ಉತ್ತಮ ಸಂಸ್ಕಾರ ನೀಡುವ ಶಿಕ್ಷಣ ಇಂದು ಅವಶ್ಯ

| Published : Aug 08 2024, 01:36 AM IST

ಸಾರಾಂಶ

ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿಕೊಳ್ಳಲು ಶಕ್ತಿ ನೀಡುವ ಹಾಗೂ ಒಳ್ಳೆಯ ಸಂಸ್ಕಾರ ನೀಡಬಹುದಾದ ಶಿಕ್ಷಣದ ಅಗತ್ಯತೆ ಇಂದು ಇದೆ ಎಂದು ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ಜಿ.ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿಕೊಳ್ಳಲು ಶಕ್ತಿ ನೀಡುವ ಹಾಗೂ ಒಳ್ಳೆಯ ಸಂಸ್ಕಾರ ನೀಡಬಹುದಾದ ಶಿಕ್ಷಣದ ಅಗತ್ಯತೆ ಇಂದು ಇದೆ ಎಂದು ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ಜಿ.ಹಿರೇಮಠ ಹೇಳಿದರು.

ಅವರು ಗ್ರಾಮದ ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ದಿ.ರಾಮಪ್ಪ ಕೃಷ್ಣಪ್ಪ ಯಡಹಳ್ಳಿ ಹಾಗೂ ದಿ.ಭೀಮಪ್ಪ ಹನಮಪ್ಪ ಗೊರವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ವಿಷಯದ ಕುರಿತು ಉಪನ್ಯಾಸ ನೀಡಿದರು.

ಮಕ್ಕಳು ಶಿಕ್ಷಕರ ಆಚಾರ, ವಿಚಾರ, ನಡೆ, ನುಡಿಗಳನ್ನು ಪಾಲಿಸುತ್ತಾರೆ. ಹೀಗಾಗಿ ಶಿಕ್ಷಕ ತಾನು ಹೇಗಿರಬೇಕು ಎಂಬುವುದನ್ನು ಅರಿತು ಮಕ್ಕಳ ತಪ್ಪುಗಳನ್ನು ತಿದ್ದಿ, ಅವರ ಮನಸ್ಥಿತಿಯನ್ನು ಬದಲಾಯಿಸಲು ಸರಿಯಾದ ಮಾರ್ಗ ತೋರುವುದೇ ಸಂಸ್ಕಾರ ಎಂದ ಹಿರೇಮಠ, ಇದು ಕೇವಲ ಉಪದೇಶದಿಂದ ಆಗದು. ಕೃತಿಯಿಂದ ಆಗಬೇಕಷ್ಟೇ ಎಂದು ಹೇಳಿದರು.

ವಿಲಾಸಿ ಜೀವನ ನಡೆಸಿ ಬದುಕನ್ನೇ ನಾಶ ಮಾಡಿಕೊಳ್ಳುತ್ತಿದ್ದ ವೇಮನನನ್ನು ತಿದ್ದಿ ಮಹಾಯೋಗಿಯನ್ನಾಗಿ ಪರಿವರ್ತಿಸಿದ ಹೇಮರಡ್ಡಿ ಮಲ್ಲಮ್ಮನಂತವರ ಅವಶ್ಯಕತೆ ಇಂದಿನ ಸಮಾಜಕ್ಕಿದೆ. ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬದಲಾಯಿಸಿ ಸುಸಂಸ್ಕೃತರನ್ನಾಗಿ ಮಾಡುವ ಶಿಕ್ಷಕರು ಹಾಗೂ ಶಿಕ್ಷಣದ ಅಗತ್ಯತೆಯಿದೆ ಎಂದರು.

ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎನ್.ಬಿ.ಗೊರವರ ಮಾತನಾಡಿ, ಸಂಸ್ಕಾರವೇ ಇಲ್ಲದ ಶಿಕ್ಷಣ ಬದುಕನ್ನು ಸಾರ್ಥಕಗೊಳಿಸಲು ಸಾಧ್ಯವಿಲ್ಲ. ಹಿಂದಿನ ದಿನಗಳಲ್ಲಿ ಶಿಕ್ಷಕರು ವಿದ್ಯೆಯ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದ್ದರಿಂದಲೇ ಇಂದಿಗೂ ಅವರನ್ನು ಸಮಾಜ ಸ್ಮರಣೆ ಮಾಡುತ್ತದೆ ಎಂದರು.

ಅತಿಥಿ ಕೆ.ಪಿ.ಅರಿಷಿಣಗೋಡಿ ಮಾತನಾಡಿ, ದಿ.ರಾಮಪ್ಪ ಯಡಹಳ್ಳಿ ಉತ್ತಮ ಶಿಕ್ಷಕರಾಗಿ, ದಿ.ಭೀಮಪ್ಪ ಗೊರವರ ನಿಸ್ವಾರ್ಥ ಸಮಾಜ ಸೇವಕರಾಗಿ ಬದುಕಿದ ಪ್ರಯುಕ್ತ ಇಂದಿಗೂ ಅವರು ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕ ಎಸ್.ಎಸ್.ಜಮಾದಾರ, ಮುತ್ತುರಾಜ ಗೊರವರ, ಕರಣಿಕ ವೈ.ಟಿ.ಸನಗಿನ ಹಾಗೂ ಗ್ಯಾನಪ್ಪ ವಾಲೀಕಾರ ಅವರನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡದ ಒಪ್ಪತ್ತೇಶ್ವರ ಮಹಾಸ್ವಾಮೀಜಿ ಮಾತನಾಡಿದರು.ಪ್ರಗತಿಪರ ರೈತ ಲಕ್ಷ್ಮಪ್ಪ ಬಾಳಕ್ಕನವರ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಎಂ.ಎ.ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕೃಷಿ ಅಧಿಕಾರಿ ಹನಮಂತ ಗೊರವರ, ಕೃಷ್ಣಾ ಯಡಹಳ್ಳಿ ಇದ್ದರು.

ಗುಳೇದಗುಡ್ಡದ ಶಂಕರ ಮುಂದಿನಮನಿ ಕಲಾ ಬಳಗ ನಾಡಗೀತೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಸನ್ನಪ್ಪನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಘಟಕದ ಅಧ್ಯಕ್ಷ ಸಂಜಯ ನಡುವಿನಮನಿ ನಿರೂಪಿಸಿದರು. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ವಂದಿಸಿದರು.