ವಿಶ್ವಗುರು ಬಸವಣ್ಣ ಮತ್ತು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾಪುರುಷರ ಸಮಾನತೆಯ ತತ್ವಗಳನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಬೀದರ್
ಕನಕದಾಸರು ತಮ್ಮ ಕೀರ್ತನೆಗಳು, ಮುಂಡಿಗೆಗಳು ಮತ್ತು ಸಾಹಿತ್ಯದ ಮೂಲಕ ಸಮಾಜದಲ್ಲಿದ್ದ ಜಾತಿ, ಮತ, ಬೇಧ-ಭಾವಗಳನ್ನು ಹೋಗಲಾಡಿಸಿ, ಸಮಾ ನತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭಕ್ತ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದ ಕನಕದಾಸರ ಮಾನವೀಯ ಮೌಲ್ಯಗಳು ಹಾಗೂ ಆದರ್ಶ ತತ್ವಗಳನ್ನು ಪ್ರತಿ ಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವ ನೆಲೆಸಲು ಸಾಧ್ಯವಾಗುತ್ತದೆ ಎಂದರು.
ದೇವರು ಜಾತಿ ಅಥವಾ ಧರ್ಮವನ್ನು ನೋಡದೆ ಭಕ್ತಿಯನ್ನು ಮಾತ್ರ ನೋಡುತ್ತಾನೆ. ಪ್ರಾಣಿ - ಪಕ್ಷಿಗಳಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೂ, ಬುದ್ಧಿವಂತ ಎನಿಸಿಕೊಂಡ ಮನುಷ್ಯರಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳೆನ್ನದೆ ಇನ್ನೂ ಜಾತಿ ವ್ಯವಸ್ಥೆ ಜೀವಂತವಾಗಿರುವುದು ವಿಷಾದನೀಯ. ವಿಶ್ವಗುರು ಬಸವಣ್ಣ ಮತ್ತು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾಪುರುಷರ ಸಮಾನತೆಯ ತತ್ವಗಳನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೆ ನಿತ್ಯ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.ಶಾಸಕರಾದ ರಹೀಂ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ-ಧರ್ಮದ ಆಧಾರದ ಮೇಲೆ ಕೆಲಸ ಮಾಡದೆ ಎಲ್ಲರೂ ಸಮಾನರು ಎಂಬ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ನಮಗೂ ಮತ್ತು ಸಮಾಜಕ್ಕೂ ಒಳಿತಾಗುತ್ತದೆ. ಕನಕದಾಸರ ಮಾನವೀಯ ಮೌಲ್ಯಗಳು ಹಾಗೂ ತತ್ವಗಳನ್ನು ಪ್ರತಿಯೊಬ್ಬರೂ ಜೀವನ ದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ರವೀಂದ್ರ ಲಂಜವಾಡಕರ ಅವರು ಕನಕದಾಸರು ತಮ್ಮ ಹರಿಭಕ್ತಿಯ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡಿದರು ಎಂದರು. ದೇವರನ್ನು ಒಲಿಸಲು ಜಾತಿ ಮುಖ್ಯವಲ್ಲ. ಭಕ್ತಿ ಮುಖ್ಯ ಎಂಬ ಸಂದೇಶದೊಂದಿಗೆ ತಮ್ಮ ಭಕ್ತಿಯ ಮೂಲಕ ಕೃಷ್ಣನನ್ನೆ ತನ್ನತ ಸೆಳೆದ ಶ್ರೇಷ್ಠ ಸಂತ ಕನಕದಾಸರು ಎಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ ಚಿಮ್ಮಕೊಡೆ, ಬುಡಾ ಅಧ್ಯಕ್ಷ ವಿನೋದ ಕುಮಾರ ಅಪ್ಪೆ, ಅಪರ ಜಿಲ್ಲಾಧಿಕಾರಿ ಸುರೇಖಾ ಕೆ., ಜಿ.ಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಸಮಾಜದ ಮುಖಂಡರಾದ ಬಾಬುರಾವ್ ಮಲ್ಕಾಪೂರೆ, ಪಂಡಿತ ಚಿದ್ರಿ, ಮಲ್ಲಿಕಾರ್ಜುನ ಬಿರಾದಾರ, ಸಚಿನ್ ಮಲ್ಕಪೂರೆ, ಮಾಳಪ್ಪಾ ಅಡಸಾರೆ, ಸಂತೋಷ ಜೋಳದಾಪಕೆ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಗರದ ಬೊಮ್ಮ ಗೊಂಡೇಶ್ವರ ವೃತ್ತದಿಂದ ರಂಗಮಂದಿರವರೆಗೆ ನಡೆದ ಭಾವಚಿತ್ರದ ಮೆರವಣಿಗೆಯಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ, ಶಾಸಕ ರಹೀಂ ಖಾನ್ ಸೇರಿದಂತೆ ಸಮಾಜದ ಅನೇಕ ಪ್ರಮುಖರು ಕುಣಿದು ಕುಪ್ಪಳಿಸಿದರು.
ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿದ ಸಂತ:ಕಮಲನಗರ: ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತವಾದ ಭಕ್ತರಲ್ಲ, ಅವರು ಇಡೀ ಮನುಕುಲಕ್ಕೆ ಬೇಕಾದ ದಾರ್ಶನಿಕರು. 15-16ನೇ ಶತಮಾನದಲ್ಲೇ ಸಮಾಜ ದಲ್ಲಿದ್ದ ಜಾತಿ ವ್ಯವಸ್ಥೆ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಸಮರ ಸಾರಿದ ಮಹಾನ್ ಸಂತ ಎಂದು ತಹಶೀಲ್ದಾರ್ ರಮೇಶ ಪೆದ್ದೆ ಹೇಳಿದರು.ಕಮಲನಗರ ಪಟ್ಟಣದ ತಹಸೀಲ್ ಕಛೇರಿಯ ಸಭಾಂಗಣದಲ್ಲಿ ಶುಕ್ರವಾರ 539ನೇ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಕನಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಮುಖಂಡ ರವಿಚಂದ್ರ ಮಾತನಾಡಿ, ಕನಕದಾಸರು ಕೀರ್ತನೆ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಗೀತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ''ಮೋಹನತರಂಗಿಣಿ'', ''ನಳಚರಿತ್ರೆ'', ''ರಾಮಧಾನ್ಯ ಚರಿತೆ ಹಾಗೂ ಹರಿಭಕ್ತಿಸಾರ’ದಂತಹ ಶ್ರೇಷ್ಠ ಕಾವ್ಯಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ತಾಪಂ ಇಒ ಹಣಮಂತರಾಯ ಕೌಟಗೆ ಮಾತನಾಡಿ, ''ದಾಸಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು. ಇವರ ಜೀವನ ತತ್ತ್ವಗಳು ಇಂದಿನ ಪೀಳಿಗೆಗೆ ಮಾದರಿ ಎಂದರು. ಗ್ರಾಮದ ನರಸಿಂಗ ಮೇತ್ರೆ, ಜ್ಞಾನೇಶ್ವರ ಹಿಪ್ಪಳಗಾಂವ, ನರೇಶ ಹಿಪ್ಪಳಗಾಂವೆ, ಸತೀಷ ಭುರೆ, ಹಾಗೂ ತಹಶೀಲ ಕಚೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.ಜೆಡಿಎಸ್ ಕಚೇರಿಯಲ್ಲಿ ಕನಕದಾಸರ ಜಯಂತಿ:ಬೀದರ್: ನಗರದ ಜಿಲ್ಲಾ ಜೆ.ಡಿ.ಎಸ್. ಕಚೇರಿಯಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಮಾಜಿ ಸಚಿವರು ಜೆ.ಡಿ.ಎಸ್.ನ ಹಿರಿಯ ಮುಖಂಡರಾದ ಬಂಡೆಪ್ಪಾ ಖಾಶೆಂಪೂರ ಅವರು ಭಕ್ತ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಆಚರಣೆ ಮಾಡಿದರು.ಈ ಸಂದರ್ಭದಲ್ಲಿ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಕೀರ್ತನೆ, ಭಜನೆ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನಕದಾಸರ ಜೀವನ ಕೃತಿಗಳು ಮತ್ತು ಅವರ ಸಾಮಾಜಿಕ ಸಂದೇಶಗಳನ್ನು ಸ್ಮರಿಸಿ ಭಕ್ತಿ ಸಮಾನತೆ ಮತ್ತು ಮಾನವೀಯತೆಯ ಪಾಠ ಬೋಧಿಸಿದ ಕನಕದಾಸರ ಉಪದೇಶಗಳು ಇಂದಿಗೂ ಜನರಿಗೆ ಮಾರ್ಗದರ್ಶನವಾಗಿವೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ದೇವೇಂದ್ರ ಸೋನಿ, ಸುರೇಶ ಸೀಗಿ, ಬೊಮ್ಮಗೊಂಡ ಚಿಟ್ಟಾವಾಡಿ, ಲಲಿತಾ ಕರಂಜಿ, ಸಂಗಮ್ಮ ಪಾಟೀಲ, ಸಂಗಮೇಶ ಚಿದ್ರಿ, ಶಾಂತಮ್ಮಾ ಕರಕನಳ್ಳಿ, ಬಸವರಾಜ ಶಾಹಪುರ, ರವಿಕುಮಾರ ಸಿರ್ಸಿ, ಮೊಹ್ಮದ ಫಾರೂಕ ಅಲಿ, ರಾಜಕುಮಾರ ಕಮಠಾಣ, ಮನೋಹರ ದಂಡೆ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.