ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಅದ್ದೂರಿ ಚಾಲನೆ

| Published : Mar 06 2024, 02:16 AM IST

ಸಾರಾಂಶ

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಮಂಗಳವಾರ ಅದ್ದೂರಿ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳು’ ಶೀರ್ಷಿಕೆಯಡಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ(ಐಐಎಚ್‌ಆರ್‌) ಆವರಣದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಮಂಗಳವಾರ ನಗರದ ಭಾರತ ಎಲೆಕ್ಟ್ರಾನಿಕ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಭಾನುಪ್ರಕಾಶ್ ಶ್ರೀವಾತ್ಸವ್ ಅವರು ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರೈತರು ಮತ್ತು ಕೃಷಿ ಉದ್ಯಮಿಗಳ ಅಗತ್ಯತೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ಅವುಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಲು ಇಂತಹ ಮೇಳಗಳು ಅತ್ಯವಶ್ಯಕವಾಗಿವೆ. ಕೃಷಿಕರಿಗೆ, ಉದ್ಯಮಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕೃಷಿಗೆ ಪೂರಕವಾಗಿ ಏನು ಬೇಕು ಎಂಬುದನ್ನು ತಿಳಿಯಲು ಸಹಕಾರಿಯಾಗಿದೆ ಎಂದರು.

ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ತೋಟಗಾರಿಕೆ ವಿಭಾಗದ ಉಪ ಮಹಾನಿರ್ದೇಶಕ ಪ್ರೊ.ಸಂಜಯ್ ಕುಮಾರ್ ಸಿಂಗ್ ಮಾತನಾಡಿ, ಕೋವಿಡ್ ನಂತರ ಕೃಷಿ ವಲಯದ ಉದ್ಯಮ ಶೀಲತೆ ಮತ್ತು ಉದ್ಯೋಗ ಸೃಷ್ಟಿ ದೇಶದ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡಿದೆ. ಲಾಭದಾಯಕ ವಲಯವಾದ ತೋಟಗಾರಿಕೆ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಳವಡಿಕೆಗೆ ಇನ್ನು ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯಂ, ಡಾ.ಎಂ.ವಿ.ಧನಂಜಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

20 ರಾಜ್ಯಗಳ ರೈತರು ಭಾಗಿ:

ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಮಣಿಪುರ, ಮಹಾರಾಷ್ಟ್ರ, ಅಸ್ಸಾಂ, ತಮಿಳುನಾಡು ಸೇರಿದಂತೆ ದೇಶದ 20 ರಾಜ್ಯಗಳ ರೈತರು, ಕೃಷಿ ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ಕೃಷಿ ವಿಜ್ಞಾನ ಕೇಂದ್ರಗಳು ಸೇರಿದಂತೆ 50ಕ್ಕೂ ಹೆಚ್ಚು ಸಂಸ್ಥೆಗಳು, ತೋಟಗಾರಿಕೆ ವಿಶ್ವವಿದ್ಯಾನಿಲಯಗಳು ಭಾಗವಹಿಸಿದ್ದರು.

ಸರ್ಕಾರಿ ಮತ್ತು ಸರ್ಕಾರೇತರ 250ಕ್ಕೂ ಹೆಚ್ಚು ವಿವಿಧ ಮಳಿಗೆಗಳು ಪ್ರದರ್ಶನಗೊಂಡಿದ್ದು, ಕೃಷಿ ಆಸಕ್ತರನ್ನು ಮತ್ತು ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೃಷಿ ಯಂತ್ರೋಪಕರಣಗಳು, ತಂತ್ರಜ್ಞಾನಗಳು, ತಳಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ.

