ವಿಜೃಂಭಣೆಯ ಕನಕಾಚಲಪತಿ ರಥೋತ್ಸವ

| Published : Apr 02 2024, 01:03 AM IST

ಸಾರಾಂಶ

ದಕ್ಷಿಣ ಭಾರತದ ಎತ್ತರದ ತೇರು ಎಂಬ ಹೆಗ್ಗಳಿಕೆ ಹೊಂದಿರುವ ಕನಕಗಿರಿಯ ಶ್ರೀ ಕನಕಾಚಲಪತಿ ಜಾತ್ರೆ ನಿಮಿತ್ತ ಸೋಮವಾರ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಗೋವಿಂದನ ಸ್ಮರಿಸುವ ಮೂಲಕ ರಥ ಎಳೆದ ಭಕ್ತರು

ಕನ್ನಡಪ್ರಭ ವಾರ್ತೆ ಕನಕಗಿರಿ

ದಕ್ಷಿಣ ಭಾರತದ ಎತ್ತರದ ತೇರು ಎಂಬ ಹೆಗ್ಗಳಿಕೆ ಹೊಂದಿರುವ ಕನಕಗಿರಿಯ ಶ್ರೀ ಕನಕಾಚಲಪತಿ ಜಾತ್ರೆ ನಿಮಿತ್ತ ಸೋಮವಾರ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸಂಜೆ ೪.೧೫ಕ್ಕೆ ಆರಂಭವಾದ ರಥೋತ್ಸವ ೨೫ ನಿಮಿಷಕ್ಕೆ ತೇರಿನ ಹನುಮಪ್ಪನ ಪಾದಗಟ್ಟಿ ತಲುಪಿತು. ವಿಶೇಷ ಪೂಜೆಯೊಂದಿಗೆ ರಥ ಸರಾಗವಾಗಿ ತನ್ನ ಮೂಲ ಸ್ಥಾನಕ್ಕೆ ಮರಳಿತು. ಸಂಜೆ ೫.೨೦ಕ್ಕೆ ರಥೋತ್ಸವ ಮುಕ್ತಾಯಗೊಂಡಿತು.

ಈ ಬಾರಿ ಒಂದು ಗಂಟೆಯೊಳಗೆ ರಥೋತ್ಸವ ಸಂಪನ್ನವಾಗಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದರು. ಸಾವಿರಾರು ಭಕ್ತರು ಗೋವಿಂದನ ಸ್ಮರಿಸುವ ಮೂಲಕ ರಥ ಎಳೆಯುತ್ತಿದ್ದರು. ರಥಬೀದಿಯ ಅಲ್ಲಲ್ಲಿ ರಥ ನಿಂತಾಗ ಭಕ್ತರು ನಿಟ್ಟುಸಿರು ಬಿಟ್ಟು ಮತ್ತೆ ರಥ ಎಳೆಯಲು ಸಿದ್ಧರಾಗುತ್ತಿದ್ದರು. ಭಕ್ತಿಯ ಪರಕಾಷ್ಠೆಯಲ್ಲಿ ಮಿಂದೆದ್ದ ಭಕ್ತರು ತೇರನ್ನೆಳೆದು ಸಂಭ್ರಮಿಸಿದರು. ಇನ್ನೂ ಕೆಲ ಭಕ್ತರು ರಥಕ್ಕೆ ಹೂಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.ಆತಂಕಕ್ಕೊಳಗಾಗಿದ್ದ ಭಕ್ತರು:

ಜನವರಿ ತಿಂಗಳಲ್ಲಿ ನಗರೋತ್ಥಾನ ಯೋಜನೆಯಡಿ ₹೨.೨ ಕೋಟಿ ವೆಚ್ಚದಲ್ಲಿ ರಥಬೀದಿ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿತ್ತು. ಕಾಮಗಾರಿ ತರಾತುರಿಯಾಗಿ ಮುಗಿದಿದ್ದರಿಂದ ರಸ್ತೆ ಕುಸಿದು ರಥ ಸಿಲುಕುವ ಆತಂಕ ಭಕ್ತರಲ್ಲಿ ಮೂಡಿತ್ತು. ರಥ ಬೀದಿಯ ೫೦ ಅಡಿ ಅಗಲ ವಿಸ್ತೀರ್ಣ ಜಾಗೆಯಲ್ಲಿಯೇ ಸರಾಗವಾಗಿ ಸಾಗಿದ್ದಕ್ಕೆ ಭಕ್ತರು ಖುಷಿಯಾಗಿದ್ದಾರೆ.

