ಏಪ್ರಿಲ್‌ 11ರಂದು ವಿಜೃಂಭಣೆಯ ಶೋಭಾಯಾತ್ರೆ: ಮುನಿಯಪ್ಪ

| Published : Mar 14 2025, 12:32 AM IST

ಸಾರಾಂಶ

ಏ.11ರಂದು ಶೋಭಯಾತ್ರೆ ನಡೆಯಲಿದ್ದು, ಏಪ್ರಿಲ್ 12 ರಂದು ಹನುಮ ಮಹೋತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಶ್ರೀಗಳು ಭಾಗವಹಿಸಲಿದ್ದಾರೆ ಎಂದು ಬೆಂಗಳೂರಿನ ಸ್ವಯಂಸೇವಕ ಮುನಿಯಪ್ಪ ತಿಳಿಸಿದರು.

ಏ.12ಕ್ಕೆ ಹನಮ ಮಹೋತ್ಸವ । 3ನೇ ವರ್ಷದ ಉತ್ಸವ । ಆಂಜನೇಯ ಸಮಿತಿ ಆಯೋಜನೆ । ವಿವಿಧ ಶ್ರೀಗಳು ಭಾಗಿ

ಕನ್ನಡಪ್ರಭ ವಾರ್ತೆ ಜಗಳೂರು

ಏ.11ರಂದು ಶೋಭಯಾತ್ರೆ ನಡೆಯಲಿದ್ದು, ಏಪ್ರಿಲ್ 12 ರಂದು ಹನುಮ ಮಹೋತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಶ್ರೀಗಳು ಭಾಗವಹಿಸಲಿದ್ದಾರೆ ಎಂದು ಬೆಂಗಳೂರಿನ ಸ್ವಯಂಸೇವಕ ಮುನಿಯಪ್ಪ ತಿಳಿಸಿದರು.

ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಮೇಲಿನ ಸಭಾಂಗಣದಲ್ಲಿ ಗುರುವಾರ ಬೇಡಿ ಆಂಜನೇಯ ಆಡಳಿತ ಸಮಿತಿಯಿಂದ ಕರೆಯಲಾಗಿದ್ದ ತೃತೀಯ ವರ್ಷದ ಹನುಮ ಮಾಲಾಧಾರಿಗಳ ಹನುಮ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನದಿ ದಡಗಳಲ್ಲಿನ ದೇವಸ್ಥಾನಗಳು ವಿಖ್ಯಾತಹೊಂದಿವೆ.ಆದರೆ ತಾಲೂಕಿನ ವಿಜಯನಗರ ಸಾಮ್ರಾಜ್ಯದಲ್ಲಿ ವಾಣಿಜ್ಯ ಕೇಂದ್ರವಾಗಿರುವ ತಾಲೂಕಿನ ಸಂತೆಮುದ್ದಾಪುರ ಗ್ರಾಮದಲ್ಲಿ ಆಂಜನೇಯ ದೇವಸ್ಥಾನ ಮಾತ್ರ ಉಳಿದು ಜನವಸತಿ ನಿರ್ಜನವಾಯಿತು. ಹನುಮಂತನ ದೇವಸ್ಥಾನವನ್ನು ಬಯಲಲ್ಲಿ ಬಿಡದೆ ಅಭಿವೃದ್ದಿಗೊಳಿಸಲು ಹನುಮಮಾಲೆ ಆರಂಭಿಸಲಾಗಿದೆ. ಹನುಮ ಸೇವಾ ಸಮಿತಿ ರಚಿಸಿಕೊಂಡು ಮುಂಬರುವ ದಿನಗಳಲ್ಲಿ ಭವ್ಯವಾದ ದೇವಾಲಯ ನಿರ್ಮಾಣಗೊಂಡು ತೀರ್ಥ ಕ್ಷೇತ್ರವಾಗಲು ಸರ್ವರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ದೇವಸ್ಥಾನಗಳು ರಾಜಮಹಾರಾಜರ ಕಾಲದಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಪ್ರಸಕ್ತವಾಗಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಕ್ತಸಮೂಹ ದುಡಿಮೆಯ ಒಂದು ಭಾಗವನ್ನು ಮೀಸಲಿಟ್ಟು ದೇವಸ್ಥಾನ ನಿರ್ಮಿಸಲಾಗುತ್ತಿದೆ. ಜಾತಿ ಮತ ಪಂಥಗಳನ್ನು ತೊರೆದು 66 ಕೋಟಿ ಮಂದಿ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಸ್ವಯಂ ಪ್ರೇರಿತವಾಗಿ ಶ್ರದ್ಧೆ, ಆಧ್ಯಾತ್ಮಿಕತೆಯ ಪ್ರತೀಕವಾಗಿ ಭಾಗವಹಿಸಿ ಗಂಗಾಸ್ನಾನದಲ್ಲಿ ಮಿಂದೆದ್ದರು. 5 ಲಕ್ಷ ಅಘೋರಿ, ನಾಗಾ ಸನ್ಯಾಸಿಗಳು, 2 ಸಾವಿರ ನಾಗಾ ಸಾಧುಗಳಾಗಿ ಸ್ವೀಕರಿಸಿದರು. ದೇಶದಲ್ಲಿ ಜನರು ಆಧ್ಯಾತ್ಮಿಕತೆಗೆ ಆದ್ಯತೆ ನೀಡುವುದು ಪ್ರಶಂಸನೀಯ ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಸಂತೆಮುದ್ದಾಪುರ ಬಳಿ ಬೇಡಿ ಆಂಜನೇಯ ದೇವಸ್ಥಾನ ಅಭಿವೃದ್ದಿಗೆ ಭಕ್ತಸಮೂಹ ಕೈಜೋಡಿಸಬೇಕು. ಹನುಮ ಮಾಲಾಧಾರಿಗಳಾಗಿ ಅಧಿಕ ಸಂಖ್ಯೆಯಲ್ಲಿ ಹನುಮ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸೋಣ ಎಂದರು.

ಚಿತ್ರದುರ್ಗ ವಿಭಾಗ ಪ್ರಮುಖ್ ಓಂಕಾರ್, ಬೇಡಿ ಆಂಜನೇಯ ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷ ಶಿವಾನಂದ, ಕಾರ್ಯದರ್ಶಿ ಬಿದರಕೆರೆ ಪ್ರಕಾಶ್, ಮುಖಂಡರಾದ ವಕೀಲ ಡಿ.ವಿ.ನಾಗಪ್ಪ,ಕೃಷ್ಣಮೂರ್ತಿ, ಬಿಸ್ತುವಳ್ಳಿ ಬಾಬು, ಎ.ಎಂ. ಮರುಳಾರಾಧ್ಯ, ಶಿವಕುಮಾರ್ ಸ್ವಾಮಿ, ಸತೀಶ್, ಕರಿಬಸಯ್ಯ, ಬಸವರಾಜ್, ಇತರರು ಇದ್ದರು.