ಮೇಳದಲ್ಲಿ ಐಐಎಚ್‌ಆರ್ ಅಭಿವೃದ್ಧಿಪಡಿಸಿರುವ ಈರುಳ್ಳಿ ನಾಟಿ ಮಾಡುವ ಯಂತ್ರ, ಯುವಿಬಿ ಲೈಟ್ ಅಡಿಯಲ್ಲಿ ಆವಿಷ್ಕರಿಸಿದ ಅಣಬೆಗಳ ವಿಟಮಿನ್ ಡಿ ಪುಷ್ಟೀಕರಣ ತಂತ್ರಜ್ಞಾನ, ಅಧಿಕ ಇಳುವರಿ ಕೊಡುವ ಅರ್ಕಾ ನಿಹಿರ ಮೆಣಸಿನಕಾಯಿ ತಳಿ ಮತ್ತು ಶೇಖರಿಸಿಕೊಂಡು ಅಡುಗೆ ಮಾಡಲು ಸಿದ್ಧವಾದ ಕೋಮಲ ಹಲಸಿನ ಹಣ್ಣಿನ ಚಂಕ್ಸ್, ಅರ್ಕಾ ಲಂಬ ಮಾದರಿ, ಅರ್ಕಾ ಕತ್ತರಿಸಿದ ತಾಜಾ ಹಣ್ಣುಗಳ ತಂತ್ರಜ್ಞಾನ, ಅರ್ಕಾ ಭೃಂಗರಾಜ್ ಸೊರಗು ರೋಗ ನಿರೋಧಕ ತಳಿಗಳು ವಿಶೇಷವಾಗಿ ಗಮನ ಸೆಳೆದವು.

ಹಣ್ಣು-ತೋಟಕಾರಿಕೆ ಬೆಳೆ ಮಾಹಿತಿ:

ಹಣ್ಣು, ತರಕಾರಿ ಬೆಳೆಗಳ ಪ್ರಾತ್ಯಾಕ್ಷಿಕೆ ಮೂಲಕ ಕೃಷಿ ಆಸಕ್ತರಿಗೆ ಮಾಹಿತಿ ನೀಡಲಾಯಿತು. ಅಣಬೆ ಕೃಷಿ, ಕಡಿಮೆ ಖರ್ಚಿನಲ್ಲಿ ಒಳ್ಳೆಯ ಗುಣಮಟ್ಟದ ಬಾಳೆ ಬೆಳೆಯುವುದು, ಬಾಳೆ ಸಂರಕ್ಷಣೆ, ದವನ, ಪುದಿನ, ಬಜೆ, ಸಕ್ಕರೆ ಗಿಡ, ಮಾವು, ಹಲಸು, ಸೀಬೆ, ಸೀತಾಫಲ, ಕುಂಬಳಕಾಯಿ, ಹೂವಿನ ಬೇಸಾಯ ಮತ್ತು ತಳಿಗಳು ಬಗ್ಗೆ ಮೇಳದ ನರ್ಸರಿಗಳಲ್ಲಿ ಮಾಹಿತಿ ನೀಡುವ ಮೂಲಕ ಮಾರಾಟ ಮಾಡಲಾಯಿತು.

ಸನ್ಮಾನ: ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಶದ ನಾನಾ ಭಾಗದ 12 ರೈತರು, ನಾಲ್ವರು ಉದ್ಯಮಿಗಳು, 5 ರೈತ ಉತ್ಪಾದಕ ಸಂಸ್ಥೆಗಳು ಮತ್ತು ಐದು ಕೃಷಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ತುಮಕೂರಿನ ಐಸಿಎಆರ್-ಕೆವಿಕೆಗೆ ‘ಅರ್ಕಾ ಪ್ಲೋರಲ್ ಅಗರಬತ್ತಿ’ ಮತ್ತು ‘ಧೂಪ್’ ಮತ್ತು ಕೊಡಗಿನ ರಮೇಶ್ ಎಸ್.ಪೊನ್ನತ್ಮೊಟ್ಟೆ ಅವರಿಗೆ ‘ಅರ್ಕಾ ಸುಪ್ರೀಂ ಆವಕಾಡೋ ವೆರೈಟಿ’ ಎಂಬ ಎರಡು ತಂತ್ರಜ್ಞಾನಗಳಿಗಾಗಿ ತಿಳಿವಳಿಕೆ ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.