ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಗ್ರಾಮದೇವತೆ ಶ್ರೀ ಚಳ್ಳಕೆರೆಯಮ್ಮನ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ವಿಶೇಷ ಜಾತ್ರೆ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ಸಂಭ್ರಮದ ಸಿಡಿ ಉತ್ಸವ ನಡೆಯಿತು. ನಿರೀಕ್ಷೆಗೂ ಮೀರಿ ಹೆಚ್ಚಿನ ಭಕ್ತರ ಸಿಡಿ ಉತ್ಸವದಲ್ಲಿ ಪಾಲ್ಗೊಂಡು ದಾರಿಯುದ್ದಕ್ಕೂ ಸಾಗಿದ ಸಿಡಿಯ ಭವ್ಯವಾದ ಮೆರವಣಿಗೆಯನ್ನು ಕಣ್ತುಂಬಿಕೊಂಡರು.ಗುರುವಾರ ಮಧ್ಯಾಹ್ನ ೩.೩೦ಕ್ಕೆ ದೇವಿಯ ಪೂಜೆ ಮತ್ತು ಸಿಡಿ ಉತ್ಸವ ಆರಂಭವಾಯಿತು. ಸಿಡಿ ಉತ್ಸವದ ಮೆರವಣಿಗೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಜೋಡೆತ್ತುಗಳು, ಮ್ಯಾಸಬೇಡರ ಪಡೆ, ಪೋತರಾಜರ ಹಾಗೂ ಮಹಿಳೆಯರ ಡೊಳ್ಳು ಕುಣಿತ ಕೀಲುಕುದುರೆ, ನಂದಿಕೋಲು, ಗೊಂಬೆಕುಣಿತ ಹಾಗೂ ಜಾನಪದ ಕಲಾತಂಡಗಳು ಸಿಡಿ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಮೆರಗು ನೀಡಿದವು. ದಾರಿಯುದ್ದಕ್ಕೂ ಹೆಜ್ಜೆ ಹೆಜ್ಜಗೂ ಭಕ್ತರು ಚಳ್ಳಕೆರೆಯಮ್ಮ ದೇವರಿಗೆ ಜೈಕಾರ ಹಾಕಿದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸಿಡಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಧರ್ಮದರ್ಶಿ ಪಿ.ಆರ್.ಗೌಡ್ರರಾಮಣ್ಣ, ದಳವಾಯಿಮೂರ್ತಿ, ಪಿ.ತಿಪ್ಪೇಸ್ವಾಮಿ, ಗೊಲ್ಲಗೌಡನಾಗಣ್ಣ, ತಳವಾರ ಈರಣ್ಣ, ದೊರೆಗಳ ಪ್ರಸನ್ನ, ದೇವಿಪ್ರಸಾದ್, ದಳವಾಯಿ ವೆಂಕಟೇಶ್, ಚಿಕ್ಕಣ್ಣಗೌಡ, ಬುಡ್ಡವೀರಣ್ಣ, ಮಜ್ಜಿಗೆ ವೀರೇಶ್, ಎಂ.ಬಿ.ಮಲ್ಲಪ್ಪ, ಮಡಿವಾಳರ ಧನಂಜಯ, ರುದ್ರಪ್ಪ, ಎನ್.ನಾಗರಾಜು, ಸೂರಪಾಪಣ್ಣ, ಮಲ್ಲಿಕಾರ್ಜುನಸ್ವಾಮಿ, ಸಿ.ಟಿ.ಶ್ರೀನಿವಾಸ್, ವೆಂಕಟೇಶ್, ಬಿ.ಟಿ. ರಮೇಶ್‌ಗೌಡ ಮುಂತಾದವರು ಉಪಸ್ಥಿತರಿದ್ದರು. ದಾರಿಯುದ್ದಕ್ಕೂ ಸಿಡಿಯ ಅದ್ಧೂರಿ ಮೆರವಣಿಗೆ ಸಾಗುತ್ತಿದ್ದು, ಬಾಯಾರಿದ ಭಕ್ತರಿಗೆ ದಾನಿಗಳು ಮೊಸರನ್ನ, ಚಿತ್ರನ್ನ, ಮಜ್ಜಿಗೆ, ಪಾನಕ, ಕುಡಿಯುವ ನೀರು ನೀಡಿದರು.ಸಿಡಿ ಉತ್ಸವದ ಮೆರವಣಿಗೆ ನೆಹರೂ ವೃತ್ತದ ಮೂಲಕ ಬೆಂಗಳೂರು ರಸ್ತೆಯ ಬಸವೇಶ್ವರ ವೃತ್ತಕ್ಕೆ ತೆರಳಿತು. ೩.೩೦ಕ್ಕೆ ಆರಂಭವಾದ ಮೆರವಣಿಗೆ ೫.೩೦ಕ್ಕೆ ಮುಕ್ತಾಯವಾಯಿತು. ಶಾಸಕ ಟಿ.ರಘುಮೂರ್ತಿ ಮೆರವಣಿಗೆ ಮುಗಿಯುವ ತನಕ ಪಾಲ್ಗೊಂಡರು. ನೂರಾರು ಭಕ್ತರು ಸಿಡಿ ಏರಿ ತಮ್ಮ ಹರಿಕೆ ಈಡೇರಿಸಿಕೊಂಡರು. ಮುಕ್ತಿಬಾವುಟವನ್ನು ಸುಧಾಕರ್ ಎಂಬುವವರ ೨೫ ಸಾವಿರಕ್ಕೆ ಹರಾಜಿನಲ್ಲಿ ಪಡೆದುಕೊಂಡರು. ಡಿವೈಎಸ್ಪಿ ರಾಜಣ್ಣ, ಠಾಣಾ ಇನ್ಸ್‌ಪೆಕ್ಟರ್ ಕೆ.ಕುಮಾರ್ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.