ಸಾರಾಂಶ
ಮಾಗಡಿ: ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಮಾಗಡಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ತಾಲೂಕಿನ ಗಣ್ಯರು, ಶಾಲಾ ಮಕ್ಕಳು ಅದ್ಧೂರಿ ಸ್ವಾಗತ ಕೋರಿದರು.
‘ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ’ ಧ್ಯೇಯ ವಾಕ್ಯದ ಕನ್ನಡ ರಥಯಾತ್ರೆ ಮಾಗಡಿ ತಾಲೂಕಿನ ಗಡಿ ಭಾಗ ಶಾನುಭೋಗನಹಳ್ಳಿ ಗ್ರಾಮದಲ್ಲಿ ಕನ್ನಡ ರಥವನ್ನು ಸ್ವಾಗತಿಸಿದ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಆರತಿ ಬೆಳಗಿ ಹಂಪಿ ಮಾದರಿಯ ಕಲ್ಲಿನ ರಥಕ್ಕೆ ಸ್ವಾಗತ ಕೋರಿದರು.ಬಳಿಕ ರಥ ಬೆಂಗಳೂರು ರಸ್ತೆಯ ತಿರುಮಲೆಯ ಪ್ರವೇಶ ದ್ವಾರಕ್ಕೆ ಆಗಮಿಸಿತು. ಜನಪದ ಕಲಾತಂಡಗಳೊಂದಿಗೆ ತಿರುಮಲೆ ರಂಗನಾಥಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಪೂಜೆ ಸ್ಪೀಕರಿಸಿ ರಥೋತ್ಸವ ನಡೆಯುವ ರಥ ಬೀದಿಯಲ್ಲಿ ಒಂದು ಸುತ್ತು ಹಾಕಿ ಎನ್ಇಎಸ್ ಬಡಾವಣೆ ಮೂಲಕ ಮಾಗಡಿ ಪಟ್ಟಣವನ್ನು ಪ್ರವೇಶಿಸಿತು.
ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ಶರತ್ ಕುಮಾರ್, ಕನ್ನಡ ಭಾಷೆ ಪ್ರೇಮ ನಾಡು ಜಲ ವಿಚಾರ ಬಂದಾಗ ಕನ್ನಡಿಗರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜತೆಗೆ ಕನ್ನಡ ಪ್ರೇಮವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪೋಷಕರು ಇಂಗ್ಲಿಷ್ ವ್ಯಾಮೋಹದ ಜತೆಗೆ ಕನ್ನಡವನ್ನು ಮಕ್ಕಳಿಗೆ ಕಲಿಸುವ ಕೆಲಸ ಆಗಬೇಕಿದೆ. ಕನ್ನಡಕ್ಕೆ ಹೆಚ್ಚು ಜ್ಞಾನಪೀಠ ಬಂದಿರುವ ಭಾಷೆಯಾಗಿದ್ದು ಕನ್ನಡ ಭಾಷೆಗೆ ಗೌರವ ಕೊಡುವ ಕೆಲಸವನ್ನು ಆಗಬೇಕಿದೆ. ಇಂಗ್ಲಿಷ್ ಜತೆಗೆ ಕನ್ನಡ ಭಾಷೆಗೂ ಮೊದಲ ಆದ್ಯತೆ ನೀಡಬೇಕಿದೆ. ರಥೋತ್ಸವಕ್ಕೆ ಪ್ರತಿಯೊಬ್ಬ ಕನ್ನಡಿಗರು ಗೌರವ ಕೊಡುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.ಹಿರಿಯ ಸಂಶೋಧಕರಾದ ಮುನಿರಾಜಪ್ಪ ಮಾತನಾಡಿ, ಪಂಪ ರನ್ನ, ಕುಮಾರವ್ಯಾಸ ಹಾಗೂ ಅನೇಕ ಕನ್ನಡ ಕವಿ ಕೋಗಿಲೆಗಳು ಬಿಟ್ಟು ಹೋಗಿರುವ ಕನ್ನಡದ ಅಮೂಲ್ಯ ಗ್ರಂಥಗಳನ್ನು ಓದಿ ಕನ್ನಡ ಭಾಷೆಯನ್ನು ಉಳಿಸುವ ಕೆಲಸ ಮಾಡಬೇಕಿದೆ. ಕನ್ನಡಕ್ಕೆ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು ಕನ್ನಡ ಭಾಷೆಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಪದ್ಯಕ್ಷ ತಿ.ನಾ.