ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಬುಧವಾರ ಗಣೇಶ ಚತುರ್ಥಿ ಹಬ್ಬವು ಅದ್ಧೂರಿಯಾಗಿ ಆಚರಣೆಗೊಂಡಿತು. ಮನೆಗಳಲ್ಲಿ ಜನರು ಚಿಕ್ಕದಾದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ, ಮೋದಕ, ಕಡಬು, ಹೋಳಿಗೆ ಸೇರಿ ಇತರೆ ಸಿಹಿ ತಿನಿಸು ನೈವೇದ್ಯ ನೀಡಿ ಭಕ್ತಿ ಸಮರ್ಪಿಸಿದರು.ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟಾರೆ 153 ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಿದ್ದು, ಪಟ್ಟಣದಲ್ಲಿ 66, ಗ್ರಾಮೀಣ ಪ್ರದೇಶಗಳಲ್ಲಿ 87 ಗಣಪತಿ ಸ್ಥಾಪಿಸಲಾಗಿದೆ. ಪಟ್ಟಣದಲ್ಲಿ ಹಿಂದೂ ಮಹಾ ಮಂಡಳಿಯ ರಾಜಾಸನ ಗಣಪತಿ, ಶ್ರೀಸಿದ್ಧಿ ವಿನಾಯಕ ಉತ್ಸವ ಸಮಿತಿಯ ಪುರಿ ಜಗನ್ನಾಥ ಗಣಪತಿ, ಲಯನ್ಸ್ ಗ್ರೂಪಿನ ಕಾಳಿಮಾತಾ ಗಣಪತಿ, ವೀರ ಕಂಪಿಲರಾಯ ವಿನಾಯಕ ಮಂಡಳಿಯ ಕಂಪ್ಲಿ ವೀರರಾಯಗಣಪತಿ, ಭಗತ್‌ಸಿಂಗ್ ಬಾಯ್ಸ್‌ನ ಅಂಜನಾದ್ರಿ ಗಣಪತಿ, ಎವರ್ ಗ್ರೀನ್ ಫ್ರೆಂಡ್ಸ್‌ನ ಮಹಾರಾಜ ಗಣಪತಿ, ಎಸ್.ಎನ್. ಪೇಟೆ ಬಾಯ್ಸ್ ಪ್ರತಿಷ್ಠಾಪಿಸಿದ 2025ರ ಆರ್‌ಸಿಬಿ ಕಪ್ ಎತ್ತಿ ಹಿಡಿದ ಗಣಪತಿ, ಮಡ್ಡಿಕಟ್ಟೆಯ ಶಿವ ಗಜಾನನ ಯುವಕ ಮಂಡಳಿಯ ಸುಖಾಸೀನ ಗಣಪತಿ, ಸರಾಫ್ ವರ್ತಕರ ಮತ್ತು ಕೆಲಸಗಾರರ ಸಂಘದ ಮಹಾರಾಜ ಗಣಪತಿ, ಹಿಂದೂ ಸಾಮ್ರಾಟ್ ಗಣಪತಿ ಮಂಡಳಿಯ ಗಜಮುಖ ಗಣಪತಿ, ಅಂಬೇಡ್ಕರ್ ಯುವಕ ಮಂಡಳಿಯ ಶಿವ ತಾಂಡವ ಗಣಪತಿ, ಹಾರ್ಟ್ಬೀಟ್ ಗ್ರೂಫಿನ ರಥರೂಢ ಛದ್ಮವೇಷಧಾರಿ ಗಣಪತಿಗಳು ಸೇರಿ ಮುಂತಾದ ವೈವಿಧ್ಯಮಯ, 3 ರಿಂದ 15 ಅಡಿಯವರೆಗಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ನೋಡುಗರ ಕಣ್ಣು ತಣಿಸುವಂತಿವೆ.
ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿರುವ ರಸ್ತೆಗಳು:ಗಣೇಶ ಚತುರ್ಥಿಯ ನಿಮಿತ್ತ ವಿವಿಧ ಗಣೇಶ ಮಂಡಳಿಯವರು ರಸ್ತೆಗಳ ಬಳಿ, ದೇವಸ್ಥಾನಗಳ ಬಳಿ ಸೇರಿ ಪಟ್ಟಣದೆಲ್ಲೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಜನರನ್ನು ಗಣೇಶನತ್ತ ಸೆಳೆಯಲು ವಿವಿಧ ರೀತಿಯ ಆಕರ್ಷಕ ವಿದ್ಯುತ್ ದೀಪಗಳನ್ನು ಪೆಂಡಾಲ್‌ಗಳಿಗೆ ಹಾಗೂ ರಸ್ತೆಯುದ್ದಕ್ಕೂ ಅಳವಡಿಸಿದ್ದು ಸಂಜೆಯಾಗುತ್ತಿದ್ದಂತೆ ರಸ್ತೆಗಳು ಜಗಮಗಿಸುತ್ತಿವೆ. ಅಲ್ಲದೇ ಪಟ್ಟಣದೆಲ್ಲೆಡೆ ಹಬ್ಬದ ಕಳೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಗಣೇಶ ವಿಸರ್ಜನೆಗೆ ಭರದ ಸಿದ್ಧತೆ:ಪಟ್ಟಣದ ಪ್ರತಿಯೊಂದು ಬೀದಿ-ಬೀದಿಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, 3 ರಿಂದ 13 ದಿನದ ವರೆಗೂ ಗಣೇಶ ವಿಸರ್ಜನೆ ಮೆರವಣಿಗೆ ಜರುಗಲಿವೆ. ಇಲ್ಲಿನ ಹಿಂದೂ ಮಹಾಮಂಡಳಿ, ಲಯನ್ಸ್ ಗ್ರೂಪ್, ವೀರ ಕಂಪಿಲರಾಯ ವಿನಾಯಕ ಮಂಡಳಿ ಸೇರಿದಂತೆ ವಿವಿಧ ಗಣೇಶ ಮಂಡಳಿಯವರು ಗಣೇಶ ವಿಸರ್ಜನೆ ದಿನದಂದು ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿನ ಕಲಾ ತಂಡಗಳ ಮೂಲಕ ಗಣೇಶ ವಿಸರ್ಜನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.