ಅಪಾರ ಜನಸ್ತೋಮದ ನಡುವೆ ಶ್ರದ್ಧಾಭಕ್ತಿಯ ಕರಗ । ಪೂಜೆ ಸಲ್ಲಿಸಿ ಹರಕೆ ತೀರಿಸಿದ ಸುಮಂಗಲಿಯರು
ಕನ್ನಡಪ್ರಭ ವಾರ್ತೆ ಬಂಗಾರಪೇಟೆನಗರದಲ್ಲಿ 80ನೇ ವರ್ಷದ ಶ್ರೀ ಧರ್ಮರಾಯಸ್ವಾಮಿ ಕರಗ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ನಗರದ ಇತಿಹಾಸ ಪ್ರಸಿದ್ಧ ಶ್ರೀ ದ್ರೌಪತಮ್ಮ ಧರ್ಮರಾಯಸ್ವಾಮಿ ಕರಗ ಜಿಲ್ಲೆಯಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿದ್ದು, ಪ್ರತಿ ವರ್ಷದಂತೆ ಈ ವರ್ಷವು ಸಹ ಅಪಾರ ಜನಸ್ತೋಮದ ನಡುವೆ ಶ್ರದ್ಧಾಭಕ್ತಿಯಿಂದ ನಡೆಯಿತು. ಶನಿವಾರ ರಾತ್ರಿ ಸುಮಾರು 10 ಕ್ಕೆ ಹೂವಿನ ಕರಗ ದೇವಾಲಯದಿಂದ ಹೊರಬರುತ್ತಿದ್ದಂತೆ ಕತ್ತಿಯನ್ನು ಹಿಡಿದಿದ್ದ ವೀರಕುಮಾರರು ಗೋವಿಂದ ಘೋಷಣೆಗಳನ್ನು ಕೂಗುತ್ತಾ ಬರಮಾಡಿಕೊಂಡರು.ಮಲ್ಲಿಗೆ ಹೂವಿನಿಂದ ಅಲಂಕೃತವಾದ ಕರಗವನ್ನು ಹೊತ್ತಿದ್ದ ಪೂಜಾರಿ ಬೇತಮಂಗಲ ಕೃಷ್ಣಮೂರ್ತಿ ದೇವಾಲಯದ ಮುಂಭಾಗ ಹಾಕಿದ್ದ ಬೃಹತ್ ವೇದಿಕೆಯಲ್ಲಿ ತಮಟೆ ನಾದಕ್ಕೆ ವಿವಿಧ ಭಂಗಿಗಳಲ್ಲಿ ನರ್ತಿಸುತ್ತಾ ಪ್ರೇಕ್ಷಕರನ್ನು ರಂಜಿಸಿದರು. ವೇದಿಕೆಯಿಂದ ಹೊರಟ ಕರಗವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದಾಗ ನಗರದ ಸುಮಂಗಲಿಯರು ಕರಗಕ್ಕೆ ಮಲ್ಲಿಗೆಯನ್ನು ಚೆಲ್ಲಿ ಪೂಜೆ ಸಲ್ಲಿಸಿ ಮಡಿಲು ತುಂಬಿಸಿ ಹರಕೆಯನ್ನು ತೀರಿಸಿದರು.ಕರಗ ನೋಡಲು ಆಂಧ್ರ ಮತ್ತು ತಮಿಳುನಾಡಿನಿಂದಲೂ ಸಹ ಜನರು ಆಗಮಿಸಿದ್ದರು. ಕರಗವನ್ನು ಕಣ್ತುಂಬಿಕೊಳ್ಳಲು ವೇದಿಕೆ ಸುತ್ತಲೂ ಇದ್ದಂತಹ ಕಟ್ಟಡಗಳ ಮೇಲೆ ಜನರು ನಿಂತಿದ್ದ ದೃಶ್ಯಗಳು ಕಂಡುಬಂದಿತ್ತು.
ಸಂಸದ ಮಲ್ಲೇಶ್ ಬಾಬು ಮಾತನಾಡಿ, ಧರ್ಮರಾಯಸ್ವಾಮಿ ಸಮಿತಿ ಪ್ರತಿ ವರ್ಷವೂ ಸಹ ಕರಗವನ್ನು ಬಹಳ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತದೆ. ಜಿಲ್ಲೆಯಲ್ಲಿ ನಡೆಯುವ ಕರಗಗಳಲ್ಲಿ ಕಡೆಯ ಕರಗ ಬಂಗಾರಪೇಟೆಯಲ್ಲಿ ನಡೆಯುವುದು ವಿಶೇಷತೆಯಿಂದ ಕೂಡಿದೆ ಎಂದರು.ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ಬಂಗಾರಪೇಟೆ ಕರಗವು ಜಿಲ್ಲೆ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲಿ ಸಹ ಖ್ಯಾತಿಯನ್ನು ಪಡೆದಿದೆ. ತಾಯಿ ದ್ರೌಪದಮ್ಮ ಶಕ್ತಿ ದೇವತೆಯ ಮಹಾತ್ಮೆಯಿಂದ ಕರಗ ಹೊತ್ತುವ ಪೂಜಾರಿ 24 ಗಂಟೆಗಳ ಕಾಲ ವಿಶ್ರಾಂತಿ ಪಡೆಯದೆ ಕರಗವನ್ನು ಹೊತ್ತು ನಗರವನ್ನು ತಿರುಗುತ್ತಾರೆ. ಇದೊಂದು ರೀತಿಯ ದೇವರ ಪವಾಡ. ಸರ್ಕಾರ ರಾಜ್ಯದಲ್ಲಿ ನಡೆಯುವ ಕರಗ ಮಹೋತ್ಸವಕ್ಕೆ 3 ಕೋಟಿ ರು.ಗಳ ಅನುದಾನವನ್ನು ನೀಡಿದೆ. ಜೊತೆಗೆ ಪ್ರತಿ ದೇವಾಲಯಕ್ಕೆ 3 ಲಕ್ಷದಂತೆ ಹಣ ನೀಡಲಾಗುತ್ತಿದ್ದು, ತಿಗಳ ಸಮುದಾಯದ ಏಳಿಗೆಗಾಗಿ ಸರ್ಕಾರ ಒತ್ತು ನೀಡಿದೆ. ಸಮುದಾಯದ ನಿಗಮಕ್ಕೆ ಎಲೆ ಮಂಜುನಾಥರನ್ನು ಅಧ್ಯಕ್ಷರನ್ನಾಗಿ ಮಾಡಿ ತಿಗಳ ಸಮುದಾಯದ ಅಭಿವೃದ್ಧಿಗೆ 10 ಕೋಟಿ ರು.ಗಳನ್ನು ಮೀಸಲಿಡಲಾಗಿದೆ ಎಂದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ, ತಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಲ್.ಎ. ಮಂಜುನಾಥ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಮಾಜಿ ಪುರಸಭೆ ಸದಸ್ಯ ಕಪಾಲಿ ಶಂಕರ್, ಚಿನ್ನಿ ವೆಂಕಟೇಶ್, ವರ್ತೂರು ಸಂತೋಷ್ ಇತರರು ಇದ್ದರು.