ಪದ್ಮನಾಭ ಮಾತನಾಡಿ, ನಾಡಪ್ರಭು ಕೆಂಪೇಗೌಡರು ವಿಜಯನಗರದ ಸಾಮಂತ ರಾಜರಾಗಿದ್ದರು. ಅವರ ಆಳ್ವಿಕೆ ಪ್ರದೇಶದಲ್ಲಿ ಇಂದು ವಿಜಯನಗರದ ಈ ವಿರೂಪಾಕ್ಷ ಸನ್ನಿಧಿಯಿಂದ ವಿವಿಧ ತಾಲೂಕುಗಳ ಮೂಲಕ ಸಂಚಾರ ಮಾಡುತ್ತ ಆಗಮಿಸಿರುವ ರಥ ಮಾಗಡಿ ತಾಲೂಕಿನಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಮತ್ತು ನಾಡಪ್ರಭು ಕೆಂಪೇಗೌಡರ ಕಾಲದ ಭಾವನಾತ್ಮಕ ನೆನಪುಗಳನ್ನು ನೆನಪಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.ವಿದ್ವಾಂಸ ನಂಜುಂಡಯ್ಯ ಮಾತನಾಡಿ, ಕನ್ನಡಿಗರಿಗೆ ಉದ್ಯೋಗ ಮತ್ತು ಕನ್ನಡಿಗರಿಗೆ ಭವಿಷ್ಯದಲ್ಲಿ ಸರ್ಕಾರಗಳು ಸೌಲಭ್ಯವನ್ನು ಕೊಡುವ ಕೆಲಸವನ್ನು ಮಾಡಬೇಕು ಎಂದರು.
ಮೆರವಣಿಗೆ:ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಪ್ರದೇಶದಲ್ಲಿ ಹಂಪಿಯ ರಥ ಸಾಗುತ್ತಿತ್ತು ಶಾಲಾ ವಿದ್ಯಾರ್ಥಿಗಳು ಕನ್ನಡ ಪ್ರೇಮಿಗಳು ರಥವನ್ನು ಗೌರವಹಿತವಾಗಿ ಸ್ವಾಗತಿಸಿ ಮೆರವಣಿಗೆಯಲ್ಲಿ ಪ್ರಾಥಮಿಕ ಶಾಲೆ ಪ್ರೌಢಶಾಲಾ ಅಂಕಾಲೇಜು ವಿದ್ಯಾರ್ಥಿಗಳು ಮತ್ತು ಹೆಗಲ ಮೇಲೆ ಕನ್ನಡ ಶಾಲು ಹಾಕಿಕೊಂಡು ಹೆಜ್ಜೆ ಹಾಕಿದರು. ಚಿಲಿಪಿಲಿ ಬೊಂಬೆ ಪೂಜಾ ಕುಣಿತ, ಡೊಳ್ಳು ಕುಣಿತ ಜೊತೆಗೆ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಕರಡಿ ಕುಣಿತ ಮುಂತಾದ ಜಾನಪದ ನೃತ್ಯಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ತಾಪಂ ಇಒ ಜಯಪಾಲ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್, ಗ್ರೇಡ್ ೨ ತಹಸೀಲ್ದಾರ್ ಪ್ರಭಾಕರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೈಪಾಲ್, ಪುರಸಭಾ ಮುಖ್ಯ ಅಧಿಕಾರಿ ಶಿವರುದ್ರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುರೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯದರ್ಶಿ ನಾರಾಯಣ್, ಇಸಿಒ ಗಂಗಾಧರ್, ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಅಭಿಷೇಕ್, ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಗಂಗಾಧರ್, ಶ್ರೀಪತಿಹಳ್ಳಿ ರಾಜಣ್ಣ, ಮಹಾಂತೇಶ್, ತಾಲೂಕು ಪಂಚಾಯಿತಿಯ ಮಾಜಿ ಸದಸ್ಯ ಸಿ.ಜಯರಾಮ, ತೋಟದ ಮನೆಗೆ ಗಿರೀಶ್, ಕನ್ನಡ ಹೋರಾಟಗಾರ ಬಸವರಾಜು, ಹುಳ್ಳೇನಹಳ್ಳಿ ರೇಣುಕಮ್ಮ ಟ್ರಸ್ಟ್ ಎಚ್.ಆರ್ ಮಂಜುನಾಥ್ ಭಾಗವಹಿಸಿದ್ದರು.ಫೋಟೋ:
ಮಾಗಡಿಯ ತಿರುಮಲೆ ರಂಗನಾಥ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಹಸೀಲ್ದಾರ್ ಶರತ್ ಕುಮಾರ್ ಹಾಗೂ ಶಾಲಾ ಮಕ್ಕಳು ಅದ್ಧೂರಿ ಸ್ವಾಗತ ಕೋರಿದರು.