ತೆಲುಗು ಮಾತೃಭಾಷೆಯ ಮಕ್ಕಳಲ್ಲಿ ಕನ್ನಡ ಕಂಪು ಹರಡುವ ಸರ್ಕಾರಿ ಶಾಲೆ

| Published : Dec 17 2023, 01:45 AM IST

ತೆಲುಗು ಮಾತೃಭಾಷೆಯ ಮಕ್ಕಳಲ್ಲಿ ಕನ್ನಡ ಕಂಪು ಹರಡುವ ಸರ್ಕಾರಿ ಶಾಲೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಮನಬಿಲ್ಲಿನ ಬಣ್ಣಗಳಿಂದ ಕಂಗೊಳಿಸುವ ಕಂಬಗಳು, ಆವರಣದಲ್ಲಿ ಬಗೆಬಗೆಯ ಹೂ-ಗಿಡಗಳ ಹಸಿರು ಹಬ್ಬ. ಗೋಡೆ ಮೇಲೆ ಚಿತ್ತಾಕರ್ಷಕ ಚಿತ್ರಗಳು. ಲೋಕಮಾನ್ಯರ ನುಡಿಮುತ್ತುಗಳು, ಗಾದೆ-ವಚನ... ಹೀಗೆ ಹಲವು ಹೊಸತುಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಈ ಮೂಲಕ ತೆಲುಗು ಮಾತೃಭಾಷೆಯ ಮಕ್ಕಳಲ್ಲಿ ಈ ಶಾಲೆ ಕನ್ನಡ ಕಂಪು ಹರಡುತ್ತಿದೆ.

ಎ.ಜಿ. ಕಾರಟಗಿ

ಕಾರಟಗಿ: ಕಾಮನಬಿಲ್ಲಿನ ಬಣ್ಣಗಳಿಂದ ಕಂಗೊಳಿಸುವ ಕಂಬಗಳು, ಆವರಣದಲ್ಲಿ ಬಗೆಬಗೆಯ ಹೂ-ಗಿಡಗಳ ಹಸಿರು ಹಬ್ಬ. ಗೋಡೆ ಮೇಲೆ ಚಿತ್ತಾಕರ್ಷಕ ಚಿತ್ರಗಳು. ಲೋಕಮಾನ್ಯರ ನುಡಿಮುತ್ತುಗಳು, ಗಾದೆ-ವಚನ... ಹೀಗೆ ಹಲವು ಹೊಸತುಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಈ ಮೂಲಕ ತೆಲುಗು ಮಾತೃಭಾಷೆಯ ಮಕ್ಕಳಲ್ಲಿ ಈ ಶಾಲೆ ಕನ್ನಡ ಕಂಪು ಹರಡುತ್ತಿದೆ.

ತಾಲೂಕಿನ ಬೇವಿನಹಾಳದ ಹೊರವಲಯದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿಂತರೆ ಇದು ಸರ್ಕಾರಿ ಕನ್ನಡ ಶಾಲೆಯಾ? ಎಂದು ಹುಬ್ಬೇರಿಸುವಂತಿದೆ.

ಹಲವು ವೈವಿಧ್ಯತೆಗಳನ್ನು ಮೈಗೂಡಿಸಿಕೊಂಡು ಸಮುದಾಯದ ಸಹಕಾರ, ಹಳೆಯ ವಿದ್ಯಾರ್ಥಿಕೂಟದ ತೊಡಗಿಸಿಕೊಳ್ಳುವಿಕೆ, ಗ್ರಾಪಂ, ಎಸ್‌ಡಿಎಂಸಿ ಧನಾತ್ಮಕ ಸ್ಪಂದನೆ, ಶಿಕ್ಷಕನ ಸೃಜನಶೀಲತೆ, ವೃತ್ತಿಪರತೆಯಿಂದ ಗ್ರಾಮೀಣ ಪ್ರದೇಶದಲ್ಲೊಂದು ಸೃಜನಾತ್ಮಕ ಸರ್ಕಾರಿ ಶಾಲೆ ರೂಪುಗೊಂಡಿದೆ.

