ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯ ನವವಸಂತ ಪೂರೈಸಿದ ಸವಿನೆನಪಿಗಾಗಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಯುವ ಸಂಭ್ರಮ ಅದ್ಧೂರಿಯಾಗಿ ಮೂಡಿಬಂದಿತು. ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ನೃತ್ಯ ಮೋಹಕವಾಗಿತ್ತು. ರ್‍ಯಾಂಪ್‌ ಸಾಂಗ್ ಗಾಯಕ ಚಂದನ್‌ಶೆಟ್ಟಿ ಗಾಯನ, ಕಿಶನ್ ಕುಣಿತಕ್ಕೆ ಯುವಕ- ಯುವತಿಯರು ಫುಲ್ ಫಿದಾ ಆದರು.

ವಿಶ್ವವಿದ್ಯಾನಿಲಯ ವ್ಯಾಪ್ತಿಯ ೪೮ ಕಾಲೇಜುಗಳ ವಿದ್ಯಾರ್ಥಿಗಳು ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ೧೦ ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ಮಂಡ್ಯ ವಿವಿಯ ಲಿಖಿತಾ ತಂಡದಿಂದ ಜನಪದ ಗೀತೆ, ಪಿಇಎಸ್ ಕಾಲೇಜಿನ ಕಾರ್ತಿಕ್‌ ಕುಮಾರ್‌ರಿಂದ ಭರತನಾಟ್ಯ, ಚಿನಕುರಳಿ ಎಸ್‌ಟಿಜಿ ಪ್ರಥಮದರ್ಜೆ ಕಾಲೇಜಿನ ತಂಡ ಶಿವನ ಸಮೂಹ ನೃತ್ಯ ಪ್ರಸ್ತುತಪಡಿಸಿ ಗಮನಸೆಳೆಯಿತು.

ಮಂಡ್ಯದ ಸಂತ ಜೋಸೆಫರ ಶಿಕ್ಷಣ ಮಹಾವಿದ್ಯಾಲಯ ವಿದ್ಯಾರ್ಥಿಗಳು ಜನಪದ ನೃತ್ಯ ಪ್ರದರ್ಶನ ಮಾಡಿದರೆ, ಕೆಆರ್‌ಎಸ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಷ್ಣು ಮತ್ತು ತಂಡದವರು ಸೋಲೋ ನೃತ್ಯ ಪ್ರದರ್ಶಿಸಿದರು. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಸಮೂಹ ನೃತ್ಯ ಪ್ರದರ್ಶನವನ್ನು ವಿದ್ಯಾರ್ಥಿಗಳು ಅಸ್ವಾದಿಸಿದರು.


ಕಿಶನ್ ಬೀಳಗಲಿ ತಂಡದ ನೃತ್ಯ ಪ್ರದರ್ಶನ ಮತ್ತು ಚಂದನ್ ಶೆಟ್ಟಿ ತಂಡದ ರ್‍ಯಾಂಪ್ ಗಾಯನದಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಬಿಸಿಲಿನ ಬೇಗೆಯ ನಡುವೆಯೂ ಸಹಸ್ರಾರು ವಿದ್ಯಾರ್ಥಿಗಳು ಯುವ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸವಿದರು.

ಕಾಲೇಜಿನ ಪ್ರವೇಶದ್ವಾರ ಉದ್ಘಾಟಿಸಿ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಎನ್.ಚಲುವರಾಯಸ್ವಾಮಿ ಅವರು, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಉದಾಸೀನ ತೋರದೆ ಗಂಭೀರವಾಗಿ ಓದಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು. ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತರ ಭಾರತದವರೇ ಐಎಎಸ್, ಐಪಿಎಸ್, ಐಆರ್‌ಎಸ್ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದರು. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕೋಲಾರದವರೇ ಮುಂದಿದ್ದರು. ಇದೀಗ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಮಂಡ್ಯ ಜಿಲ್ಲೆಯ ಯುವಕರು ಸಾಧನೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಡಾ. ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ. ಶೋಭಾರಾಣಿ, ಮಂಡ್ಯ ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ, ಕುಲಸಚಿವ ಕೃಷ್ಣಕುಮಾರ್, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಂಡ್ಯ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸಚಿನ್ ಚೆಲುವರಾಯಸ್ವಾಮಿ, ವಿಜಯಲಕ್ಷ್ಮೀ ರಘುನಂದನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

-----

ಮಂಡ್ಯ ವಿವಿ ಮುಚ್ಚಿದರೆ ಬೆಂಕಿ ಹಾಕುತ್ತೇವೆ: ಶಾಸಕ ರವಿಕುಮಾರ್

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚಿದರೆ ಬೆಂಕಿ ಹಚ್ಚುತ್ತೇವೆ, ಮಂಡ್ಯದಲ್ಲಿ ಸಚಿವರನ್ನು ಓಡಾಡಲು ಬಿಡುವುದಿಲ್ಲ ಎಂದು ಶಾಸಕ ಪಿ.ರವಿಕುಮಾರ್ ಎಚ್ಚರಿಕೆ ನೀಡಿದರು.

೨೦೧೯ರಲ್ಲಿ ರಾಜ್ಯದಲ್ಲಿ ೮ ವಿವಿಗಳನ್ನು ಸ್ಥಾಪಿಸಲಾಯಿತು, ಈ ಪೈಕಿ ಮಂಡ್ಯ ವಿವಿ ಕೂಡ ಒಂದಾಗಿತ್ತು. ಕಾರಣಾಂತರಗಳಿಂದ ಮಂಡ್ಯ ವಿವಿಯನ್ನು ಮುಚ್ಚಲು ಸರ್ಕಾರ ಮುಂದಾಯಿತು. ಯಾವುದೇ ಕಾರಣಕ್ಕೂ ಮಂಡ್ಯ ವಿವಿಯನ್ನು ಮುಚ್ಚದಂತೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಿದ್ದೇನೆ. ಮಂಡ್ಯ ವಿವಿಯನ್ನು ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗುಡುಗಿದರು.

ರಾಜ್ಯದಲ್ಲಿ ಎಲ್ಲೂ ಇರದ ಆ್ಯಪಲ್ ಲ್ಯಾಬ್‌ನ್ನು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. ಇನ್ನು ೬ ತಿಂಗಳಿನಲ್ಲಿ ₹೨ ಕೋಟಿ ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು. ಉತ್ತಮ ಕ್ಯಾಂಟೀನ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸಲಾಗುವುದು ಹಾಗೂ ₹೪ ಕೋಟಿ ಅನುದಾನದಲ್ಲಿ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.