ಕನ್ನಡಪ್ರಭ ವಾರ್ತೆ ಹಾಸನ
ನಿಟ್ಟೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಹಲವು ವರ್ಷಗಳ ಕಾಲ ಜನಪರ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕುಮಾರ್ ಅವರಿಗೆ ನಿಟ್ಟೂರಿನಲ್ಲಿ ಅದ್ಧೂರಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರ್ ಅವರ ಸೇವಾ ಅವಧಿಯ ಸಾಧನೆಗಳನ್ನು ಸ್ಮರಿಸಿ ಅಭಿನಂದಿಸಲಾಯಿತು. ನಿವೃತ್ತಿ ಹೊಂದುತ್ತಿರುವ ಕುಮಾರ್ ಅವರ ಕುರಿತು ಮಾತನಾಡಿದ ನಿಕಟಪೂರ್ವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶಪ್ಪ, ಗ್ರಾಮ ಪಂಚಾಯಿತಿಯ ಆಡಳಿತ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕುಮಾರ್ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ಹೇಳಿದರು. ಗ್ರಾಮಸ್ಥರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಗುಣ, ಕರ್ತವ್ಯದ ಮೇಲಿನ ಬದ್ಧತೆ ಹಾಗೂ ಪ್ರಾಮಾಣಿಕ ಸೇವೆಯ ಮೂಲಕ ಅವರು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮುಖಂಡರಾದ ಸ್ವಾಮಿ, ತಿರುಪತಿಹಳ್ಳಿ ಗ್ರಾಮದ ಮಾಜಿ ಅಧ್ಯಕ್ಷ ಚಂದ್ರಶೇಖರ್, ಶಿವಪ್ಪ ನಾಯಕ, ತಾಲ್ಲೂಕು ಪಂಚಾಯಿತಿಯ ಎನ್‌ಆರ್‌ಎಲ್‌ಎಂ ಅಧಿಕಾರಿ ಮುನಿಸ್ವಾಮಿ, ಮಾಜಿ ಸದಸ್ಯ ಗುರುಮೂರ್ತಿ, ಗ್ರಾಮಸ್ಥರಾದ ಸರ್ವೇಶ್ ಹಾಗೂ ತೋಟೇಶ್ ಮಾತನಾಡಿ, ಕುಮಾರ್ ಅವರು ಸರ್ಕಾರಿ ನೌಕರರಾಗಿ ಮಾತ್ರವಲ್ಲದೆ ಸಮಾಜಮುಖಿ ವ್ಯಕ್ತಿತ್ವದ ಮೂಲಕ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು ಎಂದು ಹೇಳಿದರು.ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳು, ಸಾರ್ವಜನಿಕ ಸೇವೆಗಳು ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಅಭಿಪ್ರಾಯಪಟ್ಟರು.ನಿಟ್ಟೂರಿನ ವೈದ್ಯಾಧಿಕಾರಿ ಡಾ. ಎಚ್. ಜೆ. ಮಂಜುನಾಥ್ ಮಾತನಾಡಿ, ವಿವಿಧ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಅವರ ನಿವೃತ್ತಿ ಸಾರ್ವಜನಿಕ ಸೇವೆಯಲ್ಲಿ ಒಂದು ಅಧ್ಯಾಯದ ಅಂತ್ಯವಾದರೂ, ಸಮಾಜದೊಂದಿಗೆ ಅವರ ಬಾಂಧವ್ಯ ಮುಂದುವರಿಯಲಿದೆ ಎಂದು ಹೇಳಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವೀರ್ ಅಭಿನಂದನಾ ಭಾಷಣ ಮಾಡಿ, ಸರ್ಕಾರಿ ಸೇವೆಯುದ್ದಕ್ಕೂ ನಿಷ್ಠೆ, ಪ್ರಾಮಾಣಿಕತೆ ಮತ್ತು ಕರ್ತವ್ಯಪರತೆಯಿಂದ ಕಾರ್ಯನಿರ್ವಹಿಸಿದ ಕುಮಾರ್ ಅವರು ಯುವ ಸಿಬ್ಬಂದಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ನಿವೃತ್ತಿ ಜೀವನ ಆರೋಗ್ಯ, ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಊರಿನ ಹಿರಿಯ ಮುಖಂಡರು, ಸಾರ್ವಜನಿಕರು, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಗ್ರಾಮ ಪಂಚಾಯಿತಿ ನೌಕರರು, ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಕುಮಾರ್ ಅವರ ಸೇವೆಯನ್ನು ಸ್ಮರಿಸಿ ಶುಭಾಶಯ ಕೋರಿದರು. ವಿಶೇಷವಾಗಿ ಕುಮಾರ್ ಅವರ ತಾಯಿ, ಅಣ್ಣ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಸಮೇತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕುಮಾರ್ ಅವರನ್ನು ಶಾಲು ಹೊದಿಸಿ, ಫಲಕ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಲವರು ತಮ್ಮ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು.ಗ್ರಾಮದ ಅಭಿವೃದ್ಧಿ, ಜನಸೇವೆ ಮತ್ತು ಆಡಳಿತದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕುಮಾರ್ ಅವರ ನಿವೃತ್ತಿ ಕಾರ್ಯಕ್ರಮವು ಸನ್ಮಾನ ಸಮಾರಂಭದ ಜೊತೆಗೆ ಅವರ ಸೇವಾ ಪಯಣವನ್ನು ಗೌರವಿಸುವ ಸ್ಮರಣೀಯ ಕ್ಷಣವಾಗಿ ಮೂಡಿಬಂದಿತು. ಗ್ರಾಮಸ್ಥರು ಹಾಗೂ ಅಧಿಕಾರಿಗಳು ನಿಂತು ಅಭಿನಂದನೆ ಸಲ್ಲಿಸುವ ಮೂಲಕ ಅವರಿಗೆ ಗೌರವಪೂರ್ವಕ ಬೀಳ್ಕೊಡುಗೆ ನೀಡಿದರು.ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಗೌತಮ್ ಅವರು ನಿರೂಪಿಸಿದರು. ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವೀರ್ ಸ್ವಾಗತಿಸಿ ಆಗಮಿಸಿದ ಗಣ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಬರಮಾಡಿಕೊಂಡರು.