ಸಾರಾಂಶ
ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮಕ್ಕೆ ಗುರುವಾರ ಆಗಮಿಸಿದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥಕ್ಕೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು.
ಕನ್ನಡಪ್ರಭ ವಾರ್ತೆ ಯಳಂದೂರು
ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಚರಿಸುತ್ತಿರುವ ರಥವನ್ನು ಗುರುವಾರ ತಾಲೂಕಿನ ಮಾಂಬಳ್ಳಿ ಗ್ರಾಮದ ಬಳಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.ಮಾಂಬಳ್ಳಿ ಗ್ರಾಪಂ ಅಧ್ಯಕ್ಷ ಮಲ್ಲೇಶ್ ನೇತೃತ್ವದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮುಬಾರಕ್ ಉನ್ನೀಸಾ ಹಾಗೂ ಸದಸ್ಯರು, ಶಾಲಾ ಶಿಕ್ಷಕರು, ಮಕ್ಕಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕನ್ನಡಪರ ಸಂಘಟನೆಗಳ ಸದಸ್ಯರು, ಅನೇಕ ಗ್ರಾಮಸ್ಥರು ರಥಕ್ಕೆ ಹೂವನ್ನು ಅರ್ಪಿಸಿ, ಇಲ್ಲಿರುವ ಕನ್ನಡಾಂಬೆಗೆ ಹಾರ ತುರಾಯಿಗಳನ್ನು ಹಾಕಿ ಸ್ವಾಗತ ಕೋರಿದರು. ಗ್ರಾಪಂ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಕನ್ನಡ, ನಾಡು, ಭಾಷೆ ನಮ್ಮ ಅಸ್ಮಿತೆಯಾಗಿದೆ. ನಾಡು ನುಡಿಯನ್ನು ಕಟ್ಟಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲೂ ಇದೆ. ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಐತಿಹ್ಯವಿದ್ದು ಇದನ್ನು ಉಳಿಸಿ, ಬೆಳೆಸುವಂತೆ ಎಲ್ಲರೂ ಶಪಥ ಮಾಡಬೇಕು ಎಂದರು.ಎಲ್ಲರೂ ಸಾಹಿತ್ಯ ಜಾತ್ರೆಗೆ ಬನ್ನಿ:
ತಾಲೂಕು ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಮಾತನಾಡಿ, ಡಿ.೨೦,೨೧,೨೨ ರಂದು ಮೂರು ದಿನಗಳ ಕಾಲ ಮಂಡ್ಯದಲ್ಲಿ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅವಿಭಜಿತ ಮೈಸೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಇಲ್ಲಿಗೆ ನಮ್ಮ ಜಿಲ್ಲೆ ಹಾಗೂ ತಾಲೂಕಿನಿಂದ ಹೆಚ್ಚು ಜನರು ಭಾಗವಹಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕನ್ನಡ ರಥವು ಎಲ್ಲೆಡೆ ಸಾಗುತ್ತಿದೆ. ಈ ಸಮ್ಮೇಳನದಲ್ಲಿ ಅನೇಕ ವಿಚಾರ ಗೋಷ್ಠಿಗಳು, ಕವಿಗೋಷ್ಠಿಗಳು ಸೇರಿದಂತೆ ಅನೇಕ ವಿಚಾರ ಮಂಥನಗಳು ನಡೆಯಲಿದೆ. ಈ ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆಗಳು, ಖಾದಿ ಮಾರಾಟ ಮಳಿಗೆಗಳು ಸೇರಿದಂತೆ ಭಾಷೆ, ನಾಡು, ನುಡಿ ಪ್ರತಿಬಿಂಬಿಸುವ ಅನೇಕ ಮಳಿಗೆಗಳು, ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಮೂರು ದಿನಗಳ ಕಾಲ ಇಂತಹ ಒಂದು ದೊಡ್ಡ ಕನ್ನಡ ಸಾಹಿತ್ಯ ಕಾರ್ಯಕ್ರಮ ನಡೆಯಲಿದ್ದು ಇದಕ್ಕೆ ಪ್ರತಿ ಗ್ರಾಮಗಳಿಂದಲೂ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ತಪ್ಪದೆ ಹಾಜರಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು. ಕನ್ನಡ ರಥಕ್ಕೆ ಅಗರ, ಮದ್ದೂರು, ಯರಿಯೂರು, ಅಂಬಳೆ, ದುಗ್ಗಹಟ್ಟಿ ಗ್ರಾಪಂ ಹಾಗೂ ಯಳಂದೂರು ಪಪಂಗಳಿಂದ ಸ್ವಾಗತ ಕೋರಲಾಯಿತು. ನಂತರ ಮೆಳ್ಳಹಳ್ಳಿ ಗೇಟ್ ಬಳಿ ಇದಕ್ಕೆ ಬೀಳ್ಕೂಡುಗೆ ನೀಡಲಾಯಿತು. ಗ್ರೇಡ್ ೨ ತಹಸೀಲ್ದಾರ್ ಶಿವರಾಜು, ಪಿಡಿಒ ಉಷಾರಾಣಿ ಗ್ರಾಪಂ ಸದಸ್ಯೆ ಲಕ್ಷ್ಮಿರಾಮು, ಲಿಂಗರಾಜು, ಪಪಂ ನಾಮ ನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ ಕಸಾಪ ಕಾರ್ಯದರ್ಶಿ ಡಿ.ಪಿ.ಮಹೇಶ್ ಕೋಶಾಧ್ಯಕ್ಷ ಫೈರೋಜ್ ಖಾನ್ ಸೇರಿದಂತೆ ಅನೇಕರು ಹಾಜರಿದ್ದರು.