ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಇತ್ತೀಚಿನ ದಿನಗಳಲ್ಲಿ ಔಷಧೀಯ ಗಿಡಗಳಿಗೆ ಭಾರಿ ಬೇಡಿಕೆಯಿದೆ. ಔಷಧೀಯ ಗಿಡಗಳನ್ನು ಬೆಳೆಸಿದರೆ ಅದನ್ನು ಕೊಂಡುಕೊಳ್ಳಲು ಕೆಲವು ಸಂಸ್ಥೆಗಳು ಮುಂದೆ ಬರುತ್ತದೆ. ಆದ್ದರಿಂದ ಕಾಫಿ ತೋಟಗಳ ನಡುವೆಯೇ ಹಲವು ಬಗೆಯ ಸ್ಥಳೀಯ ಔಷಧೀಯ ಗಿಡಗಳನ್ನು ಬೆಳೆಸುವ ಮೂಲಕ ಬೆಳೆಗಾರರು ತಮ್ಮ ಆದಾಯವನ್ನು ದ್ವಿಗುಣಗೊಳಿಸಬಹುದಾಗಿದೆ.
ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸಹಯೋಗದಲ್ಲಿ ಜಿಲ್ಲೆಯ ಪ್ರಗತಿಪರ ಕೃಷಿಕ ಹಾಗೂ ಆದಿ ಕಾಳು ಮೆಣಸು ತಳಿ ಸಂರಕ್ಷಕ ನಾಪಂಡ ಪೂಣಚ್ಚ ಅವರ ಗರ್ವಾಲೆಯ ಆದಿ ಪೆಪ್ಪರ್ ಡೆಮೊ ಫಾರ್ಮ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ನಡೆದ ಔಷಧಿ ಸಸ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ತಜ್ಞರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದೆ. ಜಿಲ್ಲೆ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಅಪಾರ ಸಸ್ಯ ಸಂಪತ್ತಿದೆ. ಅದರಲ್ಲೂ ಪ್ರಮುಖವಾಗಿ ಔಷಧೀಯ ಸಸ್ಯಗಳು ಸಾಕಷ್ಟಿವೆ. ಜಿಲ್ಲೆಯಲ್ಲಿ ಬೆಳೆಗಾರರು ತಮ್ಮ ಕಾಫಿ ತೋಟಗಳ ನಡುವೆ ನೈಸರ್ಗಿಕವಾಗಿ ಬೆಳೆಯುವ ಔಷಧಿ ಸಸ್ಯಗಳಾದ ಹಿಪ್ಪಲಿ, ಅಶೋಕ, ಕರಿಧೂಪ, ಆಡುಸೋಗೆ ಯನ್ನು ಬೆಳೆದು ಆದಾಯ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಕಾಫಿಯನ್ನು ಪ್ರಮುಖ ಬೆಳೆಯಾಗಿ ಹಾಗೂ ಕಾಳು ಮೆಣಸನ್ನು ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಇದೀಗ ಸದ್ಯಕ್ಕೆ ಕಾಫಿಗೆ ಉತ್ತಮ ಬೇಡಿಕೆಯಿದೆ. ಈ ಕಾಫಿ ತೋಟದ ನಡುವೆಯೇ ಜಿಲ್ಲೆಯ ಹವಾಗುಣಕ್ಕೆ ಹೊಂದಿಕೊಳ್ಳುವ ಔಷಧೀಯ ಗಿಡಗಳನ್ನು ಬೆಳೆದು ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.ಕರ್ನಾಟಕ ರಾಜ್ಯವು ಅಪಾರ ಔಷಧಿ ಸಸ್ಯ ಸಂಪತ್ತನ್ನು ಹೊಂದಿದೆ. ರಾಜ್ಯದಲ್ಲಿ ಸುಮಾರು 6,771 ಸಸ್ಯ ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಸುಮಾರು 2,247 ಸಸ್ಯ ಪ್ರಭೇದಗಳನ್ನ ವಿವಿಧ ಶಾಸ್ತ್ರೀಯ ವೈದ್ಯ ಪದ್ಧತಿಗಳಲ್ಲಿ ಬಳಸಲಾಗುತ್ತಿದೆ. ದಿನ ನಿತ್ಯದ ಆಹಾರ, ಅನೇಕ ಸಂಪ್ರದಾಯ ಹಾಗೂ ಹಬ್ಬ ಹರಿದಿನಗಳಲ್ಲಿ ಸಾಕಷ್ಟು ಔಷಧೀಯ ಸಸ್ಯಗಳ ಬಳಕೆಯನ್ನು ಕಾಣಬಹುದಾಗಿದೆ.
