ಸಾರಾಂಶ
- ಹರಿಹರದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್ ಚಂದಾಪುರ್ ಮಾಹಿತಿ
- - -ಕನ್ನಡಪ್ರಭ ವಾರ್ತೆ ಹರಿಹರ
ನಗರದಲ್ಲಿ ಸೆ.೧೪ರ ಭಾನುವಾರ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ಹಾಗೂ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಮಹಾಗಣಪತಿಯ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್ ಚಂದಾಪುರ್ ಹೇಳಿದರು.ನಗರದ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆಯ ಜೈ ಜವಾನ್ ಜೈ ಕಿಸಾನ್ ಮಹಾ ಮಂಟಪದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಿಂದ ಮಧ್ಯಾಹ್ನ ೨ ಗಂಟೆಯಿಂದ ಆರಂಭವಾಗುವ ಶೋಭಾಯಾತ್ರೆಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನೀರಿಕ್ಷೆಯಿದೆ ಎಂದರು.
ಡಿಜೆ ಸೌಂಡ್ ಸಿಸ್ಟಂ ಬಳಕೆ ಬ್ಯಾನ್ ಹಿನ್ನೆಲೆ ಈ ಬಾರಿ ಮೆರವಣಿಗೆಗೆ ಮೆರಗು ನೀಡಲು ವಿವಿಧ ಕಲಾತಂಡಗಳನ್ನು ಕರೆಸಲಾಗುತ್ತಿದೆ. ರಾಜ್ಯ, ಹೊರರಾಜ್ಯ ಹಾಗೂ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಮಹಿಳೆಯರಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಶೋಭಾಯಾತ್ರೆಯಲ್ಲಿ ಭಾಗವಹಿಸುವ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರಸಾದ, ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ನಗರದ ವಿವಿಧ ಸಂಘ ಸಂಸ್ಥೆಗಳು ಹಾಗೂ ನಮ್ಮ ಹಿಂದೂ ಮಹಾಗಣಪತಿ ಸಮಿತಿಯಿಂದಲೂ ಮಾಡಲಾಗುವುದು ಎಂದರು.ಪ್ರಚಾರ ಸಮಿತಿ ಅಧ್ಯಕ್ಷ ಶೇಖರ್‌ಗೌಡ ಮಾತನಾಡಿ, ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರ ಪ್ರಮುಖ ರಸ್ತೆ ಮತ್ತು ವೃತ್ತಗಳನ್ನು ಕೇಸರಿ ಬಟ್ಟೆ, ಬಾವುಟ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ. ರಾಣಿ ಚನ್ನಮ್ಮ ವೃತ್ತದಲ್ಲಿ ಅಳವಡಿಸುತ್ತಿರುವ ಸಮುದ್ರ ಮಂಥನ ಬೃಹತ್ ಕಲಾಕೃತಿ ಪ್ರಮುಖ ಆಕರ್ಷಣೆಯಾಗಿದೆ ಎಂದರು.
