ಸಾರಾಂಶ
ಕವಿ ಚಕ್ರವರ್ತಿ ರನ್ನನ ಗತವೈಭವವನ್ನು ಮತ್ತೆ ಅನಾವರಣಗೊಳಿಸುವ ಭಾಗವಾಗಿ ಮುಧೋಳ ತಾಲೂಕಿನ ರನ್ನನ ಹುಟ್ಟೂರಾದ ರನ್ನ ಬೆಳಗಲಿಯಲ್ಲಿ ರನ್ನ ವೈಭವ-2025ರ ಅದ್ಧೂರಿ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕವಿ ಚಕ್ರವರ್ತಿ ರನ್ನನ ಗತವೈಭವವನ್ನು ಮತ್ತೆ ಅನಾವರಣಗೊಳಿಸುವ ಭಾಗವಾಗಿ ಮುಧೋಳ ತಾಲೂಕಿನ ರನ್ನನ ಹುಟ್ಟೂರಾದ ರನ್ನ ಬೆಳಗಲಿಯಲ್ಲಿ ರನ್ನ ವೈಭವ-2025ರ ಅದ್ಧೂರಿ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.ರನ್ನ ಬೆಳಗಲಿಯ ಶ್ರೀ ಬಂಧಲಕ್ಷ್ಮೀ ದೇವಸ್ಥಾನದಿಂದ ಕವಿಚಕ್ರವರ್ತಿ ರನ್ನ ವೇದಿಕೆಯವರೆಗೆ ನಡೆದ ವಿವಿಧ ಕಲಾತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಮುಧೋಳ ಶಾಸಕ ಆರ್.ಬಿ. ತಿಮ್ಮಾಪೂರ ರನ್ನನ ಗಧೆ ಎತ್ತುವ ಮೂಲಕ ಚಾಲನೆ ನೀಡಿದರು. 10ನೇ ಶತಮಾನದ ಕವಿರತ್ನಗಳಲ್ಲಿ ಒಬ್ಬರಾದ ರನ್ನ ಚಕ್ರವರ್ತಿ ಹಳೆಗನ್ನಡವನ್ನು ಶ್ರೀಮಂತಗೊಳಿಸಿ ಪ್ರಪಂಚದಲ್ಲಿ ಕನ್ನಡ ಸಾಹಿತ್ಯವನ್ನು ಪ್ರಚುರಪಡಿಸಿದರು. ಶಕ್ತಿಕವಿ ರನ್ನನ ಸ್ಮರಣೆ ಮಾಡುವ ಪ್ರಯತ್ನ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಗಮನ ಸೆಳೆದ ಕಲಾತಂಡಗಳು: ರನ್ನ ವೈಭವದ ಮೊದಲ ದಿನ ರನ್ನ ಬೆಳಗಲಿಯಲ್ಲಿ ನಡೆದ ಬೆಳಗಿನ ಕಾರ್ಯಕ್ರಮಲ್ಲಿ ವಿವಿಧ ಜನಪದ ಕಲಾತಂಡಗಳು ಗಮನ ಸೆಳೆದವು. ಮೆರವಣಿಗೆಯಲ್ಲಿ ಜಾನಪದ ಕೋಲಾಟ, ಡೊಳ್ಳಿನ ವಾದ್ಯ, ಶಹನಾಯಿ, ಸಂಬಾಳ, ಝಾಂಜ್ ಮೇಳ , ಪುರವಂತಿಗೆ, ವೀರಗಾಸೆ, ಪೂಜಾಪುನಿತ, ಹಲಿಗೆ ವಾದ್ಯ, ಕರಡಿ ಮಜಲು, ಕಣಿವಾದ ಕಲಾವಿದರು ಕಲೆ ಪ್ರದರ್ಶಿಸಿ ರನ್ನ ವೈಭವಕ್ಕೆ ಜೀವ ತುಂಬಿದರು.ಗಮನಸೆಳೆದ ಕುಂಭಹೊತ್ತ ಮಹಿಳೆಯರು: ರನ್ನ ಬೆಳಗಲಿ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೇರಿ ಎಲ್ಲರೂ ಇಳಕಲ್ಲ ಸೀರೆಯನ್ನುಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದರೆ, ಇತರ ಸರ್ಕಾರಿ ಮಹಿಳಾ ನೌಕರರು ಸಹ ಕೆಂಪು ಹಳದಿ ಬಣ್ಣದ ಸೀರೆಯುಟ್ಟು ಭಾಗಿಯಾಗಿದ್ದರು.