ಇಂಡಿಯನ್ ಇನ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರಿಸರ್ಚ್ ಸೆಂಟರ್ ನಿಂದ ಈಗಾಗಲೇ ಚಿಕ್ಕಮಗಳೂರುವಿನ ಕಾಫಿ ತೋಟದಲ್ಲಿ ಔಷಧೀಯ ಗಿಡಗಳನ್ನು ಬೆಳೆಯುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲೂ ಕೂಡ ಔಷಧಿ ಗಿಡಗಳನ್ನು ಬೆಳೆದು ಆದಾಯ ಗಳಿಸಲು ವಿಫುಲ ಅವಕಾಶಗಳಿದ್ದು, ಜಿಲ್ಲೆಯ ಬೆಳೆಗಾರರು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕಿದೆ.ಆಸಕ್ತಿ ಇರುವ ಬೆಳೆಗಾರರಿಗೆ ಕರ್ನಾಟಕ ರಾಜ್ಯ ಔಷಧಿ ಗಿಡ ಮೂಲಿಕಾ ಪ್ರಾಧಿಕಾರವು ಮಾಹಿತಿ ಹಾಗೂ ತಾಂತ್ರಿಕ ಸಹಾಯವನ್ನು ನೀಡುತ್ತಿದೆ.
ತಂಡವಾಗಿ ಬೆಳೆದರೆ ಉತ್ತಮ: ಜಿಲ್ಲೆಯಲ್ಲಿ ಬೆಳೆಗಾರರು ಗುಂಪಾಗಿ ಇಲ್ಲಿನ ಸ್ಥಳೀಯ ಔಷಧೀಯ ಗಿಡಗಳನ್ನು ಬೆಳೆಯಲು ಮುಂದಾಗಬೇಕಿದೆ. ಔಷಧೀಯ ಗಿಡಗಳಿಗೆ ಭಾರಿ ಬೇಡಿಕೆ ಇರುವುದರಿಂದ ದೊಡ್ಡ ಸಂಸ್ಥೆಗಳು ಕೊಂಡುಕೊಳ್ಳುತ್ತದೆ. ಕಡಿಮೆ ಮಾಡುವ ಬದಲಾಗಿ ಗುಂಪಾಗಿ ಬೆಳೆದಲ್ಲಿ ಹೆಚ್ಚಿನ ಔಷಧೀಯ ಉತ್ಪಾದನೆ ಆಗುತ್ತದೆ. ಇದರಿಂದ ಮಾರುಕಟ್ಟೆ ವ್ಯವಸ್ಥೆ ಸುಲಭ ಆಗಲಿದೆ ಎನ್ನುವುದು ಔಷಧಿ ಗಿಡ ಮೂಲಿಕಾ ಪ್ರಾಧಿಕಾರದ ಪ್ರಮುಖರ ಅಭಿಪ್ರಾಯವಾಗಿದೆ.ನಾಪಂಡ ಪೂಣಚ್ಚ ಆಯ್ಕೆ
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಗರ್ವಾಲೆ ಗ್ರಾಮದ ನಾಪಂಡ ಪೂಣಚ್ಚ ಅವರು ಪ್ರಗತಿಪರ ಕೃಷಿಕರಾಗಿದ್ದು, ಆದಿ ಕಾಳು ಮೆಣಸು ಎಂಬ ತಳಿಯನ್ನು ಸಂರಕ್ಷಣೆ ಮಾಡಿದ್ದಾರೆ. ಇದಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡ ಮೂಲಿಕಾ ಪ್ರಾಧಿಕಾರ ನಾಪಂಡ ಪೂಣಚ್ಚ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇವರಿಗೆ ಅನುದಾನವನ್ನು ಕೂಡ ನೀಡುತ್ತಿದೆ. ಪೂಣಚ್ಚ ಅವರು ಔಷಧೀಯ ಗಿಡಗಳನ್ನು ಸಿದ್ಧಪಡಿಸಿ ಇತರೆ ರೈತರಿಗೂ ಗಿಡಗಳನ್ನು ವಿತರಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಉತ್ತೇಜನ ನೀಡುತ್ತಿದೆ.ಈ ಬಗ್ಗೆ ನಾಪಂಡ ಪೂಣಚ್ಚ ಕನ್ನಡಪ್ರಭದೊಂದಿಗೆ ಪ್ರತಿಕ್ರಿಯಿಸಿ, ನಾವು ಈಗಾಗಲೇ ಆದಿ ಬಯೋಡೈವರ್ಸಿಟಿ ಕನ್ಸರ್ವೇಷನ್ ಟ್ರಸ್ಟ್ ಆರಂಭಿಸಿದ್ದೇವೆ. ಔಷಧಿ ಗಿಡಮೂಲಿಕಾ ಪ್ರಾಧಿಕಾರದಿಂದ ನಮಗೆ ಅನುದಾನವನ್ನು ನೀಡಿದ್ದಾರೆ. ಸ್ಥಳೀಯ ಔಷಧಿ ಗಿಡಗಳನ್ನು ಬೆಳೆದು ಇಲ್ಲಿನ ರೈತರಿಗೆ ವಿತರಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ರೈತರಿಂದ ಬೇಡಿಕೆ ಬಂದಷ್ಟು ಗಿಡಗಳನ್ನು ನೀಡುತ್ತೇವೆ ಎಂದು ಹೇಳುತ್ತಾರೆ.