ಅಲಂಕಾರ ಸಮಿತಿ ಅಧ್ಯಕ್ಷ ರಾಜು ರೋಖಡೆ ಮಾತನಾಡಿ, ಡಿಜೆ ಸೌಂಡ್ ಬ್ಯಾನ್ ಆಗಿದ್ದರೂ ಜನ ಆಕರ್ಷಣೆಗಾಗಿ ಹಲವಾರು ಕಲಾತಂಡಗಳು ಭಾಗವಹಿಸಲಿವೆ. ಈ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗಣೇಶ ಸಂಘಟನೆಗಳು ಹಾಗೂ ಮಾತೆಯರು, ಮಹಿಳೆಯರು ಈ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.ಮೆರವಣಿಗೆ:
ಸೆ.೧೪ರಂದು ಮಧ್ಯಾಹ್ನ ೨ ಗಂಟೆಯಿಂದ ಆರಂಭವಾಗುವ ಶೋಭಾಯಾತ್ರೆ ಮೆರವಣಿಗೆ ಪೇಟೆ ಆಂಜನೇಯ ದೇವಸ್ಥಾನದಿಂದ ಶೋಭಾ ಟಾಕೀಸ್ ರಸ್ತೆಯ ಮುಖಾಂತರ ನಗರಸಭೆ ಮುಂಭಾಗದ ಹಳೇ ಪಿ.ಬಿ. ರಸ್ತೆಯ ಮೂಲಕ ಗಾಂಧಿ ವೃತ್ತ, ಮುಖ್ಯ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ನಂತರ ಫಕ್ಕಿರ ಸ್ವಾಮಿ ಮಠ, ಶಿವಮೊಗ್ಗ ರಸ್ತೆ ಬಲ ರಸ್ತೆಯಿಂದ ಪುನಃ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ತಲುಪಿ ಮುಖ್ಯ ರಸ್ತೆಯಿಂದ ಹಳೇ ಪಿ.ಬಿ. ರಸ್ತೆಯ ಮೂಲಕ ರಾಘವೇಂದ್ರ ದೇವಸ್ಥಾನ ಬಳಿಯ ನಗರಸಭೆಯ ಹಳೆಯ ನೀರು ಶುದ್ಧೀಕರಣ ಘಟಕದ ಬೃಹತ್ ಗಾತ್ರದ ಹೊಂಡದಲ್ಲಿ ರಾತ್ರಿ ೧೦:೩೦ಕ್ಕೆ ಗಣಪತಿ ವಿಸರ್ಜನೆಯ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಶೋಭಾಯಾತ್ರೆ ಚಾಲನೆಗೆ ತಾಲೂಕಿನ ಮಠಾಧೀಶರನ್ನು ಆಹ್ವಾನಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಸಕ ಬಿ.ಪಿ.ಹರೀಶ್, ಹಿಂದೂ ಮಹಾ ಗಣಪತಿ ಟ್ರಸ್ಟ್ ಗೌರವಾಧ್ಯಕ್ಷ ಡಾ.ಶಶಿಕುಮಾರ್ ಮೆಹರ‍್ವಾಡೆ ಸೇರಿದಂತೆ ಮಾಜಿ ಶಾಸಕರು ಹಾಗೂ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸುವರು ಎಂದು ಟ್ರಸ್ಟ್ ಅಧ್ಯಕ್ಷ ಬಸವನ ಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಎಚ್.ದಿನೇಶ್, ಪೂಜಾ ಸಮಿತಿ ಅಧ್ಯಕ್ಷ ನಾಗರಾಜ್ ಭಂಡಾರಿ, ಹಿಂದೂ ಮಹಾಗಣಪತಿ ಸಮಿತಿಯ ರಾಘವೇಂದ್ರ ಉಪಾಧ್ಯಾ, ಸಂತೋಷ್ ಗುಡಿಮನಿ, ಚಂದ್ರಕಾಂತ ಗೌಡ, ಅನಂದ್‌ಕುಮಾರ್, ಕಾರ್ತಿಕ್, ನಿತ್ಯಾನಂದ, ರವಿ ರಾಯ್ಕರ್, ಅದ್ವೈತ ಶಾಸ್ತ್ರಿ ಆದಿತ್ಯಾ ಮೆರ‍್ವಾಡೆ, ಎನ್.ಮಹೇಶ್ ಹಾಗೂ ಇತರರಿದ್ದರು.- - -
(ಕೋಟ್)ಹಿಂದೂ ಮಹಾಗಣಪತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆ ಹಿನ್ನೆಲೆ ಸೆ.೧೩ರಂದು ಮಧ್ಯಾಹ್ನ ೩ ಗಂಟೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಅಂದಾಜು ೩೦೦ಕ್ಕೂ ಹೆಚ್ಚು ಬೈಕ್‌ಗಳು ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
- ಸ್ವಾತಿ ಹನುಮಂತಪ್ಪ, ಉಪಾಧ್ಯಕ್ಷ, ಹಿಂದೂ ಮಹಾಗಣಪತಿ ಟ್ರಸ್ಟ್.- - -
-11HRR.03:ಹರಿಹರದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಪದಾಧಿಕಾರಿಗಳು ಗಣಪತಿ ರಾಜಬೀದಿ ಉತ್ಸವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.