ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣದ ಜೊತೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯ, ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ವರ್ಷಗಳಿಂದ ಶ್ರಮಿಸುತ್ತಿದೆ ಎಂದು ಧಾರವಾಡದ ಧ.ಗ್ರಾ. ಯೋ. ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ಅವರು ಹೇಳಿದರು.

ರಟ್ಟೀಹಳ್ಳಿ: ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣದ ಜೊತೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯ, ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ವರ್ಷಗಳಿಂದ ಶ್ರಮಿಸುತ್ತಿದೆ ಎಂದು ಧಾರವಾಡದ ಧ.ಗ್ರಾ. ಯೋ. ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ಅವರು ಹೇಳಿದರು.

ತಾಲೂಕಿನ ಪುರದಕೇರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ 2076ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಪಾನಮುಕ್ತರಾಗಲು ದೃಢ ಸಂಕಲ್ಪ ಮಾಡಬೇಕು, ಆ ಮೂಲಕ ಪ್ರತಿಯೊಬ್ಬರಲ್ಲೂ ಆತ್ಮಸ್ಥೈರ್ಯ, ಏಕಾಗ್ರತೆ ಮೂಡಲು ಸಾಧ್ಯ ಎಂದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಯಾವುದೇ ಒಬ್ಬ ಮನುಷ್ಯ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ದುಶ್ಚಟಗಳಿಂದ ಮೊದಲು ದೂರವಿರಬೇಕು, ಅಂದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಜನ ಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ ಮಾತನಾಡಿ, ಧ.ಗ್ರಾ.ಯೋ.ಯಿಂದ ರಾಜ್ಯದಲ್ಲಿ ಒಂದು ಸಾವಿರ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ., ಬಡವರ ಪರವಾದ ಅನೇಕ ಕೆಲಸ ಮಾಡಲಾಗುತ್ತಿದೆ ಎಂದರು.

ಪ್ರತಿಯೊಂದು ಮನೆಯಲ್ಲಿ ಹೆಣ್ಣು ಮಕ್ಕಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಒಬ್ಬ ಪುರುಷನು ಯಶಸ್ವಿಯಾಗಬೇಕಾದರೆ ಹೆಣ್ಣು ಮಕ್ಕಳ ಪಾತ್ರವೂ ಇರುತ್ತದೆ. ಮಕ್ಕಳ ಚಟುವಟಿಕೆಯ ಬಗ್ಗೆ ಪಾಲಕರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ನಾಗವಂದ ಹೊರಗಿನ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಮದ್ಯಪಾನವನ್ನು ತ್ಯಜಿಸುವುದು ಎಂದರೆ ಕೇವಲ ಒಂದು ಕೆಟ್ಟ ಅಭ್ಯಾಸ ಬಿಡುವುದಲ್ಲ. ಅದು ಕುಟುಂಬದ ಮೇಲಿನ ಪ್ರೀತಿ ಜವಾಬ್ದಾರಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವ ಮಹತ್ವದ ನಿರ್ಧಾರವಾಗಿದೆ. ಕುಡಿತದಿಂದ ಜೀವಕ್ಕೆ ಅಪಾಯವಿದೆ. ಕುಡಿತದ ಚಟಕ್ಕೆ ಅನೇಕ ಕುಟುಂಬಗಳು ಹಾಳಾಗಿವೆ. ಆರ್ಥಿಕ ಪರಿಸ್ಥಿತಿ ಹಾಳಾಗಿ ಸಾಮಾಜಿಕ ಸ್ಥಿತಿಗತಿ ಹದಗೆಡಿಸುತ್ತದೆ. ಶಾಂತಿ ನೆಮ್ಮದಿ ಇಲ್ಲದಂತಾಗುತ್ತದೆ ಎಂದರು.

ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಕರಬಸನಗೌಡ ಪಾಟೀಲ, ಅಧ್ಯಕ್ಷ ಶಿವಾನಂದಪ್ಪ ಕಲ್ಲವೀರಪ್ಪನವರ, ಮಂಜುನಾಥ ಸೊರಟೂರು, ಸುಭಾಷ ಹದಡೇರ, ರವೀಂದ್ರ ಮೇಲೆಬೆನ್ನೂರು, ಚಂದ್ರಶೇಖರ ಕೊಪ್ಪದ, ತಿಮ್ಮಯ್ಯ, ಮಾಲತೇಶ, ಯೋಜನಾಧಿಕಾರಿ ಸುಮಿತ್ರಾ ಜೈನ್, ರಾಜು ಕೊಪ್ಪದ, ಪಾರ್ವತಿ ಗಿರಿಧರ ಕೆ., ಸಂತೋಷ ಹಾಗೂ ವಿವಿಧ ಮುಖಂಡರು, ಯೋಜನೆಯ ಕಾರ್ಯಕರ್ತರು ಮತ್ತಿತರರು ಇದ್ದರು.