ಅಶೋಕ, ಹಿಪ್ಪಲಿ, ಕರಿಧೂಪ ಗಿಡಗಳನ್ನು ಸದ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಥಳೀಯ ಔಷಧೀಯ ಗಿಡಗಳನ್ನು ನೀಡುತ್ತೇವೆ. ಮಾರುಕಟ್ಟೆಯನ್ನು ಕೂಡ ಒದಗಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುತ್ತದೆ ಎನ್ನುತ್ತಾರೆ. ಯಾವುದೆಲ್ಲ ಬೆಳೆಯಬಹುದು?ಕೊಡಗಿನ ಕಾಫಿ ತೋಟಗಳ ನಡುವೆ ನೈಸರ್ಗಿಕವಾಗಿ ಬೆಳೆಯುವ ಔಷಧಿ ಸಸ್ಯಗಳಾದ ಹಿಪ್ಪಲಿ, ಅಶೋಕ, ಕರಿಧೂಪ, ಆಡುಸೋಗೆ ಬೆಳೆದು ಆದಾಯ ಗಳಿಸಬಹುದಾಗಿದೆ.
ಕಾಫಿ ತೋಟಗಳಲ್ಲಿ ಸ್ಥಳೀಯ ಔಷಧೀಯ ಗಿಡಗಳನ್ನು ಬೆಳೆಸುವ ಬಗ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರಗತಿಪರ ಕೃಷಿಕ ನಾಪಂಡ ಪೂಣಚ್ಚ ಅವರನ್ನು ಆಯ್ಕೆ ಮಾಡಿಕೊಂಡು ಅವರ ಮೂಲಕ ಇತರೆ ರೈತರಿಗೆ ಔಷಧೀಯ ಸಸ್ಯಗಳನ್ನು ನೀಡಲಾಗುತ್ತದೆ. ಸ್ಥಳೀಯ ಔಷಧೀಯ ಗಿಡಗಳನ್ನು ಉಳಿಸಿ ಬೆಳೆಸಿ ಸುಸ್ಥಿರವಾಗಿ ಕಟಾವು ಮಾಡಿ ಕೈಗಾರಿಕೆಗಳಿಗೆ ನೀಡಿ ಆದಾಯ ಪಡೆಯುವ ಅವಕಾಶಗಳಿದೆ. ಇದಕ್ಕೆ ನಾವು ಸಹಕಾರ ನೀಡುತ್ತೇವೆ.-ಡಾ.ಪ್ರಭು, ಕರ್ನಾಟಕ ರಾಜ್ಯ ಔಷಧಿ ಗಿಡ ಮೂಲಿಕಾ ಪ್ರಾಧಿಕಾರ ಬೆಂಗಳೂರುಪಶ್ಚಿಮಘಟ್ಟದಲ್ಲಿ ಅಪಾರ ಔಷಧೀಯ ಸಸ್ಯ ಸಂಪತ್ತಿದೆ. ಅಂತಹ ಸಸ್ಯಗಳನ್ನು ಕಾಫಿ ತೋಟದ ನಡುವೆ ಬೆಳೆದರೆ ಬೆಳೆಗಾರರು ತಮ್ಮ ಆದಾಯವನ್ನು ದ್ವಿಗುಣ ಮಾಡಬಹುದಾಗಿದೆ. ನಾವು ಸಸ್ಯಗಳನ್ನು ಕೂಡ ನೀಡಲಾಗುವುದು. ಒಬ್ಬರು ರೈತರು ಬೆಳೆದರೆ ಮಾತ್ರ ಸಾಲದು. ತಂಡವಾಗಿ ಬೆಳೆದರೆ ಅವರಿಗೆ ಅನುದಾನವನ್ನು ನೀಡುತ್ತೇವೆ. ಇದರಿಂದ ಮಾರುಕಟ್ಟೆ ಮಾಡಲು ಕೂಡ ಸಹಕಾರಿಯಾಗುತ್ತದೆ.
-ಡಾ.ಯು.ಎಂ. ಚಂದ್ರಶೇಖರ್, ಉಪ ನಿರ್ದೇಶಕರು ಎನ್.ಎಂ.ಪಿ.ಬಿ-ಆರ್.ಸಿ.ಎಫ್.ಸಿ ದಕ್ಷಿಣ ವಲಯ, ಪೀಚಿ ಕೇರಳ