೧ರಿಂದ ೫ನೇ ತರಗತಿಗಳಿವೆ. ಕಾರ್ಮಿಕರು, ಚಿಂದಿ ಆಯುವವರ, ತೆಲುಗು ಮಾತೃ ಭಾಷೆಯ ಮಕ್ಕಳು ಈ ಶಾಲೆಯಲ್ಲಿ ಅಭ್ಯಾಸ ಮಾಡುತ್ತಾರೆ. ಶಾಲೆಯಲ್ಲಿ ಓರ್ವ ಕಾಯಂ ಶಿಕ್ಷಕ, ಒಬ್ಬರು ಅತಿಥಿ ಶಿಕ್ಷಕಿ ಇದ್ದಾರೆ. ಮಕ್ಕಳ ಬಹುಮುಖ ಪ್ರತಿಭೆಯ ಅನಾವರಣಕ್ಕೆ ಅರಿವಿನ ಅಂಗಳ ಎಂಬ ಮಕ್ಕಳ ಬಯಲು ರಂಗಮಂಟಪ ರೂಪುಗೊಂಡಿದೆ.

ಮರಳು ಅರಳು (ಸ್ಯಾಂಡ್ ಆರ್ಟ್ ಗ್ಯಾಲರಿ) ಕಲಿಕೆಯ ಖುಷಿ ಪಯಣ ಎಂಬ ಆಶಯದೊಂದಿಗೆ ಮಕ್ಕಳ ಆರಂಭಿಕ ಕಲಿಕೆ ಮರಳಿನ ಮೇಲೆ ಬೆರಳಿಂದ ಗೀಚುವುದು, ಚಿತ್ರ ಬಿಡಿಸುವುದು ಅಕ್ಷರ ತೀಡುವುದರಿಂದ ಆರಂಭವಾಗುತ್ತದೆ. ಅದಕ್ಕಾಗಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಕೆರಳಿಸಲು ಪ್ರತ್ಯೇಕ ಕಾರ್ನರ್ ರೂಪಿಸಿರುವ ರಾಜ್ಯದ ಮೊದಲ ಸರ್ಕಾರಿ ಶಾಲೆ ಇದು ಎನ್ನಲಾಗಿದೆ.

ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಆನ್‌ಲೈನ್ ಮೂಲಕ ಶಿಕ್ಷಕ ಸ್ವಂತದ ಲ್ಯಾಪ್‌ಟಾಪ್‌ನಲ್ಲಿ ಕಲಿಕಾ ಸಂಬಂಧಿತ ಚಟುವಟಿಕೆ ಮಾಡಿಸುತ್ತಾರೆ.

ಪ್ರಧಾನಮಂತ್ರಿ ಪೋಷಣ ಅಭಿಯಾನದ ಮಧ್ಯಾಹ್ನದ ಅಕ್ಷರ ದಾಸೋಹಕ್ಕೆ ಬೇಕಾದ ಸೊಪ್ಪು, ಸ್ವಲ್ಪ ಪ್ರಮಾಣ ತರಕಾರಿಗಳನ್ನು ಬೆಳೆಯಲು ಶಾಲೆಯಲ್ಲಿ ಕಿಚನ್ ಗಾರ್ಡನ್ ನಿರ್ಮಿಸಿದ್ದಾರೆ. ಜತೆಗೆ ತೆಂಗು, ತುಳಸಿ, ತೇಗ, ಬಾಳೆ, ಹುಣಸೆ, ಪೇರಲ, ಸೀತಾಫಲದಂತಹ ವಿವಿಧ ಹಣ್ಣಿನ ಸಸಿಗಳನ್ನು ನಾಟಿ ಮಾಡಲಾಗಿದೆ. ಶಾಲಾ ಮಕ್ಕಳ ಜನ್ಮದಿನವನ್ನು ಕೇಕ್ ಕತ್ತರಿಸುವ ಬದಲು ಜನ್ಮದಿನವಿರುವ ಮಗುವಿನ ಹೆಸರಲ್ಲಿ ಒಂದು ಸಸಿ ನೆಟ್ಟು ಬೆಳೆಸುತ್ತಾರೆ.

