ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮ ಗುರುವಾರ ಇಲ್ಲಿ ಅದ್ಧೂರಿಯಾಗಿ ನಡೆಯಿತು.ಹರಿಹರೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ಮೆರವಣಿಗೆ, ದೇವಸ್ಥಾನದ ರಸ್ತೆ, ರಾಣಿ ಚನ್ನಮ್ಮ ವೃತ್ತ, ಮುಖ್ಯರಸ್ತೆ ಮೂಲಕ ಪೊಲೀಸ್ ಠಾಣೆ ಸರ್ಕಲ್‌ಗೆ ಬಂದಾಗ ಅಲ್ಲಿ ಹಾಕಲಾಗಿದ್ದ ಬೃಹತ್ ವೇದಿಕೆಯ ಮೇಲಿನಿಂದ ನಗರದ ಗಣ್ಯರು ದುರ್ಗಾಮಾತೆಗೆ ಪುಷ್ಪವೃಷ್ಟಿ ನಡೆಸಿ ಗೌರವ ಸಲ್ಲಿಸಿದರು. ನಂತರ ಹಳೆ ಪೂನಾ- ಬೆಂಗಳೂರು ರಸ್ತೆ ಮೂಲಕ ವಾಟರ್‌ವಕ್ಸ್ ಬಳಿ ಇರುವ ಜೋಡು ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯಲಾಯಿತು.
ಮೆರವಣಿಗೆಯ ವಿಶೇಷತೆ:ಮೈಸೂರು ದಸರಾ ಮೆರವಣಿಗೆ ಹೋಲುವಂತೆ ರಾಜ್ಯದ ಪ್ರಖ್ಯಾತ ಕಲಾ ತಂಡಗಳಿಂದ ಗೊಂಬೆ, ಕೀಲುಕುದುರೆ, ಡೊಳ್ಳು, ಸಮಾಳ ನಂದಿಕೋಲು, ವೀರಗಾಸೆ, ಮರಗಾಲು, ಜಾಂಜ್ ಪತ್, ನಾದಸ್ವರ, ತಮಟೆ, ಕೋಲಾಟ, ಸ್ತಬ್ಧಚಿತ್ರಗಳು ಕುದುರೆ, ಒಂಟೆ ಕುದುರೆ ಸಾರೋಟ್ ಕಲಾವಿದರು ಸಾಲಾಗಿ ತೆರಳಿ ತಮ್ಮ ಕಲಾ ನೈಪುಣ್ಯತೆ ಪ್ರದರ್ಶಿಸಿ ನೊಡುಗರ ಮನಸ್ಸು ಮುದಗೊಳಿಸಿದರು.
ಕ್ಷೇತ್ರನಾಥ ಹರಿಹರೇಶ್ವರಸ್ವಾಮಿ, ಕಸಬಾ ಹಾಗೂ ಮಹಜೇನಹಳ್ಳಿ ಗ್ರಾಮದೇವತೆ, ಕನ್ನಿಕಾ ಪರಮೇಶ್ವರಿ, ಅಂಬಾ ಭವಾನಿ, ಕಾಳಿಕಾಂಬ ಸೇರಿದಂತೆ 20ಕ್ಕೂ ಹೆಚ್ಚು ದೇವರ ಉತ್ಸವ ಮೂರ್ತಿಗಳು ಭಾಗವಹಿಸಿದ್ದರೆ, ಅಂಬಾರಿಯಲ್ಲಿ ದುರ್ಗಾ ಮಾತೆಯ ಉತ್ಸವಮೂರ್ತಿ ಹೊತ್ತ ಆನೆ ಘನ ಗಾಂಭಿರ್ಯತೆಯಿಂದ ಹೆಜ್ಜೆ ಹಾಕಿ ಅಕ್ಕ ಪಕ್ಕ ನಿಂತ ಭಕ್ತರನ್ನು ಭಕ್ತಿ ಪರವಶ ಮಾಡಿತು.ಇದಕ್ಕೂ ಮೊದಲು ಹರಿಹರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶಾಸಕ ಬಿ.ಪಿ.ಹರೀಶ್ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀಕ್ಷೇತ್ರ ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ಪದ್ಧತಿಯಂತೆ ತಹಶೀಲ್ದಾರ ಕೆ.ಎಂ. ಗುರುಬಸವರಾಜ್ ಜೋಡು ಬಸವೇಶ್ವರ ದೇವಸ್ಥಾನದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಸಾಮೂಹಿಕ ಬನ್ನಿ ಮುಡಿಯುವ ಮೂಲಕ ಸಾಮೂಹಿಕ ದಸರಾ, ಬನ್ನಿ ಮುಡಿವ ಕಾರ್ಯಕ್ಕೆ ತೆರೆ ಎಳೆದರು.
ದುರ್ಗಾ ಮಾತೆ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೆ.22ರಂದು ಶ್ರೀ ದುರ್ಗಾ ಮಾತೆಯ ಮೂರ್ತಿಯನ್ನು ಹರಿಹರದ ನಡುವಲಪೇಟೆಯಲ್ಲಿರುವ ಶ್ರೀ ವಿಠಲ ಮಂದಿರ ಶ್ರೀ ನಾಮದೇವ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿ ದಿನ ಪೂಜೆ ಭಜನೆ, ಅಷ್ಟೋತ್ತರ, ಸೌಂದರ್ಯ ಲಹರಿ ಸಾಮೂಹಿಕ ಪಠಣ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ರೂಪಕ ಪ್ರದರ್ಶನ, ಸವಿರುಚಿಯ ಆಹಾರ ಮೇಳ ಆಯೋಜಿಸಲಾಗಿತ್ತು.ಸಾಮೂಹಿಕ ಬನ್ನಿ ಮೆವಣಿಗೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಶಾಸಕರಾದ ಎಸ್. ರಾಮಪ್ಪ, ಎನ್. ಎಚ್.ಶ್ರೀನಿವಾಸ ನಂದಿಗಾವಿ, ಎಸ್.ಎಂ.ವೀರೇಶ್ ಹನಗವಾಡಿ, ಚಂದ್ರಶೇಖರ ಪೂಜಾರ, ಡಾ.ಶಶಿಕುಮಾರ ವಿ.ಮೆಹರ್ವಾಡೆ, ಮುರುಗೇಶಪ್ಪ, ಸ್ವಾತಿ ಹನುಮಂತ ಸಾವಿರಾರು ಜನರು ಭಾಗವಹಿಸಿದ್ದರು.