ಯಲಬುರ್ಗಾದಲ್ಲಿ ಹೋಳಿ ಹಬ್ಬಕ್ಕೆ ಅದ್ದೂರಿ ಚಾಲನೆ

| Published : Mar 25 2024, 12:45 AM IST

ಸಾರಾಂಶ

ಮಾ. 21ರ ರಾತ್ರಿ ಕಾಮಣ್ಣನನ್ನು ಪ್ರತಿಷ್ಠಾಪಿಸುವ ಮೂಲಕ ಆರಂಭಗೊಂಡ ಹೋಳಿ ಹಬ್ಬ 26ರ ಬೆಳಗ್ಗೆ ಕಾಮದಹನ, ಅಂದು ಮಧ್ಯಾಹ್ನ ಬಣ್ಣದೋಕುಳಿ ನಡೆದು ಅಂತ್ಯಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪಟ್ಟಣದ ವಿವಿಧೆಡೆಗಳಲ್ಲಿ ಕಾಮಣ್ಣನನ್ನು ಪ್ರತಿಷ್ಠಾಪಿಸುವ ಮೂಲಕ ಹೋಳಿ ಹಬ್ಬ ಆಚರಣೆಗೆ ಚಾಲನೆ ದೊರೆತಿದೆ.

ಕೊಪ್ಪಳ ಜಿಲ್ಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವ ಹೋಳಿ ಹಬ್ಬ ನೋಡಲು ವಿವಿಧ ಗ್ರಾಮಗಳ ಜನರು ಇಲ್ಲಿಗೆ ತಂಡೋಪತಂಡವಾಗಿ ಬರುತ್ತಾರೆ. ಮಾ. 21ರ ರಾತ್ರಿ ಕಾಮಣ್ಣನನ್ನು ಪ್ರತಿಷ್ಠಾಪಿಸುವ ಮೂಲಕ ಆರಂಭಗೊಂಡ ಹೋಳಿ ಹಬ್ಬ 26ರ ಬೆಳಗ್ಗೆ ಕಾಮದಹನ, ಅಂದು ಮಧ್ಯಾಹ್ನ ಬಣ್ಣದೋಕುಳಿ ನಡೆದು ಅಂತ್ಯಗೊಳ್ಳಲಿದೆ.

ಗಾಳಿಯರ್, ಕಂಡೇರ್, ದೈವದ ಹಾಗೂ ಸರ್ಕಾರಿ ಹೀಗೆ ನಾಲ್ಕು ಕಡೆಗಳಲ್ಲಿ ಸ್ಥಾಪಿಸಲ್ಪಡುವ ಕಾಮನನ್ನು ನೆಲ್ಲು ಹುಲ್ಲಿನಿಂದ ತಯಾರಿಸಿ ಅದಕ್ಕೆ ವಸ್ತ್ರ ಹಾಗೂ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಬಣ್ಣದ ಮುಖವಾಡ ತೊಡಸಿ ಕೂಡಿಸಿರುತ್ತಾರೆ. ಪಕ್ಕದಲ್ಲಿ ರತಿದೇವಿ ಹಾಗೂ ಭೀಮನನ್ನು ಕೂರಿಸುವ ಪದ್ದತಿ ಇದೆ.

ಕಳಬೇಡ ನರ್ತನ: ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಕಳಬೇಡದ ನರ್ತನ ನೋಡುಗರನ್ನು ಆಕರ್ಷಿಸುತ್ತದೆ. ಕಳಬೇಡ ಎನ್ನುವ ರಾಕ್ಷಸ ವೇಷಧರಿಸಿ ತಮ್ಮದೇ ಶೈಲಿಯಲ್ಲಿ ಹೆಜ್ಜೆ, ಕುಣಿತದಿಂದ ಜನರನ್ನು ರಂಜಿಸುತ್ತಾನೆ. ಇದರ ಹಿಂದೆ ಕೆಲವರು ಹೆಣದ ಬಂಡಿ ಮಾಡಿ ಪುರುಷರು ಹೆಣ್ಣು ವೇಷಧಾರಿಯಾಗಿ ಅಳುತ್ತಾ ಸಾಗುವುದು ಇಲ್ಲಿಯ ಸಂಪ್ರಾದಾಯ.

ಬೆಳಗ್ಗೆ ಕಾಮದಹನ: ಮಂಗಳವಾರ ಬೆಳಗೆ ೭.೩೦ರ ಹೊತ್ತಿಗೆ ನಾಲ್ಕು ತಂಡದವರು ತಂತಮ್ಮ ಕಾಮಣ್ಣನ ಸಮೇತ ಮೊದಲಿಗೆ ದೈವದ ಕಾಮನನ್ನು ಸುಡಲು ಅದರ ಅಧಿಕೃತ ಸ್ಥಳಕ್ಕೆ (ಉಸುಕಿನ ಕಟ್ಟೆ)ಗೆ ಬಂದು ಸೇರುತ್ತಾರೆ. ಆಗ ದೈವದ ಕಾಮದವರು ಕದ್ದು ಹಾಕಿರುವ ಕಟ್ಟಿಗೆ ಹಾಗೂ ಕುಳ್ಳಿನ ರಾಶಿಯನ್ನು ೫ ಸುತ್ತು ಹಾಕಿ ಕಾಮನ ಮುಖವಾಡವನ್ನು ತೆಗೆದು ಆ ಜಾಗಕ್ಕೆ ಗಡುಗೆಯನ್ನು ಇಡುತ್ತಾರೆ.

ತಕ್ಷಣವೇ ಕಾಮಣ್ಣನಿಗೆ ಬೆಂಕಿ ಇಡುತ್ತಾರೆ. ಇದಾದ ನಂತರವೇ ಉಳಿದ ಕಾಮದವರು ತಂತಮ್ಮ ಸ್ಥಳಕ್ಕೆ ಹೋಗಿ ಅಲ್ಲಿಯೂ ಹೋಗಿ ಇದೇ ಪದ್ದತಿ ಅನುಸರಿಸಿ ವಿಶಿಷ್ಟ ಪದ್ದತಿ ಮೂಲಕ ಸುಡುತ್ತಾರೆ. ನೆರೆದಿದ್ದ ಜನರು ಅಲ್ಲಿಯ ಬೆಂಕಿಯನ್ನು ಮನೆಗೆ ತಂದು ಕಡಲೆ ಕಾಳು ಸುಟ್ಟು ತಿನ್ನುತ್ತಾರೆ. ಕಾಮ ಸುಟ್ಟ ಬೂದಿಯನ್ನು ರೈತಾಪಿ ಜನರು ತಮ್ಮ ಹೊಲದಲ್ಲಿ ಚೆಲ್ಲುತ್ತಾರೆ. ಇದರಿಂದ ಹೊಲ ಸಮೃದ್ಧಿಯಾಗುತ್ತದೆ ಎಂಬುದು ನಂಬಿಕೆ.

ಓಕುಳಿ:

ಕಾಮಣ್ಣನನ್ನು ದಹಿಸಿದ ಬಳಿಕ ಪಟ್ಟಣದ ಪುರುಷರು, ಮಹಿಳೆಯರು, ಯುವಕ-ಯುವತಿಯರು, ಮಕ್ಕಳು ಮನೆ ಮನೆ ಸುತ್ತಿ ಬಣ್ಣದೋಕುಳಿಯಲ್ಲಿ ನಿರತರಾಗುತ್ತಾರೆ.