ. ಮಗ 7 ಚಿನ್ನದ ಪದಕ ಪಡೆದ ಕ್ಷಣವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ಲೋಕೇಶ ಮಾತನಾಡಿ, ನಾನು ನೇಕಾರಿಕೆ ಕೂಲಿ ಕೆಲಸ ಮಾಡುತ್ತೇನೆ. ವಾರದ ಸಂಬಳದಲ್ಲಿ ಮಕ್ಕಳನ್ನು ಬೆಳೆಸಿದ್ದೇನೆ. ಮಗನ ಸಾಧನೆ ನೋಡಿ ಏನು ಮಾತಾಡಬೇಕು ಎಂಬುದು ತಿಳಿಯುತ್ತಿಲ್ಲ. ತುಂಬಾ ಖುಷಿ ಆಗುತ್ತಿದೆ ಎಂದು ಆನಂದಭಾಷ್ಪ ಸುರಿಸಿದರು...
ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಬೇರೆಯವರಿಗೆ ಹೇಳಿಕೊಡುತ್ತಿದ್ದೆ. ಇದರಿಂದ ಓದಿದ್ದು ಚೆನ್ನಾಗಿ ನೆನಪಲ್ಲಿ ಉಳಿಯುತ್ತಿತ್ತು. ಗೊತ್ತಿಲ್ಲದ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದೆವು. ಇದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು. ಈಗ ಒಂದು ತಿಂಗಳಿನಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮುಂದೆ ಕೇಂದ್ರದಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದೇನೆ. ತಾಯಿ ತೀರಿಕೊಂಡು 21 ವರ್ಷ ಆಗಿದೆ. ಆಗಿನಿಂದ ಕಷ್ಟ ಪಟ್ಟು ಬೆಳೆಸಿರುವ ತಂದೆಗೆ ಇಷ್ಟೂ ಮಾಡದಿದ್ದರೆ ಹೇಗೆ..? ನಾವು ಏನೇ ಸಾಧನೆ ಮಾಡಿದರೂ ನನ್ನ ತಂದೆಗೆ ಸಮರ್ಪಣೆ.
-ಮೋಹನಕುಮಾರ ಎಲ್. 7 ಚಿನ್ನದ ಪದಕ ಪಡೆದ ವಿದ್ಯಾರ್ಥಿ
ಕಾಂಟ್ರ್ಯಾಕ್ಟರ್ ಮಗನಿಗೆ 12 ಚಿನ್ನದ ಪದಕ
ಬೆಳಗಾವಿಯ ಕೆಎಲ್ಇ ಡಾ.ಎಂ.ಎಸ್.ಶೇಷಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಾಹಿಲ್ ಮೋಹನ ಸೋಮನಾಚೆ 12 ಚಿನ್ನದ ಪದಕಗಳಿಗೆ ಮುತ್ತಿಕ್ಕಿದರು.
10 ಚಿನ್ನದ ಪದಕ ಪಡೆದಿರುವ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಜಿ.ವಿಷ್ಣುಪ್ರಿಯಾ ಮಾತನಾಡಿ, ಈ ಸಾಧನೆಯಲ್ಲಿ ನನ್ನ ತಂದೆ-ತಾಯಿ ಪಾತ್ರ ಬಹಳ ದೊಡ್ಡದಿದೆ. ಅವರು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಈ ಪದಕಗಳನ್ನು ಅವರಿಗೆ ಅರ್ಪಿಸುತ್ತೇನೆ. ಮುಂದೆ ಯುಪಿಎಸ್ಸಿ ಪರೀಕ್ಷೆ ಎದುರಿಸಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದರು.
1 ಚಿನ್ನದ ಪದಕ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದೆ. 12 ಪದಕಗಳು ಸಿಕ್ಕಿವೆ. ಬಹಳ ಸಂತಸ ಆಗುತ್ತಿದೆ. ದಿನಕ್ಕೆ ಅರ್ಧ ಗಂಟೆಯಿಂದ 1 ತಾಸು ಅಷ್ಟೇ ಓದುತ್ತಿದ್ದೆ. ನಮ್ಮ ತಂದೆ ಸಿವಿಲ್ ಕಾಂಟ್ರ್ಯಾಕ್ಟರ್ . ಭವಿಷ್ಯದಲ್ಲಿ ಎಲ್ ಆ್ಯಂಡ್ ಟಿ ಅಂತಹ ಕಂಪನಿ ತೆರೆಯುವ ಗುರಿ ಹೊಂದಿದ್ದೇನೆ. ಯಾವುದೇ ಕ್ಲಾಸ್ ಮಿಸ್ ಮಾಡಬಾರದು. ಮೊಬೈಲ್ ಬಿಟ್ಟು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಚಿನ್ನದ ಪದಕ ಪಡೆಯುವುದು ತುಂಬಾ ಸುಲಭ.
-ಸಾಹಿಲ್ ಮೋಹನ ಸೋಮನಾಚೆ 12 ಚಿನ್ನದ ಪದಕ ಪಡೆದ ವಿದ್ಯಾರ್ಥಿ