ಅನುಕೂಲ ಎಂಬ ಹೆಸರಿನ ಮಕ್ಕಳ ಶಾಲಾ ಬ್ಯಾಂಕ್‌ನ್ನು ಮಕ್ಕಳೇ ನಿರ್ವಹಿಸುತ್ತಿದ್ದಾರೆ. ಪಾಲಕರು ನೀಡುವ ಚಿಲ್ಲರೆ ಹಣವನ್ನು ಶಾಲೆಯ ತಮ್ಮ ಅಕೌಂಟ್‌ನಲ್ಲಿ ಜಮೆ ಮಾಡಿ ತಮಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ವರ್ಷದುದ್ದಕ್ಕೂ ಇದೇ ಹಣದಲ್ಲಿ ಪಡೆದುಕೊಳ್ಳುವುದು ಇಲ್ಲಿನ ಮತ್ತೊಂದು ವಿಶೇಷ. ಉಳಿಸಿದ ಹಣವೇ ಗಳಿಸಿದ ಹಣ ಎಂಬ ತತ್ವದಲ್ಲಿ ಮಕ್ಕಳು ವ್ಯವಹಾರ ಜ್ಞಾನ ಪಡೆಯುತ್ತಿದ್ದಾರೆ.

ಸ್ವಚ್ಛತೆಗೆ ಒತ್ತು ನೀಡಲು ಮಕ್ಕಳಿಗೆ ಹ್ಯಾಂಡ್ ವಾಶ್‌, ನೇಲ್ ಕಟ್ಟರ್, ಟೂಥ್ ಫೇಸ್ಟ್ ಒದಗಿಸಲಾಗುತ್ತದೆ. ಶಾಲೆಯ ಗ್ರಂಥಾಲಯದಲ್ಲಿ ವಿವಿಧ ದಿನಪತ್ರಿಕೆ, ಕಿರುಪುಸ್ತಕ ಇವೆ. ಪ್ರಾರ್ಥನಾ ಸಮಯದಲ್ಲಿ ಪಂಚಾಂಗ, ವಚನದೀಪ್ತಿ, ಮೆದಿಳುಗೆ ಮೇವು ಜತೆಗೆ ದಿನಕ್ಕೆ ಐದು ಇಂಗ್ಲಿಷ್ ಹೊಸಪದಗಳನ್ನು ಹೇಳಿಸುವ ಪರಿಪಾಠವಿದೆ. ಜತೆಗೆ ವೀಕ್ಲಿ ವಂಡರ್ ಎಂಬ ಹೆಸರಲ್ಲಿ ವಾರಕ್ಕೊಮ್ಮೆ ರಾಜ್ಯದ ವಿವಿಧ ಭಾಗದ ಸಂಪನ್ಮೂಲ ವ್ಯಕ್ತಿಗಳಿಂದ ಬದುಕಿನ ಕೌಶಲ್ಯ, ಸ್ಪರ್ಧಾತ್ಮಕ ಪ್ರಪಂಚಕ್ಕೆ ಅಣಿಯಾಗಲು ತರಬೇತಿ ನೀಡಲಾಗುತ್ತಿದೆ.

ಕಲಾವಿದ ಮಿತ್ರರಾದ ಸಂಪ್ರೀತಿಯ ಮಧುಕುಮಾರ ಹಾಗೂ ಧಾರವಾಡದ ಶಂಕರಗೌಡರ ಸಹಕಾರ ಹಳೆಯ ವಿದ್ಯಾರ್ಥಿ-ಮಿತ್ರರ ಗ್ರಾಮಸ್ಥರ ಸಹಕಾರದಿಂದ ಕಡಿಮೆ ಅವಧಿಯಲ್ಲಿ ಸರ್ಕಾರಿ ಶಾಲೆಯ ಪುನರ್ ನವೀಕರಣಗೊಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಶಾಲೆಯ ಮುಖ್ಯಗುರು ಕಳಕೇಶ ಗುಡ್ಲನೂರು.

ಬಡವರು, ಕಾರ್ಮಿಕರು, ಚಿಂದಿ ಆಯುವವರ ಮಕ್ಕಳ ಬದುಕು ಚೆಂದವಾಗಿಸಲು ಸಮುದಾಯ, ಗೆಳೆಯರ ಸಹಕಾರದಿಂದ ಶಾಲೆಯನ್ನು ಸೃಜನಾತ್ಮಕವಾಗಿ ರೂಪಿಸಲು ಪ್ರಯತ್ನಿಸುತ್ತಿರುವೆವು ಎಂದು ಮುಖ್ಯಗುರು ಕಳಕೇಶ ಡಿ. ಗುಡ್ಲಾನೂರ ಹೇಳಿದರು.