ಬೆಂಡೋಣಿಯಲ್ಲಿ ಯಂತ್ರದಿಂದ ಭತ್ತದ ನಾಟಿ

| Published : Aug 14 2024, 12:48 AM IST

ಸಾರಾಂಶ

ಲಿಂಗಸುಗೂರು ತಾಲೂಕಿನ ಬೆಂಡೋಣಿಯಲ್ಲಿ ಯಂತ್ರದಿಂದ ಭತ್ತದ ನಾಟಿ ಮಾಡುತ್ತಿರುವ ರೈತರು.

ಧರ್ಮಸ್ಥಳ ಟ್ರಸ್ಟ್‌ನ ಕೃಷಿ ಯಂತ್ರಧಾರೆ ಬಾಡಿಗೆಗೆ ಸೌಲಭ್ಯ । ಎಕೆರೆಗೆ ₹1,950 ನಿಗದಿ

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕೃಷಿ ವಲಯದಲ್ಲಿ ಕೂಲಿಕಾರರ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದು, ಇದರಿಂದ ನಾರಾಯಣಪುರ ಬಲದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಯಂತ್ರದ ಸಹಾಯದಿಂದ ಭತ್ತದ ನಾಟಿ ಮಾಡುತ್ತಿದ್ದು ಕಲ್ಯಾಣ ನಾಡಿನಲ್ಲಿ ಹೊಸ ಅವಿಷ್ಕಾರವಾಗಿದೆ.

ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನ ಕೃಷಿ ಯಂತ್ರಧಾರೆ ಘಟಕದ ಯಂತ್ರದಿಂದ ಬತ್ತ ನಾಟಿ ಯಂತ್ರ ಬಾಡಿಗೆಗೆ ನೀಡಲಾಗುತ್ತಿದೆ. ಯಂತ್ರದಿಂದ ಭತ್ತದ ನಾಟಿ ಮಾಡಲು ಗಂಟೆಗೆ ₹1,950 ಬಾಡಿಗೆ ಇದ್ದು 40-50 ನಿಮಿಷದಲ್ಲಿ ಒಂದು ಎಕರೆ ಜಮೀನು ನಾಟಿ ಮಾಡುತ್ತದೆ. ಯಂತ್ರದಿಂದ ನಾಟಿ ಮಾಡಲು ಸಸಿ ಬೆಳೆಸುವ ಮಾದರಿ ಬದಲಿಸಬೇಕಿದೆ. ಎಕರೆಗೆ 12 ರಿಂದ 15 ಕೆಜಿ ಯಷ್ಟು ಬಿತ್ತನೆ ಬೀಜ ಸಾಕಾಗುತ್ತದೆ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯ ಜೊತೆಗೆ ಕೂಲಿಕಾರರ ತೊಂದರೆ ನಿಗಸಿಕೊಂಡು ಸಕಾಲದಲ್ಲಿ ಭತ್ತದ ನಾಟಿ ಮಾಡಲು ಅನುಕೂಲ ಆಗುತ್ತದೆ.

ಕೂಲಿಕಾರರಿಗೆ ಎಕರೆ ಭತ್ತದ ನಾಟಿಗೆ ₹ 4,000 ನೀಡಬೇಕು ಜೊತೆಗೆ ಕೂಲಿಕಾರರು ಬರುವ ವಾಹನದ ಬಾಡಿಗೆ ಪ್ರತ್ಯೇಕವಾಗಿ ಭರಿಸಬೇಕು. ಆದರೆ ಈ ಯಂತ್ರದಿಂದ ನಾಟಿ ಮಾಡಲು ಎಕರೆಗೆ ₹1,500 ಖರ್ಚಾಗುತ್ತದೆ. ಯಂತ್ರದಿಂದ ನಾಟಿ ಮಾಡಿದರೆ ಇದರಿಂದ ಹಣ, ಸಮಯದ ಜೊತೆಗೆ ಅಧಿಕ ಇಳುವರಿ ಪಡೆಯಬಹುದಾಗಿದೆ.

ಕಡಿಮೆ ಖರ್ಚು, ಇಳುವರಿ ಜಾಸ್ತಿ: ಯಂತ್ರದಿಂದ ಭತ್ತದ ನಾಟಿ ಮಾಡಿದರೆ ಖರ್ಚು ಕಡಿಮೆಯಾಗುವ ಜೊತೆಗೆ ಇಳುವರಿ ಹೆಚ್ಚಾಗುತ್ತದೆ. ಇದರ ಜೊತೆಗೆ ಬಿತ್ತನೆ ಬೀಜವು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವುದಿಲ್ಲ. ಕಡಿಮೆ ಅವದಿಯಲ್ಲಿ ಹೆಚ್ಚಿನ ಜಮೀನು ನಾಟಿ ಮಾಡಬಹುದಾಗಿದೆ. ಕೃಷಿಕ್ಷೇತ್ರದಲ್ಲಿ ತೀವ್ರವಾದ ಕೂಲಿಕಾರರ ಸಮಸ್ಯೆ ಇದೆ. ಇದರಿಂದ ರೈತರಿಗೆ ಭತ್ತದ ನಾಟಿ ಯಂತ್ರ ಸಹಾಯಕವಾಗುತ್ತದೆ ಎಂದು ರಾಯಚೂರು ಕರ್ನಾಟಕ ರಾಜ್ಯ ರೈತ ಸಂಘಗ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ ತಿಳಿಸಿದ್ದಾರೆ.