ಪಾನೀಯ ವಿತರಣೆ:

ರಣ ಬಿಸಿಲನ್ನು ಲೆಕ್ಕಿಸದೆ ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತರಿಗೆ ರಾಜಬೀದಿಯದ್ದಕ್ಕೂ ನೀರಿನ ಅರವಟಿಗೆ, ಮಜ್ಜಿಗೆ ಹಾಗೂ ಪಾನಕ ವಿತರಿಸಲಾಯಿತು. ಮನೆಗಳ ಮೇಲೆ ಮಹಿಳೆಯರು ಹಾಗೂ ಮಕ್ಕಳು ನಿಂತು ರಥೋತ್ಸವವನ್ನು ವೀಕ್ಷಿಸಿದರು. ರಥೋತ್ಸವ ಹಿನ್ನಲೆಯಲ್ಲಿ ಭಕ್ತರು ಉಪವಾಸ ವ್ರತ ಆಚರಿಸಿದರು. ಜಾತ್ರೆಯಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ, ಗದಗ, ಹುಬ್ಬಳ್ಳಿ, ಬೆಳಗಾವಿ, ನೆರೆಯ ಆಂಧ್ರಪ್ರದೇಶ, ಮಹರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಭಕ್ತರು ಪಾಲ್ಗೊಂಡಿದ್ದರು.

ವ್ರತ ವಿಸರ್ಜನೆ:

ಐದು ದಿನಗಳ ಕಾಲ ವಿಶಿಷ್ಟ ವ್ರತಾಚರಣೆಯಲ್ಲಿದ್ದ ಗೊಲ್ಲ(ಯಾದವ) ಸಮುದಾಯ ಭಕ್ತರು ರಥೋತ್ಸವ ಮುಕ್ತಾಯದ ನಂತರ ಕನಕಾಚಲಪತಿಗೆ ದೀಪ ಬೆಳಗಿಸುವ ಮೂಲಕ ವಿಸರ್ಜಿದರು. ಪಟ್ಟಣದ ನಾನಾ ಸಮುದಾಯಗಳ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಹಿಮರಾಗಿರುವವರು ಕೂಡಾ ವ್ರತದಿಂದ ಮುಕ್ತರಾದರು.

ಚನ್ನಮಲ್ಲಶ್ರೀಗಳಿಂದ ರಥಕ್ಕೆ ಪುಷ್ಪಾರ್ಚನೆ:

ರಥ ಹನುಮಪ್ಪ ಪಾದಗಟ್ಟಿ ತಲುಪುತ್ತಿದ್ದಂತೆ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಡಾ. ಚನ್ನಮಲ್ಲಸ್ವಾಮಿಗಳು ರಥಕ್ಕೆ ಪುಷ್ಪ ಸಮರ್ಪಿಸಿದರು.

ರಥೋತ್ಸವದಲ್ಲೂ ಮೋದಿ ಘೋಷಣೆ!:

ಸೋಮವಾರ ಮೂಲಾ ನಕ್ಷತ್ರದಲ್ಲಿ ನಡೆದ ಶ್ರೀ ಕನಕಾಚಲಪತಿ ರಥೋತ್ಸವದಲ್ಲಿಯೂ ಮೋದಿ ಮೋದಿ ಘೋಷಣೆ ಕೇಳಿ ಬಂತು.

ಮಾ.31ರಂದು ನಡೆದ ಗರುಡೋತ್ಸವ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ ಎದುರಲ್ಲೆ ಯುವಕರ ಗುಂಪೊಂದು ಮೋದಿ ಘೋಷಣೆ ಕೂಗಿತ್ತು. ಸೋಮವಾರ ನಡೆದ ರಥೋತ್ಸವದ ವೇಳೆ ತೇರು ಎಳೆಯುತ್ತಿರುವಾಗಲೂ ಯುವಕರು ಜೈ ಶ್ರೀರಾಮ್, ಜೈ ಹನುಮಾನ್ ನಂತರ ಮೋದಿ-ಮೋದಿ ಎಂದು ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಬಿಜೆಪಿಯವರು ಸಂತಸಗೊಂಡರೆ ಇತ್ತ ಕಾಂಗ್ರೆಸ್ಸಿನವರಿಗೆ ಮುಜುಗರ ಉಂಟಾಯಿತು. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.