ಕನ್ನಡಪ್ರಭ ವಾರ್ತೆ ರಬಕವಿ ಬನಹಟ್ಟಿ
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮೇಲಿದ್ದ ಜಿಲ್ಲಾ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿದ ಹಿನ್ನೆಲೆ ಶ್ರೀಗಳ ಭಕ್ತರು ಹಾಗೂ ಅಭಿಮಾನಿ ಬಳಗದ ವತಿಯಿಂದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಅವಳಿ ನಗರದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಭವ್ಯ ಶೋಭಾ ಯಾತ್ರೆಯೊಂದಿಗೆ ಶ್ರೀಗಳ ಪುರಪ್ರವೇಶ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ಜರುಗಿತು.ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ ನಿಮಿತ್ತ ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ, ಧಾರ್ಮಿಕ ಉತ್ಸಾಹ, ಸಾಂಪ್ರದಾಯಿಕ ವಾದ್ಯಗಳ ನಿನಾದ ನಗರದಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಆರತಿ, ಕುಂಭ ಹೊತ್ತು ಸಾಗಿದ ಮಹಿಳೆಯರು, ರಸ್ತೆಗಳಲ್ಲಿ ರಂಗೋಲಿಗಳ ಶೃಂಗಾರ, ಸ್ವಾಗತ ಕಮಾನುಗಳು, ಧಾರ್ಮಿಕ ಧ್ವಜಗಳು, ಬ್ಯಾನರ್ ಹಾಗೂ ಸಕಲ ವಾದ್ಯ ಮೇಳಗಳು, ಭಕ್ತರ ಜಯ ಘೋಷಗಳು ಹಾಗೂ ಸಾಂಪ್ರದಾಯಿಕ ಕಲಾ ತಂಡಗಳ ಪ್ರದರ್ಶನಗಳಿಂದ ನಗರದೆಲ್ಲೆಡೆ ಧಾರ್ಮಿಕ ಸಂಭ್ರಮ ಮನೆಮಾಡಿತ್ತು.
ಶೋಭಾಯಾತ್ರೆ ರಬಕವಿಯ ಹಳೇ ಬಸ್ ನಿಲ್ದಾಣ ಹಾಗೂ ಬನಹಟ್ಟಿಯ ವೈಭವ ಚಿತ್ರಮಂದಿರದಿಂದ ಎರಡೂ ಕಡೆಗಳಿಂದ ಆರಂಭವಾಗಿ ಅವಳಿ ನಗರಗಳ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಭಕ್ತರು ಪುಷ್ಪವೃಷ್ಟಿಗೈದು ಕಾಡಸಿದ್ದೇಶ್ವರ ಶ್ರೀಗಳಿಗೆ ಗೌರವ ಸಲ್ಲಿಸಿದರು.ಶೋಭಾಯಾತ್ರೆಯಲ್ಲಿ ಕನ್ಹೇರಿ ಶ್ರೀಗಳು, ಶಿರೋಳದ ಶಂಕರಾರೂಢ ಶ್ರೀಗಳು, ಹಳೇ ಹುಬ್ಬಳ್ಳಿಯ ಜಗದ್ಗುರು ಯೋಗಾಚಾರ್ಯ ಶ್ರೀ, ಶಿವಶಂಕರ ಶಿವಾಚಾರ್ಯರು, ಮೈಗೂರಿನ ಗುರುಪ್ರಸಾದ ಶ್ರೀಗಳು, ಹುಲ್ಯಾಳದ ಹರ್ಷಾನಂದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಬಸನಗೌಡ ಪಾಟೀಲ, ಸಿದ್ದು ಸವದಿ, ಹಿಂದೂ ಮುಖಂಡರಾದ ನಂದು ಗಾಯಕವಾಡ, ವಿದ್ಯಾಧರ ಸವದಿ, ಲಕ್ಕಪ್ಪ ಪಾಟೀಲ, ಬಾಬುಗೌಡ ಪಾಟೀಲ, ಗೌರಿ ಮಿಳ್ಳಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಮೆರವಣಿಗೆ ಬನಹಟ್ಟಿ ನಗರದ ಎಸ್ ಆರ್ ಎ ಕಾಲೇಜು ಮೈದಾನಕ್ಕೆ ತಲುಪಿದ ನಂತರ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ ಜರುಗಿತು. ಸಮಾವೇಶದಲ್ಲಿ ನಾಡಿನ ವಿವಿಧ ಜಿಲ್ಲೆಗಳ 300ಕ್ಕೂ ಅಧಿಕ ಸ್ವಾಮೀಜಿಗಳು ಭಾಗವಹಿಸಿದ್ದರು. ಮಠಾಧೀಶರು ಬಸವಾದಿ ತತ್ವಗಳು, ಶರಣರ ಆದರ್ಶಗಳು, ಧರ್ಮದ ಮಹತ್ವ ಹಾಗೂ ನೈತಿಕ ಮೌಲ್ಯಗಳ ಅಗತ್ಯ ಕುರಿತು ಸಂದೇಶ ನೀಡಿದರು.ರಬಕವಿ ಬನಹಟ್ಟಿ, ತೇರದಾಳ, ಜಮಖಂಡಿ, ಮುಧೋಳ ತಾಲೂಕಿನ ಸಾವಿರಾರು ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.